ರಜನಿ ಬೆಂಬಲ ಪಡೆಯಲು ಸಜ್ಜಾದ ಬಿಜೆಪಿ.. ಮುಂದಿನ ಚುನಾವಣೆಗೆ ತಲೈವಾ-ಕಮಲ ದೋಸ್ತಿ?

ಒಂದುವೇಳೆ ರಜನಿ AIADMK ಪಕ್ಷದೊಂದಿಗೆ ಮಿತೃತ್ವ ಬೆಳೆಸಿಕೊಂಡಿರುವ ಬಿಜೆಪಿಗೆ ಬೆಂಬಲ ಸೂಚಿಸಿದರೆ ಅದು ಅಚ್ಚರಿಯ ನಡೆಯಾಗಲಿದೆ. ಈ ಹಿಂದೆ 1996ರಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದ ರಜನಿಕಾಂತ್​ ಅಪ್ಪಿತಪ್ಪಿ AIADMK ಮತ್ತೆ ಗೆದ್ದರೆ ತಮಿಳುನಾಡನ್ನು ದೇವರೂ ಕಾಪಾಡಲಾರ ಎಂದು ಹೇಳಿಕೆ ನೀಡಿದ್ದರು.

ರಜನಿ ಬೆಂಬಲ ಪಡೆಯಲು ಸಜ್ಜಾದ ಬಿಜೆಪಿ.. ಮುಂದಿನ ಚುನಾವಣೆಗೆ ತಲೈವಾ-ಕಮಲ ದೋಸ್ತಿ?
ಸಾಂದರ್ಭಿಕ ಚಿತ್ರ
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 30, 2020 | 7:14 PM

ಚೆನ್ನೈ: ಆರೋಗ್ಯದ ನೆಪವೊಡ್ಡಿ ರಜನಿಕಾಂತ್ ರಾಜಕೀಯದ ಅಧಿಕೃತ ಪ್ರವೇಶಕ್ಕೂ ಮುನ್ನವೇ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಸೂಪರ್​ಸ್ಟಾರ್ ರಜನಿ ಕಮಾಲ್​ ಮಾಡಬಹುದು ಎಂಬ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ಆದರೆ, ಈಗ ನಡೆಯುತ್ತಿರುವ ಹೊಸ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷ 2021ರ ವಿಧಾನಸಭಾ ಚುನಾವಣೆಯಲ್ಲಿ ತಮಿಳಿಗರ ಮನ ಗೆಲ್ಲಲು ರಜನಿ ಸಹಾಯ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.

ತಮಿಳುನಾಡಿನಲ್ಲಿ BJP ಮತ್ತು AIADMK ನಡುವಿನ ವಿಶ್ವಾಸ ಗಟ್ಟಿಯಾಗಿದೆ. ಸದ್ಯ AIADMK ಅತಿದೊಡ್ಡ ಪಕ್ಷವೆನಿಸಿಕೊಂಡಿದ್ದು, ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದಾಗ ದೊಡ್ಡ ಪಕ್ಷವಾಗಿ ಹೊರಹೊಮ್ಮುವವರಿಗೆ ಸಹಜವಾಗಿ ಮುಖ್ಯಮಂತ್ರಿ ಪಟ್ಟ ಒಲಿಯಲಿದೆ. ಯಾವುದಕ್ಕೂ ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿಯ ತಮಿಳುನಾಡಿನ ಉಸ್ತುವಾರಿ ಸಿ.ಟಿ.ರವಿ ತಿಳಿಸಿದ್ದಾರೆ.

ಏಪ್ರಿಲ್​-ಮೇ ತಿಂಗಳ ವೇಳೆಗೆ ಚುನಾವಣಾ ಆಯೋಗದಿಂದ ಮುಂದಿನ ವಿಧಾನಸಭಾ ಚುನಾವಣೆ ಕುರಿತು ಪ್ರಕಟಣೆ ಹೊರಡುವ ಸಾಧ್ಯತೆ ಇದೆ. ಅಷ್ಟರಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಮತ್ತಷ್ಟು ಸದೃಢವಾಗುವ ವಿಶ್ವಾಸವಿದೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದ್ದಾರೆ.

ಇದೇವೇಳೆ, ರಜನಿಕಾಂತ್​ ಅವರ ಬೆಂಬಲ ನಿರೀಕ್ಷಿಸುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ಬಲವರ್ಧನೆಗೆ ರಜನಿ ಸಹಾಯ ಕೇಳಲು ಬಯಸುತ್ತೇವೆ. ರಜನಿ ಒಬ್ಬ ಅತ್ಯುತ್ತಮ ನಾಯಕನಾಗಿದ್ದು, ಯಾವಾಗಲೂ ರಾಜ್ಯ ಮತ್ತು ರಾಷ್ಟ್ರದ ಹಿತವನ್ನು ಬಯಸುವವರಾಗಿದ್ದಾರೆ. ಅವರು ಮತ್ತು ನರೇಂದ್ರ ಮೋದಿ ಎಷ್ಟು ಆಪ್ತರು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ರಜನಿಯಿಂದ ಬೆಂಬಲ ಪಡೆದರೆ ಅಚ್ಚರಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ AIADMK ಹಾಲಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರೇ ಮುಂದಿನ ಅವಧಿಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿದೆ. ಇನ್ನೊಂದೆಡೆ ಬಿಜೆಪಿ ಪಕ್ಷದ ತಮಿಳುನಾಡು ಅಧ್ಯಕ್ಷ ಎಲ್​.ಮುರುಗನ್​ ಯಾರೇ ಬಿಜೆಪಿಗೂ ಬಂದರೂ ಸ್ವಾಗತ ಎಂದಿದ್ದಾರೆ. ಡಿಎಂಕೆ ಪಕ್ಷದ ಉಚ್ಛಾಟಿತ ನಾಯಕ ಎಂ.ಕೆ.ಅಳಗಿರಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅಧಿಕೃತ ಮಾತುಕತೆ ಆಗಿಲ್ಲವಾದರೂ ಅವರನ್ನು ನಾವು ಸೇರಿಸಿಕೊಳ್ಳಲು ಸಿದ್ಧ ಎಂದಿದ್ದಾರೆ.

ಈ ಬೆಳವಣಿಗೆಗಳು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡುತ್ತಿವೆ. ಒಂದುವೇಳೆ ರಜನಿ AIADMK ಪಕ್ಷದೊಂದಿಗೆ ಮಿತೃತ್ವ ಬೆಳೆಸಿಕೊಂಡಿರುವ ಬಿಜೆಪಿಗೆ ಬೆಂಬಲ ಸೂಚಿಸಿದರೆ ಅದು ಅಚ್ಚರಿಯ ನಡೆಯಾಗಲಿದೆ. ಈ ಹಿಂದೆ 1996ರಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದ ರಜನಿಕಾಂತ್​ ಅಪ್ಪಿತಪ್ಪಿ AIADMK ಮತ್ತೆ ಗೆದ್ದರೆ ತಮಿಳುನಾಡನ್ನು ದೇವರೂ ಕಾಪಾಡಲಾರ ಎಂದು ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ರಜನಿ ಹೇಳಿಕೆ ಭಾರೀ ಜನಪ್ರಿಯವಾಗಿದ್ದಷ್ಟೇ ಅಲ್ಲದೇ AIADMK ಸೋಲನ್ನು ಅನುಭವಿಸಿತ್ತು ಎಂಬುದು ಗಮನಾರ್ಹ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada