Lakhimpur Kheri Violence: ಹತ್ಯೆಯ ಮೂಲಕ ರೈತರನ್ನು ಹತ್ತಿಕ್ಕಲು ಸಾಧ್ಯವಿಲ್ಲ: ಬಿಜೆಪಿ ಸಂಸದನ ಆಕ್ರೋಶ
ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪ್ರಕರಣವಾಗಿದ್ದು, ಘಟನೆಯಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಹೆಸರು ಕೇಳಿಬಂದಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿ (Lakhimpur Kheri Violence)ಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಎರಡು ವಾಹನಗಳು ಹರಿದ ಹೊಸದಾದ ವಿಡಿಯೋ ಒಂದು ಇಂದು ವೈರಲ್ ಆಗುತ್ತಿದೆ. ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರಿಗೆ ಎರಡು ವಾಹನಗಳು ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ನಿಜಕ್ಕೂ ಭೀಕರವಾಗಿದೆ. ಮೊನ್ನೆ ಭಾನುವಾರ ಇಂಥದ್ದೇ ಒಂದು ವಿಡಿಯೋವನ್ನು ಕಾಂಗ್ರೆಸ್ ಶೇರ್ ಮಾಡಿತ್ತು. ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದಾಗಿನಿಂದಲೂ ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಹಾಗೇ, ಬಿಜೆಪಿ ಸಂಸದ ವರುಣ್ ಗಾಂಧಿ (BJP MP Varun Gandhi) ಕೂಡ ಈ ವಿಡಿಯೋ ಶೇರ್ ಮಾಡಿಕೊಂಡು, ರೈತರು ಕೊಲೆಯಾದರು ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ವರುಣ್ ಗಾಂಧಿ, ಈ ವಿಡಿಯೋದಲ್ಲಿ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ ರೈತರನ್ನು ಹತ್ಯೆ ಮಾಡುವ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಇದೀಗ ಮುಗ್ಧ ರೈತರ ರಕ್ತ ಹೊರಚೆಲ್ಲಿದೆ. ಅದಕ್ಕೆ ತಕ್ಕದಾದ ಉತ್ತರ ಕೊಡಬೇಕು. ಪ್ರತಿಯೊಬ್ಬ ರೈತರ ಮನಸಲ್ಲಿ ಪ್ರತೀಕಾರದ ಕ್ರೌರ್ಯ ಹುಟ್ಟುವ ಮೊದಲು ಅವರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ. ಅಕ್ಟೋಬರ್ 5ರಂದು ಒಂದು ವಿಡಿಯೋ ವೈರಲ್ ಆಗಿತ್ತು. ಅದನ್ನೂ ಕೂಡ ವರುಣ್ ಗಾಂಧಿ ಶೇರ್ ಮಾಡಿಕೊಂಡಿದ್ದರು. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಉದ್ದೇಶ ಪೂರ್ವಕವಾಗಿಯೇ ವಾಹನಗಳನ್ನು ಹರಿಸಿರುವ ಈ ವಿಡಿಯೋ ಎಂಥವರ ಆತ್ಮವನ್ನೂ ನಡುಗಿಸುತ್ತದೆ. ಪೊಲೀಸರು ಈ ವಿಡಿಯೋವನ್ನು ಸರಿಯಾಗಿ ನೋಡಬೇಕು. ಈ ವಾಹನಗಳ ಮಾಲೀಕರು, ಅದರಲ್ಲಿ ಕುಳಿತಿರುವ ಜನರು, ಘಟನೆಯಲ್ಲಿ ಭಾಗಿಯಾದ ಇತರ ವ್ಯಕ್ತಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದರು.
The video is crystal clear. Protestors cannot be silenced through murder. There has to be accountability for the innocent blood of farmers that has been spilled and justice must be delivered before a message of arrogance and cruelty enters the minds of every farmer. ???? pic.twitter.com/Z6NLCfuujK
— Varun Gandhi (@varungandhi80) October 7, 2021
ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪ್ರಕರಣವಾಗಿದ್ದು, ಘಟನೆಯಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಹೆಸರು ಕೇಳಿಬಂದಿದೆ. ಅವರ ವಿರುದ್ಧ ಕೊಲೆ ಪ್ರಕರಣವೂ ದಾಖಲಾಗಿದೆ. ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಾಸ್ತವ್ ಅವರನ್ನು ನೇಮಕ ಮಾಡಿದ್ದು, ಅವರು ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ಇನ್ನೆರಡು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಸಿಂದಗಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್ ಭೂಸನೂರ ಹೆಸರು ಘೋಷಣೆ
Published On - 11:55 am, Thu, 7 October 21