ಉದಯಪುರ ಟೈಲರ್ ಹಂತಕನಿಗೆ ಬಿಜೆಪಿ ನಂಟು ಇದೆ ಎಂದು ತೋರಿಸುವ ಫೋಟೊ ಟ್ವೀಟಿಸಿದ ಕಾಂಗ್ರೆಸ್; ಆರೋಪ ನಿರಾಕರಿಸಿದ ಬಿಜೆಪಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 02, 2022 | 9:23 PM

ಪ್ರಮುಖ ಆರೋಪಿ ರಿಯಾಜ್ ಅಟ್ಟಾರಿ ಆಗಾಗ್ಗೆ ರಾಜಸ್ಥಾನದ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಗುಲಾಬ್‌ಚಂದ್ ಕಟಾರಿಯಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಖೇರಾ ಆರೋಪಿಸಿದ್ದಾರೆ. ಇದು ಮಾತ್ರವಲ್ಲದೆ, ಪ್ರಮುಖ ಆರೋಪಿ ರಿಯಾಜ್ ಅಟ್ಟಾರಿ ಬಿಜೆಪಿಯ ರಾಜಸ್ಥಾನದ ಅಲ್ಪಸಂಖ್ಯಾತ ಘಟಕದ ಸಭೆಗಳಲ್ಲಿ...

ಉದಯಪುರ ಟೈಲರ್ ಹಂತಕನಿಗೆ ಬಿಜೆಪಿ ನಂಟು ಇದೆ ಎಂದು ತೋರಿಸುವ ಫೋಟೊ ಟ್ವೀಟಿಸಿದ ಕಾಂಗ್ರೆಸ್; ಆರೋಪ ನಿರಾಕರಿಸಿದ ಬಿಜೆಪಿ
ಉದಯಪುರ ಹಂತಕರು
Follow us on

ಜೈಪುರ್: ರಾಜಸ್ಥಾನದ ಉದಯಪುರದಲ್ಲಿ (Udaipur) ಟೈಲರ್ ಕನ್ಹಯ್ಯಾ ಲಾಲ್​​ರನ್ನು ಬರ್ಬರವಾಗಿ ಹತ್ಯೆಗೈದ ಹಂತಕರಲ್ಲಿ ಒಬ್ಬ ಬಿಜೆಪಿ (BJP) ಜತೆ ನಂಟು ಹೊಂದಿದ್ದಾನೆ ಎಂದು ಫೋಟೊವನ್ನು ಟ್ವೀಟ್ ಮಾಡಿ ಕಾಂಗ್ರೆಸ್(Congress) ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನದ ಅಲ್ಪಸಂಖ್ಯಾತರ ಬಿಜೆಪಿ ಘಟಕದ ಮುಖ್ಯಸ್ಥ ಸಾದಿಖ್ ಖಾನ್, ಆರೋಪಿ ಜತೆ ನಮಗೆ ಯಾವುದೇ ನಂಟು ಇಲ್ಲ. ಈ ಹತ್ಯೆ ರಾಜಸ್ಥಾನದಲ್ಲಿರು ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಉದಯಪುರ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿರುವ ಒಬ್ಬ ಬಿಜೆಪಿ ಸದಸ್ಯ. ಹಾಗಾಗಿಯೇ ಕೇಂದ್ರ ಸರ್ಕಾರ ಪ್ರಕರಣವನ್ನು ತ್ವರಿತವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಿತೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಉದಯಪುರ ಘಟನೆಗೆ ಸಂಬಂಧಿಸಿದಂತೆ ಸುದ್ದಿಯೊಂದರ ಸ್ಕ್ರೀನ್ ಶಾಟ್ ಟ್ವೀಟಿಸಿದ್ದು ಅತ್ಯಂತ ಸಂವೇದನಾಶೀಲ ಬಹಿರಂಗಪಡಿಸುವಿಕೆ ಎಂದಿದ್ದಾರೆ. ರಿಯಾಜ್ ಅಖ್ತರಿ ಎಂದು ಕರೆಯಲ್ಪಡುವ ರಿಯಾಜ್ ಅಟ್ಟಾರಿ ಬಿಜೆಪಿ ಸಂಪರ್ಕವನ್ನು ಹೊಂದಿದ್ದಾನೆ ಎಂಬುದು ಈ ಸ್ಕ್ರೀನ್ ಶಾಟ್ ಸೂಚಿಸುತ್ತದೆ . ಕನ್ಹಯ್ಯಾ ಲಾಲ್‌ನ ಹಂತಕ ರಿಯಾಜ್ ಅಟ್ಟಾರಿ ಬಿಜೆಪಿಯ ಸದಸ್ಯ ಎಂದು ಖೇರಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇತರ ಕಾಂಗ್ರೆಸ್ ನಾಯಕರು ಕೂಡಾ ಇದೇ ರೀತಿ ಟ್ವೀಟ್ ಮಾಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಇದು ಸುಳ್ಳು ಸುದ್ದಿ ಎಂದಿದ್ದಾರೆ. ನೀವು ಹಬ್ಬಿಸುವ ಸುಳ್ಳು ಸುದ್ದಿಯಿಂದ ಅಚ್ಚರಿಯೇನೂ ಆಗಿಲ್ಲ. ಉದಯಪುರ ಹಂತಕರು ಬಿಜೆಪಿ ಸದಸ್ಯರಲ್ಲ. ನಿಮ್ಮ ಒಳನುಸುಳುವಿಕೆ ಹೇಗಿದೆ ಅಂದರೆ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲು ಎಲ್​​​ಟಿಟಿಇ ಹಂತಕರು ಕಾಂಗ್ರೆಸ್ ಸೇರಲು ಯತ್ನಿಸಿದಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ನೀಡಿದ ಆಕ್ಷೇಪಾರ್ಹ ಹೇಳಿಕೆ ಬೆಂಬಲಿಸಿ ಕನ್ಹಯ್ಯಾ ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕೆ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್, ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಆಮೇಲೆ ಈ ಕೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದೀಗ ಆರೋಪಿಗಳಾದ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖೇರಾ, ಆರೋಪಿ ಅಖ್ತರಿ ಬಿಜೆಪಿ ನಾಯಕರಾದ  ಇರ್ಷಾದ್ ಚೈನ್‌ವಾಲಾ ಮತ್ತು ಮೊಹಮ್ಮದ್ ತಾಹಿರ್ ಜತೆಗಿರುವ ಫೋಟೊವನ್ನು ತೋರಿಸಿದ್ದಾರೆ.

