‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್’: ಇದರ ಕಥೆ ಇನ್ನೂ ಭಯಾನಕ
Director Vivek Agnihotri: ವಿವೇಕ್ ಅಗ್ನಿಹೋತ್ರಿ ಅವರ ಟ್ರಿಲಜಿಯಲ್ಲಿ ಮೂರನೇ ಸಿನಿಮಾವಾಗಿ ‘ದಿ ದಿಲ್ಲಿ ಫೈಲ್ಸ್’ ಸಿದ್ಧವಾಗಲಿದೆ. ಇದು ಇನ್ನಷ್ಟು ಭಯಾನಕವಾಗಿ ಆಗಿರಲಿದೆ ಎಂಬ ಸೂಚನೆ ಸಿಕ್ಕಿದೆ.
ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) 100 ಕೋಟಿ ರೂಪಾಯಿ ಗಳಿಸಿದೆ. 8ನೇ ದಿನ ಕಳೆಯುವುದರೊಳಗೆ ಶತಕೋಟಿ ರೂಪಾಯಿ ಕ್ಲಬ್ ಸೇರಿ ಸಂಭ್ರಮಿಸಿದೆ. ಈ ಗೆಲುವಿನ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Director Vivek Agnihotri) ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಯಾರಾಗಿದೆ. ಈ ಸಿನಿಮಾದಲ್ಲಿ ತೋರಿಸಿರುವ ವಿಷಯದ ಬಗ್ಗೆ ಪರ-ವಿರೋಧದ ಚರ್ಚೆಗಳು ಜಾರಿಯಲ್ಲಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೆಲವು ರಾಜಕಾರಣಿಗಳು ಈ ಸಿನಿಮಾವನ್ನು ಕೊಂಡಾಡಿದ್ದಾರೆ. ಆದರೆ ಕೆಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಇಂಥ ಚರ್ಚೆಗಳು ಜಾರಿಯಲ್ಲಿ ಇರುವಾಗಲೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಅನೇಕರ ಮನದಲ್ಲಿ ಮೂಡಿದೆ. ಅದಕ್ಕೆ ಈಗಾಗಲೇ ಉತ್ತರ ಸಿದ್ಧವಿದೆ. ‘ದಿ ದಿಲ್ಲಿ ಫೈಲ್ಸ್’ (The Delhi Files) ಶೀರ್ಷಿಕೆಯಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾ ಮಾಡಲಿದ್ದಾರೆ. ಕಳೆದ ವರ್ಷವೇ ಈ ಬಗ್ಗೆ ಅವರು ಘೋಷಣೆ ಮಾಡಿದ್ದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ಅವರು ಸರಣಿ ಸಿನಿಮಾ ಮಾಡಲು ನಿರ್ಧರಿಸಿದರು. ಆ ಸರಣಿಯಲ್ಲಿ ಮೊದಲ ಬಂದ ಸಿನಿಮಾ ‘ದಿ ತಾಷ್ಕೆಂಟ್ ಫೈಲ್ಸ್’. ಆ ಸಿನಿಮಾದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಧನದ ಬಗ್ಗೆ ವಿವರಿಸಲಾಗಿತ್ತು. 2019ರಲ್ಲಿ ‘ದಿ ತಾಷ್ಕೆಂಟ್ ಫೈಲ್ಸ್’ ತೆರೆಕಂಡಿತು. ಈ ಸರಣಿಯ 2ನೇ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’. ಇದರಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಹೇಳಲಾಯಿತು. ಈಗ ‘ದಿ ದಿಲ್ಲಿ ಫೈಲ್ಸ್’ ಬಗ್ಗೆ ಸಿನಿಮಾ ಮೂಡಿಬರುತ್ತಿದೆ.
ವಿವೇಕ್ ಅಗ್ನಿಹೋತ್ರಿ ಅವರ ಟ್ರಿಲಜಿಯಲ್ಲಿ ಮೂರನೇ ಸಿನಿಮಾವಾಗಿ ‘ದಿ ದಿಲ್ಲಿ ಫೈಲ್ಸ್’ ಸಿದ್ಧವಾಗಲಿದೆ. 2021ರ ಸೆ.13ರಂದು ಅವರು ಈ ಸಿನಿಮಾ ಅನೌನ್ಸ್ ಮಾಡಿದ್ದರು. ‘ದಿ ತಾಷ್ಕೆಂಟ್ ಫೈಲ್ಸ್’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಗಳಿಗಿಂತಲೂ ‘ದಿ ದಿಲ್ಲಿ ಫೈಲ್ಸ್’ ಹೆಚ್ಚು ಭಯಾನಕ ಆಗಿರಲಿದೆ ಎನ್ನಲಾಗಿದೆ. ಟೈಟಲ್ ಅನೌನ್ಸ್ ಮಾಡುವುದರ ಜೊತೆಗೆ ಅವರು ಒಂದು ಮೋಷನ್ ಪೋಸ್ಟರ್ ಸಹ ರಿಲೀಸ್ ಮಾಡಿದ್ದರು. ರಾಷ್ಟ್ರ ಲಾಂಚನದ ನಡುವೆ ಸಿಖ್ ಬಾಲಕನೊಬ್ಬ ಅಸಹಾಯಕತೆಯಿಂದ ಅಳುತ್ತಿರುವ ಪೋಸ್ಟರ್ ಅದಾಗಿದೆ. ಹಿನ್ನೆಲೆಯಲ್ಲಿ ಬೂಟಿನ ಶಬ್ದ ಕೇಳಿಸುತ್ತದೆ. ಈ ಸಿನಿಮಾದಲ್ಲಿ ‘ಜೀವಿಸುವ ಹಕ್ಕು’ ಬಗ್ಗೆ ವಿವರಿಸುವುದಾಗಿ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
Few years back, I started telling untold stories of independent India.
1. #TheTashkentFiles – Right To Truth. 2. #TheKashmirFiles – Right To Justice (releasing soon)
Happy to announce the last & the boldest of the trilogy:
3. #TheDelhiFiles – Right To Life.
Pl bless us. pic.twitter.com/gBJtX4ilZR
— Vivek Ranjan Agnihotri (@vivekagnihotri) September 13, 2021
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದಾಗಿ ವಿವೇಕ್ ಅಗ್ನಿಹೋತ್ರಿ ಅವರು ಮೋಡಿ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ವಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಿಡುಗಡೆಯಾಗಿ 9 ದಿನ ಕಳೆದಿದ್ದರೂ ಕೂಡ ಇನ್ನೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಸಹಜವಾಗಿಯೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ 3ನೇ ಸಿನಿಮಾ ಬಗ್ಗೆ ಕೌತುಕ ನಿರ್ಮಾಣ ಆಗಿದೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ದಿ ಕಾಶ್ಮೀರ್ ಫೈಲ್ಸ್’ನಲ್ಲಿ ಹಿಂಸೆಯ ಚಿತ್ರಣ ಇದೆ, ಆದರೆ ಪರಿಹಾರ ಇಲ್ಲ; ಛತ್ತೀಸ್‌ಗಢ ಮುಖ್ಯಮಂತ್ರಿ ಟೀಕೆ