Budget 2022 Analysis: ಬಜೆಟ್​ ಪುಟಗಳಲ್ಲಿ ರಾಜಕೀಯ ಪಾಠಗಳು; ಚೇತರಿಕೆ ಕಾಲದಲ್ಲಿ ಮಂಡನೆಯಾದ ಅಚ್ಛೇ ದಿನ್​ಗೆ ಪುಷ್ಟಿ ಕೊಡುವ ಬಜೆಟ್

Budget and Politics: ಮೇಲ್ನೋಟಕ್ಕೆ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳದ ಸಮತೂಕ ಬಜೆಟ್ ಎನಿಸಿದರೂ, 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಆರಂಭಿಸಿರುವ ಸಿದ್ಧತೆಯ ಮುಂದುವರಿದ ಭಾಗ ಎಂದು ವಿಶ್ಲೇಷಿಸಬಹುದು

Budget 2022 Analysis: ಬಜೆಟ್​ ಪುಟಗಳಲ್ಲಿ ರಾಜಕೀಯ ಪಾಠಗಳು; ಚೇತರಿಕೆ ಕಾಲದಲ್ಲಿ ಮಂಡನೆಯಾದ ಅಚ್ಛೇ ದಿನ್​ಗೆ ಪುಷ್ಟಿ ಕೊಡುವ ಬಜೆಟ್
ದೆಹಲಿಯಲ್ಲಿ ವಿತ್ತ ಸಚಿವಾಲಯದಿಂದ ಬಜೆಟ್ ಮಂಡನೆಗೆಂದು ಸಂಸತ್​ ಭವನದ ಕಡೆಗೆ ಹೊರಟ ನಿರ್ಮಲಾ ಸೀತಾರಾಮನ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 02, 2022 | 7:11 AM

ಭಾರತ ಇಂದು ಯಾವ ಸ್ಥಿತಿಯಲ್ಲಿದೆ? ಕೊರೊನಾ 3ನೇ ಅಲೆಯ ಸೋಂಕು (Coronavirus 3rd Wave) ದೇಶವನ್ನು ಆವರಿಸಿಕೊಂಡಿದೆ. ದೊಡ್ಡ ಮಟ್ಟದ ಉದ್ಯಮಗಳ ಲಾಭಗಳಿಕೆ ಹೆಚ್ಚಾಗುತ್ತಿದ್ದರೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಚೇತರಿಸಿಕೊಳ್ಳಲು ಹೆಣಗಾಡುತ್ತಿವೆ. ಸತತ ಮೂರು ವರ್ಷಗಳ ಕಳಾಹೀನ ಸ್ಥಿತಿಯಿಂದ ಕೆಲಕಚ್ಚಿರುವ ಅನೌಪಚಾರಿಕ ಕ್ಷೇತ್ರದ ಉದ್ಯಮಿಗಳು ಮತ್ತೆ ತಮ್ಮ ಉದ್ದಿಮೆಗಳನ್ನು ಆರಂಭಿಸಲು, ವ್ಯವಹಾರ ಮುಂದುವರಿಸಲು ಹೆಣಗಾಡುತ್ತಿದ್ದಾರೆ. ಹಳೆಯ ಸಾಲಗಳನ್ನು ತೀರಿಸಲು ಆಗಿಲ್ಲ, ಹೊಸದಾಗಿ ಸಾಲ ಹುಟ್ಟುತ್ತಿಲ್ಲ. ಉತ್ತರ ಪ್ರದೇಶ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಗ್ರಾಮೀಣ ಆರ್ಥಿಕತೆಗೆ ಹೊಸ ವೇಗ ನೀಡಬೇಕೆಂದು ಕೇಂದ್ರ ಸರ್ಕಾರವು ಜಾರಿಗೆ ತಂದ ನೂತನ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ಕಾವು ಜೋರಾಗಿದ್ದ ರಾಜ್ಯಗಳೂ ಇದರಲ್ಲಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) ಇಂದು ಸಂಸತ್ತಿನಲ್ಲಿ ಮಂಡಿಸಿದ ಅಯವ್ಯಯವನ್ನು (Budget 2022) ಈ ಹಿನ್ನೆಲೆಯೊಂದಿಗೆ ಪರಿಶೀಲಿಸುವುದು ಮುಖ್ಯವಾಗುತ್ತದೆ. ಏಕೆಂದರೆ ಬಜೆಟ್ ಎನ್ನುವುದು ಹಣಕಾಸಿಗೆ ಸಂಬಂಧಿಸಿದ ಅಂಕಿಅಂಶಗಳ ಸರ್ಕಸ್ ಆಗಿದ್ದರೂ, ನಿರ್ಧಾರ ತೆಗೆದುಕೊಳ್ಳುವವರು ರಾಜಕಾರಿಣಿಗಳೇ ಆಗಿರುತ್ತಾರೆ. ಹೀಗಾಗಿಯೇ ಒಟ್ಟಾರೆ ವಿದ್ಯಮಾನವನ್ನು ರಾಜಕೀಯ ಅರ್ಥಶಾಸ್ತ್ರದ (Political Economy) ಪರಿಭಾಷೆಯಲ್ಲಿಯೇ ನಾವು ಗ್ರಹಿಸಬೇಕಾಗುತ್ತದೆ.

