Budget 2022: ಬಜೆಟ್ 2022-23ರಲ್ಲಿ ಜನ ಸಾಮಾನ್ಯರಿಗೆ ಸಿಕ್ಕಿದ್ದೇನು?
ಬಜೆಟ್ 2022-23ರಲ್ಲಿ ಜನ ಸಾಮಾನ್ಯರಿಗೆ ದೊರೆತಿದ್ದೇನು ಎಂಬ ಬಗ್ಗೆ ಈ ಲೇಖನದಲ್ಲಿ ವಿವರಣೆ ಇದೆ. ಆದರೆ ಆದಾಯ ತೆರಿಗೆದಾರರಿಗೆ ಏನೇನೂ ದೊರೆತಿಲ್ಲ.
ಕೇಂದ್ರ ಹಣಕಾಸು ಸಚಿವೆ ಫೆಬ್ರವರಿ 1ನೇ ತಾರೀಕಿನಂದು ಬಜೆಟ್ (Union Budget) ಮಂಡಿಸುವ ವೇಳೆಯಲ್ಲಿ ನೇರ ತೆರಿಗೆ ಬಗ್ಗೆ ಪ್ರಸ್ತಾವ ಮಾಡುವ ಆರಂಭದಲ್ಲೇ ಹೇಳಿದ ಮಾತುಗಳು ಗಮನಿಸಿದ್ದೀರಾ? “ಈಗಿನ ತುಂಬ ಅಗತ್ಯದ ಸಂದರ್ಭದಲ್ಲಿ ಇತರ ನಾಗರಿಕರಿಗೆ ನೆರವಾಗುವುದಕ್ಕೆ ಸರ್ಕಾರದ ಕೈ ಬಲಪಡಿಸಿದ ಹಾಗೂ ಭಾರೀ ಕೊಡುಗೆ ನೀಡಿದ ನಮ್ಮ ದೇಶದ ತೆರಿಗೆದಾರರೆಲ್ಲರಿಗೆ ಧನ್ಯವಾದ ಹೇಳುವುದಕ್ಕೆ ಈ ಅವಕಾಶವನ್ನು ತೆಗೆದುಕೊಳ್ಳುತ್ತೇವೆ,” ಎಂದರು. ಆರಂಭದಲ್ಲಿ ಹೀಗೊಂದು ಧನ್ಯವಾದ ಹೇಳಿದ್ದನ್ನು ಹೊರತುಪಡಿಸಿದರೆ ಕೇಂದ್ರ ಬಜೆಟ್ 2022-23ರಲ್ಲಿ ಜನ ಸಾಮಾನ್ಯರಿಗೆ ಧನ್ಯವಾದ ಹೇಳುವಂಥ ಯಾವ ಕ್ರಮವೂ ಬಂದಿಲ್ಲ. ಹೇಗೆ ಅರ್ಧ ಲೋಟದಲ್ಲಿ ಇರುವ ನೀರು ನೋಡಿ, ನೆಗೆಟಿವ್ ಆಲೋಚನೆ ಮಾಡಬಾರದು ಎಂದು ಅದರಲ್ಲಿ ಏನು ಪಾಸಿಟಿವ್ ಇದೆಯೋ ಅದನ್ನು ಹುಡುಕುತ್ತೇವೋ, ಕಡೇ ಪಕ್ಷ ಹೊಸ ತೆರಿಗೆ ಹಾಕಿಲ್ಲ ಎಂದು ಸಂತೋಷ ಪಡಬೇಕು. ಇದರ ಜತೆಗೆ ತೆರಿಗೆದಾರರು ತಮ್ಮ ಆದಾಯವನ್ನು ಐ.ಟಿ. ರಿಟರ್ನ್ ಫೈಲಿಂಗ್ ವೇಳೆ ತಿಳಿಸುವುದು ಮರೆತಿದ್ದಲ್ಲಿ ಅದಕ್ಕಾಗಿ “ಅಪ್ಡೇಟೆಡ್ ರಿಟರ್ನ್ಸ್” ಮಾಡುವುದಕ್ಕೆ ಅವಕಾಶ ನೀಡುವ ಭರವಸೆ ದೊರೆತಿದೆ.
ಹೇಗೋ ತಪ್ಪಿ ಹೋಗಿ ಅಥವಾ ಲೆಕ್ಕಾಚಾರದಲ್ಲೇ ತಪ್ಪಾಗಿ ತೆರಿಗೆ ಪಾವತಿ ಮಾಡದಿದ್ದ್ಲಲ್ಲಿ “ಅಪ್ಡೇಟೆಡ್ ರಿಟರ್ನ್ಸ್” ಅನ್ನು ಆ ಅಸೆಸ್ಮೆಂಟ್ ವರ್ಷದ ಎರಡು ವರ್ಷದೊಳಗೆ ಮಾಡಬೇಕು. “ಸದ್ಯಕ್ಕೆ ಆದಾಯ ತೆರಿಗೆ ಇಲಾಖೆಯು ಕಂಡುಕೊಂಡಂತೆ ಕೆಲವು ಆದಾಯವನ್ನು ತೆರಿಗೆಪಾವತಿದಾರರು ಗಮನಕ್ಕೆ ತರುವುದನ್ನು ತಪ್ಪಿಸಿರುವುದು ತಿಳಿದುಬಂದಿದೆ. ಇದು ಕಾನೂನಿನ ಸುದೀರ್ಘ ಪ್ರಕ್ರಿಯೆಯ ಮೂಲಕ ಸಾಗಿ ಹೋಗುತ್ತದೆ. ಅದರ ಬದಲಿಗೆ ಈಗ ಈ ಹೊಸ ಪ್ರಸ್ತಾವದೊಂದಿಗೆ ತೆರಿಗೆ ಪಾವತಿದಾರರಲ್ಲಿ ವಿಶ್ವಾಸ ಮೂಡುತ್ತದೆ. ಈ ಹಿಂದೆ ತಪ್ಪಿಸಿರುವ ಆದಾಯ ಫೈಲಿಂಗ್ ರಿಟರ್ನ್ ಮಾಡದಿದ್ದಲ್ಲಿ ಅಪ್ಡೇಟೆಡ್ ರಿಟರ್ನ್ ಮಾಡಬಹುದು. ಪೂರ್ತಿಯಾದ ಪ್ರಸ್ತಾವವನ್ನು ಹಣಕಾಸು ಮಸೂದೆಯಲ್ಲಿ ನೀಡಲಾಗಿದೆ. ಸ್ವಯಂಪ್ರೇರಿತ ತೆರಿಗೆ ನಿಯಮಾವಳಿ ದಿಕ್ಕಿನ ಕಡೆಗೆ ದೃಢವಾದ ಹೆಜ್ಜೆಯಾಗಿದೆ,” ಎಂದು ಹಣಕಾಸು ಸಚಿವೆ ಹೇಳಿದ್ದಾರೆ.
ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗಿರುವುದರಿಂದ ಪ್ರಾಥಮಿಕ ವಿನಾಯಿತಿ ಮಿತಿ ಅಥವಾ ವೇತನದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಜಾಸ್ತಿ ಮಾಡಬಹುದು ಎಂಬ ನಿರೀಕ್ಷೆ ಇತ್ತು. ವಿನಾಯಿತಿ, ಭತ್ಯೆಯಲ್ಲಿ ಬಹಳ ಕಾಲದಿಂದಲೂ ಪರಿಷ್ಕೃತವಾಗಿಲ್ಲ. ಆದರೆ ಅವುಗಳ ಬಗ್ಗೆ ಏನೂ ಘೋಷಣೆ ಬಂದಿಲ್ಲ. “ವೈಯಕ್ತಿಕ ತೆರಿಗೆಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಹೆಚ್ಚಿನದನ್ನು ನೀಡಿಲ್ಲ. ಆದರೆ ಕೊವಿಡ್19 ಚಿಕಿತ್ಸೆಗಾಗಿ ವೆಚ್ಚಕ್ಕೆ ಹಣ ಪಡೆದಿರುವುದಕ್ಕೆ ರಿಲೀಫ್ ನೀಡಲಾಗಿದೆ. ಅದೇ ರೀತಿ ವ್ಯಕ್ತಿ ಮೃತಪಟ್ಟು ಕುಟುಂಬ ಸದಸ್ಯರು ಪಡೆಯುವ ಹಣಕ್ಕೆ 10 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಇದೆ,” ಎಂದು ತಜ್ಞರು ಹೇಳುತ್ತಾರೆ.
ಕೊವಿಡ್ ವೆಚ್ಚಕ್ಕಾಗಿ ಹಣ ಪಡೆದುಕೊಂಡಿದ್ದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ಪಡೆದ ಪರಿಹಾರಕ್ಕೆ (12 ತಿಂಗಳ ಒಳಗಾಗಿ ಪಡೆದ ರೂ. 10 ಲಕ್ಷದೊಳಗಿನ ಮೊತ್ತಕ್ಕೆ) ಪೂರ್ತಿಯಾಗಿ ತೆರಿಗೆಯಿಂದ ಮುಕ್ತವಾಗಿದೆ. 2020ರ ಏಪ್ರಿಲ್ 1ರಿಂದ ಅನ್ವಯ ಆಗಿದೆ. ಕೊವಿಡ್-19 ಸಂಬಂಧಿತ ಆಸ್ಪತ್ರೆ ಖರ್ಚುಗಳನ್ನು ಉದ್ಯೋಗದಾತರು ರೀಎಂಬರ್ಸ್ ಮಾಡಿದಲ್ಲಿ ಅಥವಾ ಉದ್ಯೋಗದಾತರು ನಿರ್ವಹಣೆ ಮಾಡಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಲ್ಲಿ ಅದನ್ನು ಉದ್ಯೋಗಿಗಳ ತೆರಿಗೆ ವ್ಯಾಪ್ತಿಯಲ್ಲಿ ಸೇರಿಸುವುದಿಲ್ಲ, ಎಂದು ತೆರಿಗೆ ವಿಶ್ಲೇಷಕರು ಹೇಳುತ್ತಾರೆ. ಆದರೆ ಸರ್ಕಾರದಿಂದ ಹೆಚ್ಚಿನ ಬಂಡವಾಳ ವೆಚ್ಚದ ಭರವಸೆ ನೀಡಲಾಗಿದೆ. 400 ಹೊಸ ವಂದೇ ಭಾರತ್ ರೈಲುಗಳು, 2023ರಲ್ಲಿ 5ಜಿ ಸ್ಪೆಕ್ಟ್ರಂ ಹರಾಜು, ಇ- ಪಾಸ್ಪೋರ್ಟ್ಸ್ “ಭವಿಷ್ಯದ ತಂತ್ರಜ್ಞಾನ”, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ಗಳ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಅಂತಿಮವಾಗಿ ಒಂದಲ್ಲ ಒಂದು ದಿನ ಜನ ಸಾಮಾನ್ಯರಿಗೆ ಅನುಕೂಲ ಆಗುತ್ತದೆ.