Budget 2022: ಏರ್ ಇಂಡಿಯಾದ ಸಾಲವನ್ನು ತೀರಿಸಲು ಸರ್ಕಾರದಿಂದ ಬಜೆಟ್ನಲ್ಲಿ ಹೆಚ್ಚುವರಿ 51,971 ಕೋಟಿ ರೂಪಾಯಿ
ಏರ್ ಇಂಡಿಯಾದ ಬಾಕಿ ಸಾಲವನ್ನು ಪಾವತಿಸುವ ಸಲುವಾಗಿ 2022ರ ಬಜೆಟ್ನಲ್ಲಿ ಹೆಚ್ಚುವರಿಯಾಗಿ 51,971 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಏರ್ ಇಂಡಿಯಾದ (Air India) ಬಂಡವಾಳ ಹಿಂತೆಗೆತ ಪ್ರಕ್ರಿಯೆ ಈಚೆಗಷ್ಟೇ ಯಶಸ್ವಿಯಾಗಿ ಮುಗಿದಿದೆ. ಇದೇ ವೇಳೆ ಸರ್ಕಾರ ಕೂಡ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್ಪಿವಿ)ಗೆ ವರ್ಗಾವಣೆಯಾದ ಸಾಲವನ್ನು ಚುಕ್ತಾ ಮಾಡಲು ನಿರ್ಧರಿಸಿದೆ. ಸರ್ಕಾರವು ಏರ್ ಇಂಡಿಯಾದ ಬಾಕಿ ಖಾತ್ರಿ ಸಾಲಗಳು ಮತ್ತು ಇತರ ಸಣ್ಣ-ಪುಟ್ಟ ಸಾಲಗಳನ್ನು ತೀರಿಸುವ ಸಲುವಾಗಿ ಹೆಚ್ಚುವರಿಯಾಗಿ 51,971 ಕೋಟಿ ರೂಪಾಯಿಗಳನ್ನು ಕೇಂದ್ರ ಬಜೆಟ್ 2022-23ರಲ್ಲಿ ಮೀಸಲಿರಿಸಿದೆ. ಈ ಮೊತ್ತವು 2021-22ನೇ ಸಾಲಿನ ಪರಿಷ್ಕೃತ ಅಂದಾಜಿನ ಒಟ್ಟಾರೆ ವೆಚ್ಚದಲ್ಲಿ ಬರುತ್ತದೆ. “ಒಟ್ಟಾರೆ ವೆಚ್ಚವಾದ 34.83 ಲಕ್ಷ ಕೋಟಿ ರೂಪಾಯಿಯನ್ನು 2021-22ಕ್ಕೆ ಅಂದಾಜಿಸಲಾಗಿದ್ದು, ಆ ನಂತರ 37.70 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ಮಾಡಲಾಯಿತು. ಪರಿಷ್ಕೃತ ಬಂಡವಾಳ ವೆಚ್ಚ 6.03 ಲಕ್ಷ ಕೋಟಿ ರೂಪಾಯಿ. ಇದರಲ್ಲಿ 51,971 ಕೋಟಿ ರೂಪಾಯಿ ಮೊತ್ತ ಏರ್ ಇಂಡಿಯಾದ ಬಾಕಿ ಇರುವ ಖಾತ್ರಿ ಸಾಲ ಹಾಗೂ ಸಣ್ಣ-ಪುಟ್ಟ ಸಾಲಗಳೂ ಸೇರಿವೆ,” ಎಂದು ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದು ಈ ಬಗ್ಗೆ “ಇಂಡಿಯನ್ ಎಕ್ಸ್ಪ್ರೆಸ್” ವರದಿ ಮಾಡಿದೆ.
ಟಾಟಾ ಸಮೂಹವು ಏರ್ ಇಂಡಿಯಾದ ಶೇ 100ರಷ್ಟು ಷೇರಿನ ಪಾಲನ್ನು ಸ್ವಾಧೀನ ಪಡಿಸಿಕೊಂಡಿತು. ಆ ವ್ಯವಹಾರ ಜನವರಿ 27ಕ್ಕೆ ಕೊನೆಗೊಂಡಿತು. ಒಟ್ಟು ವ್ಯವಹಾರ ಕುದುರಿದ್ದು 18 ಸಾವಿರ ಕೋಟಿ ರೂಪಾಯಿಗೆ. ಅದರಲ್ಲಿ ಏರ್ ಇಂಡಿಯಾದ 15,300 ಕೋಟಿ ರೂಪಾಯಿ ಸಾಲವನ್ನು ಟಾಟಾ ಕಂಪೆನಿಯಿಂದ ತೀರಿಸುವುದು ಮತ್ತು 2700 ಕೋಟಿ ರೂಪಾಯಿ ನಗದು ಮೊತ್ತವನ್ನು ಸರ್ಕಾರಕ್ಕೆ ಕೊಡುವುದು ಒಪ್ಪಂದ ಆಗಿತ್ತು. ಏರ್‌ಲೈನ್‌ನೊಂದಿಗೆ ತೆಗೆದುಕೊಂಡಿರುವ ಹೆಚ್ಚಿನ ವೆಚ್ಚದ ಸಾಲವನ್ನು ಪೂರೈಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ಟಾಟಾ ಸಮೂಹಕ್ಕೆ ದೀರ್ಘಾವಧಿಯ ಸಾಲವನ್ನು ಒದಗಿಸುವ ಯೋಜನೆಯನ್ನು ಅನುಮೋದಿಸಿದೆ.
2021-22ರ ಪರಿಷ್ಕೃತ ಅಂದಾಜಿನ ಪ್ರಕಾರ, ಎಸ್ಪಿವಿ- ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ 62,057 ಕೋಟಿ ರೂಪಾಯಿ ಪಡೆದಿತ್ತು, ಅದರಲ್ಲಿ 36,254 ಕೋಟಿ ರೂಪಾಯಿಯನ್ನು ಈಕ್ವಿಟಿಯಾಗಿ ಪೂರೈಸಲಾಯಿತು. ಅದು ಏಕೆಂದರೆ, ಸರ್ಕಾರದ ಖಾತ್ರಿಯಿಂದ ಏರ್ ಇಂಡಿಯಾಗೆ ಪಡೆದ ಸಾಲವನ್ನು ಮರುಪಾವತಿ ಮಾಡುವ ಸಲುವಾಗಿ. ಇನ್ನು 12,357 ಕೋಟಿ ರೂಪಾಯಿ ವಿಮಾನದ ಮಾರಾಟ ಮತ್ತು ಲೀಸ್ಬ್ಯಾಕ್ ಬಾಡಿಗೆಯ ಸಾಲ ಮರುಪಾವತಿಗಾಗಿ ಆಗಿದೆ. 13,446 ಕೋಟಿ ರೂಪಾಯಿಯು ಇತರ ಬಾಕಿ ಹಾಗೂ ಸಾಲಕ್ಕಾಗಿ ಆಗಿದೆ.
ಸರ್ಕಾರವು ಏರ್ ಇಂಡಿಯಾದ ಬಂಡವಾಳ ಹಿಂತೆಗೆತಕ್ಕೆ ಮುಂದಾದಾಗ ವಿಮಾನ ಯಾನ ಸಂಸ್ಥೆಯ ಈ ಹಿಂದಿನ ಅತಿ ದೊಡ್ಡ ಪ್ರಮಾಣದ ಸಾಲ ದೊಡ್ಡ ಸಮಸ್ಯೆಯಾಗಿ ನಿಂತಿತ್ತು. ಅದಕ್ಕೆ ಮುಖ್ಯ ಕಾರಣ ಏನೆಂದರೆ ಹಲವು ವರ್ಷಗಳಿಂದ ಸಂಸ್ಥೆಯು ನಿರಂತರವಾಗಿ ಕಾರ್ಯಾಚರಣೆ ನಷ್ಟವನ್ನು ಅನುಭವಿಸುತ್ತಲೇ ಬಂತು. ಆ ಸಂದರ್ಭದಲ್ಲಿ ಸರ್ಕಾರವು ತೀರ್ಮಾನಕ್ಕೆ ಬಂದು, ಬಿಡ್ದಾರರು ತಮ್ಮ ಇಚ್ಛೆಗೆ ತಕ್ಕಂತೆ ಸಂಸ್ಥೆಯ ಸಾಲದ ಪ್ರಮಾಣವನ್ನು ವಹಿಸಿಕೊಳ್ಳಲು ನಿರ್ಧರಿಸಬಹುದು ಎಂದಿತು. ಇದನ್ನೇ ಎಂಟರ್ಪ್ರೈಸ್ ವ್ಯಾಲ್ಯೂ ಎನ್ನಲಾಗುತ್ತದೆ. ಇನ್ನು ಯಾವಾಗ ಏರ್ ಇಂಡಿಯಾವನ್ನು ಮಾರಾಟ ಮಾಡಬೇಕು ಎಂದು ಎರಡು ವರ್ಷದ ಹಿಂದೆ ನಿರ್ಧರಿಸಿತೋ ಆಗಿನಿಂದ ನಿಧಿ ಪೂರೈಸುವುದನ್ನು ನಿಲ್ಲಿಸಿ, ಸಾಲಕ್ಕೆ ಖಾತ್ರಿ ನೀಡುವುದಕ್ಕೆ ಆರಂಭಿಸಿತು.
ಇದನ್ನೂ ಓದಿ: ಟಾಟಾ ಗ್ರೂಪ್ ಸೇರಿದ ಏರ್ ಇಂಡಿಯಾ; ಇಂದು ವಿಮಾನ ಪ್ರಯಾಣಿಕರಿಗೆ ಅಧಿಕೃತ ಪ್ರಕಟಣೆ