ಮುನ್ನೆಲೆಗೆ ಬಾರದ ರಾಜಕಾರಣ ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿರುವ ಸಂಧಿಕಾಲದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್​ನಲ್ಲಿ ಸಹಜವಾಗಿಯೇ ರಾಜಕೀಯ ಘೋಷಣೆಗಳು ಮುನ್ನೆಲೆಗೆ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ನಿರ್ಮಲಾ ಸೀತಾರಾಮನ್ ಸನಿಹದಲ್ಲಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಹೊಸ ಯೋಜನೆ ಪ್ರಕಟಿಸಿದಂತೆ ಕಾಣಿಸಲಿಲ್ಲ. ಬದಲಿಗೆ ‘ಮುಂದಿನ 25 ವರ್ಷಗಳಿಗೆ ಮಾರ್ಗದರ್ಶನ ಮಾಡುವಂಥ ಬಜೆಟ್ ಇದು’ ಎಂಬ ಆತ್ಮವಿಶ್ವಾಸದ ಮಾತಿನೊಂದಿಗೆ ಭಾಷಣಕ್ಕೆ ಪೀಠಿಕೆ ಹಾಕಿದರು.

ಇದನ್ನು ಸರ್ಕಾರ ಮಾಡುತ್ತಿರುವ ಪೊಲಿಟಿಕಲ್ ಸ್ಟೇಟ್​ಮೆಂಟ್ ಎಂದು ಭಾವಿಸಿ ವಿಶ್ಲೇಷಿಸಿದರೆ ಪರೋಕ್ಷವಾಗಿ ಅದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇರುವ ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತದೆ. ‘ನಮಗೆ ಸದ್ಯದ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಮುಂದಿನ ಲೋಕಸಭಾ ಚುನಾವಣೆಯ ಗೆಲುವಿನ ವಿಶ್ವಾಸವೂ ಇದೆ’ ಎಂಬ ಮನಃಸ್ಥಿತಿ ಈ ಹೇಳಿಕೆಯಲ್ಲಿ ವ್ಯಕ್ತವಾಗಿರುವುದನ್ನು ಗಮನಿಸಬಹುದು.

ಸದೃಢ ಆರ್ಥಿಕತೆಗೆ ಏಳು ಕಂಬಗಳು ಸರ್ಕಾರದ ಮೊದಲ ವರ್ಷದ ಬಜೆಟ್​ ಮತ್ತು ಕೊನೆಯ ವರ್ಷದ ಬಜೆಟ್​ ನಡುವೆ ಅಗಾಧ ವ್ಯತ್ಯಾಸ ಇರುತ್ತದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ಮಂಡನೆಯಾಗಿರುವ ನಾಲ್ಕನೇ ಬಜೆಟ್ ಇದು. ಈ ಅವಧಿಯಲ್ಲಿ ಮೋದಿ ಸರ್ಕಾರವು ಇನ್ನೊಂದು ಬಜೆಟ್ ಮಂಡಿಸಲಿದೆ. ಅದು ಈ ಸರ್ಕಾರದ ಕೊನೆಯ ಬಜೆಟ್, ಅಂದರೆ ಚುನಾವಣಾ ಬಜೆಟ್ ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕೊನೆಯ ಬಜೆಟ್​ ಜನಪ್ರಿಯ ಯೋಜನೆಗಳಿಗೆ ಒತ್ತು ನೀಡುವ ಮೂಲಕ ಆರ್ಥಿಕ ಶಿಸ್ತು ಮತ್ತು ದೀರ್ಘಾವಧಿ ಯೋಜನೆಗಳನ್ನು ಮುಂದೂಡುವ ಮನೋಧರ್ಮದಲ್ಲಿರುತ್ತದೆ.