“ಪ್ರಮುಖ ಆರೋಪಿ ರಿಯಾಜ್ ಅಟ್ಟಾರಿ ಆಗಾಗ್ಗೆ ರಾಜಸ್ಥಾನದ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಗುಲಾಬ್‌ಚಂದ್ ಕಟಾರಿಯಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು ಎಂದು ಖೇರಾ ಆರೋಪಿಸಿದ್ದಾರೆ.
ಇದು ಮಾತ್ರವಲ್ಲದೆ, ಪ್ರಮುಖ ಆರೋಪಿ ರಿಯಾಜ್ ಅಟ್ಟಾರಿ ಬಿಜೆಪಿಯ ರಾಜಸ್ಥಾನದ ಅಲ್ಪಸಂಖ್ಯಾತ ಘಟಕದ ಸಭೆಗಳಲ್ಲಿ ಭಾಗವಹಿಸುತ್ತಿರುವ ಚಿತ್ರಗಳು ಸಹ ಇವೆ ಎಂದಿದ್ದಾರೆ ಖೇರಾ.

ನವೆಂಬರ್ 30, 2018 ರಂದು ಫೇಸ್‌ಬುಕ್‌ನಲ್ಲಿ ಬಿಜೆಪಿ ನಾಯಕ ಇರ್ಷಾದ್ ಚೈನ್‌ವಾಲಾ ಮತ್ತು ಫೆಬ್ರವರಿ 3, 2019, ಅಕ್ಟೋಬರ್ 27, 2019, ಆಗಸ್ಟ್ 10, 2021, ನವೆಂಬರ್ 28, 2019 ರಂದು ಮೊಹಮ್ಮದ್ ತಾಹಿರ್ ಅವರ ಪೋಸ್ಟ್‌ಗಳು ಮತ್ತು ಇತರ ಪೋಸ್ಟ್‌ಗಳಿಂದ ತಿಳಿಯುವುದೇನೆಂದರೆ ಅಟ್ಟಾರಿ ಬಿಜೆಪಿ ನಾಯಕರಿಗೆ ನಿಕಟವಾಗಿದ್ದವ ಮಾತ್ರವಲ್ಲ, ಬಿಜೆಪಿಯ ಸಕ್ರಿಯ ಸದಸ್ಯನೂ ಆಗಿದ್ದ ಎಂದು ಖೇರಾ ಆರೋಪಿಸಿದ್ದಾರೆ.