ಚುನಾವಣಾ ಬಜೆಟ್​ಗೆ ಒಂದು ವರ್ಷ ಮೊದಲು ಮಂಡನೆಯಾಗುವ ಬಜೆಟ್​ ಅನ್ನು ಚುನಾವಣಾ ಪೂರ್ವ ಸಿದ್ಧತಾ ಬಜೆಟ್ ಎಂದು ವ್ಯಾಖ್ಯಾನಿಸುವುದು ವಾಡಿಕೆ. ನಿರ್ಮಲಾ ಸೀತಾರಾಮನ್ ಅವರ ಈ ವರ್ಷದ ಬಜೆಟ್​ ಅನ್ನು ಈ ಹಿನ್ನೆಲೆಯಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಸ್ಥಿರತೆಯ ವಿಷಯದಲ್ಲಿ ಈ ಬಾರಿಯ ಕೇಂದ್ರ ಸರ್ಕಾರವು ನೂರಕ್ಕೆ ನೂರು ಸದೃಢವಾಗಿದೆ. ದೇಶದ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿದೆ ಎಂದು ಹಲವು ಬಾರಿ ನಿರೂಪಿಸಿದೆ.

ಈ ಬಜೆಟ್​ನಲ್ಲಿ ಭಾರತದ ದೀರ್ಘಾವಧಿ ಮುನ್ನೋಟಕ್ಕೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಘೋಷಿಸಲಾಗಿದೆ. ಅಭಿವೃದ್ಧಿ ಎಂದರೆ ಏನು ಮತ್ತು ಅದನ್ನು ಸಾಧಿಸಲು ಸರ್ಕಾರ ಏನು ಮಾಡಲಿದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸಲಾಗಿದೆ. ಈ ನಿಟ್ಟಿನಲ್ಲಿ ಏಳು ಅಂಶಗಳನ್ನು ವಿತ್ತ ಸಚಿವರು ಘೋಷಿಸಿದರು. ಅವೆಂದರೆ; 1) ಪಿಎಂ ಗತಿಶಕ್ತಿ, 2) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, 3) ಉತ್ಪಾದಕತೆಯ ವೃದ್ಧಿ, 4) ಅವಕಾಶಗಳ ಹೆಚ್ಚಳ, 5) ವಿದ್ಯುತ್ ಉತ್ಪಾದನೆ, 6) ವಿತರಣೆಯಲ್ಲಿ ಸುಧಾರಣೆ, 7) ಪರಿಸರ ಸಂರಕ್ಷಣೆ, ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು.

ರಕ್ಷಣೆಯಲ್ಲಿ ಸ್ವಾವಲಂಬನೆಗೆ ಒತ್ತು ನೀಡುವುದು, ಬಂಡವಾಳ ವೆಚ್ಚದಲ್ಲಿ (ಕ್ಯಾಪಿಟಲ್ ಎಕ್ಸ್​ಪೆಂಡಿಚರ್) ಹೆಚ್ಚಳ, ಕನಿಷ್ಠ ಬೆಂಬಲ ಬೆಲೆಯಡಿ ಆಹಾರ ಧಾನ್ಯಗಳ ಖರೀದಿಗೆ ₹ 2.37 ಲಕ್ಷ ಕೋಟಿ ಮೀಸಲು, ಕೌಶಲಾಭಿವೃದ್ಧಿ ಒತ್ತು, ಡಿಜಿಟಲ್ ವಿವಿ ಸ್ಥಾಪನೆ ಘೋಷಣೆಗಳನ್ನು ಈ ಹಿನ್ನೆಲೆಯಲ್ಲಿಯೇ ಅರ್ಥೈಸಬೇಕಾಗಿದೆ. ಡಿಜಿಟಲ್​ ಕರೆನ್ಸಿ ಚಾಲ್ತಿಗೆ ತರಲು ನಿರ್ಧಾರ, ಆದಾಯ ತೆರಿಗೆ ವಿನಾಯಿತಿ ಇಲ್ಲ, ವೇಗದ ಇಂಟರ್ನೆಟ್​ಗಾಗಿ 5G ತರಂಗಾಂತರ ಹರಾಜು, ಹಳ್ಳಿಗಳಲ್ಲಿ ಎಒಫ್​ಸಿ ಮೂಲಕ ಇಂಟರ್​ನೆಟ್​ ಸೌಲಭ್ಯ, 60 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ.

ಗ್ರಾಮೀಣ ಪ್ರದೇಶಗಳ ಕಡೆಗಣನೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದೂವರೆ ಗಂಟೆಗಳ ಬಜೆಟ್ ಭಾಷಣದಲ್ಲಿ ಎಲ್ಲಿಯೂ ಎಸ್​ಸಿ, ಎಸ್​ಟಿ ಜಾತಿಗಳ ಕಲ್ಯಾಣಕ್ಕೆ ಯಾವುದೇ ವಿಶೇಷ ಕ್ರಮ ಘೋಷಣೆಯಾಗಿದ್ದು ಕಾಣಿಸಲಿಲ್ಲ. ಇದೇ ರೀತಿ ಉದ್ಯೋಗ ಖಾತ್ರಿ ಯೋಜನೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆಗೆ ಒತ್ತು ಕೊಡುವ ಯೋಜನೆಗಳೂ ಈ ಬಜೆಟ್​ನಲ್ಲಿ ನಾಪತ್ತೆಯಾಗಿವೆ. ಆರೋಗ್ಯ ಕ್ಷೇತ್ರಕ್ಕೆ ಸಮಗ್ರ ಡಿಜಿಟಲ್​ ಸ್ಪರ್ಶ ನೀಡುವ ಉತ್ಸಾಹ ತೋರಿದ ಸಚಿವರು, ತಳಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುಧಾರಣೆಗೆ ಯಾವುದೇ ಮಹತ್ವದ ನಿರ್ಧಾರ ಘೋಷಿಸಲಿಲ್ಲ. ನಿರುದ್ಯೋಗ ನಿವಾರಣೆಗೂ ಗಟ್ಟಿ ಘೋಷಣೆಗಳು ಬಂದಿಲ್ಲ.

ನಗರಗಳಲ್ಲಿ ವಾಸವಿದ್ದು ಅಲ್ಲಿ ದುಡಿದು ಹಳ್ಳಿಗಳಿಗೆ ಹಣ ಕಳಿಸುವ ಮೂಲಕ ರೂಪುಗೊಂಡಿದ್ದ ಎಂಒ (ಮನಿ ಆರ್ಡರ್) ಆರ್ಥಿಕತೆ ಇನ್ನೂ ಹಳಿಗೆ ಮರಳಿಲ್ಲ. ಹಾಗೆಂದು ಹಳ್ಳಿಗೆಳಿಗೆ ಹೋಗಿರುವ ವಲಸೆ ಕಾರ್ಮಿಕರಿಗೆ ತಕ್ಕಮಟ್ಟಿನ ಉದ್ಯೋಗವು ಸಿಗುತ್ತಿಲ್ಲ. ಕೊವಿಡ್​ಗೆ ಮೊದಲು ನೋಟು ಅಮಾನ್ಯೀಕರಣದಿಂದ ಗ್ರಾಮೀಣ ಆರ್ಥಿಕತೆ ಕಳಾಹೀನವಾಗಿತ್ತು. ನಂತದ ಕೊವಿಡ್ ವಿದ್ಯಮಾನ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಮುರಿಯಿತು. ಈ ಯಾವ ಅಂಶಗಳನ್ನು ಕೇಂದ್ರ ಸರ್ಕಾರವಾಗಲಿ, ವಿತ್ತ ಸಚಿವರಾಗಲಿ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದಕ್ಕೆ ಬಜೆಟ್ ಭಾಷಣದಲ್ಲಿ ಯಾವುದೇ ಆಧಾರ ಸಿಗುವುದಿಲ್ಲ.

ಮೇಲ್ನೋಟಕ್ಕೆ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳದ ಸಮತೂಕ ಬಜೆಟ್ ಎನಿಸಿದರೂ, ಆಳದಲ್ಲಿ ಬಿಜೆಪಿ ಬೆಂಬಲಿಗರು ಗಮನಾರ್ಹ ಪ್ರಮಾಣದಲ್ಲಿರುವ ನಗರವಾಸಿಗಳು ಮತ್ತು ಮಧ್ಯಮವರ್ಗದವರನ್ನು ದೃಷ್ಟಿಯಲ್ಲಿರಿಸಿಕೊಂಡ ಬಜೆಟ್ ಎಂದು ವಿಶ್ಲೇಷಿಸಬಹುದು. 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿ ಆರು ತಿಂಗಳೇ ಕಳೆದಿರುವುದರಿಂದ ಇಂಥ ಬಜೆಟ್ ನಿರೀಕ್ಷಿತವೂ ಆಗಿತ್ತು.

ಇದನ್ನೂ ಓದಿ: Budget 2022: ಹೊಸ ಆರ್ಥಿಕ ವರ್ಷದಿಂದ ಯಾವುದು ಅಗ್ಗ ಹಾಗೂ ಯಾವುದು ದುಬಾರಿ? ಇದನ್ನೂ ಓದಿ: Budget 2022 ಕೇಂದ್ರ ಬಜೆಟ್​​ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ ಮಹಿಳಾ ಕೇಂದ್ರಿತ ಯೋಜನೆಗಳು ಯಾವುವು?

Published On - 2:44 pm, Tue, 1 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್