ಮುಂಬೈ, ಮೇ 19: ಬಿಜೆಪಿ ಅಧಿಕಾರಕ್ಕೆ ಮರಳಿದರೆ ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸುತ್ತಾರೆ ಎಂದು ಶಿವಸೇನಾ ಯುಬಿಟಿ ಬಣದ ಅಧ್ಯಕ್ಷ ಉದ್ಧವ್ ಠಾಕ್ರೆ (Uddhav Thackeray) ಎಚ್ಚರಿಸಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಗೆ ಈಗ ಆರೆಸ್ಸೆಸ್ ಬೇಕಿಲ್ಲ. ಬಿಜೆಪಿ ಇನ್ನೂ ಎಳಸಿದ್ದಾಗ ಆರೆಸ್ಸೆಸ್ ಬೇಕಿತ್ತು. ಈಗ ಅದು ಬೆಳೆದಿದ್ದು ಆರೆಸ್ಸೆಸ್ ಬೆಂಬಲ ಬೇಕಾಗಿಲ್ಲ ಎಂದು ಹೇಳಿದ್ದಾರೆ. ನ್ಯೂಸ್18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
‘ಅವರು ಶಿವಸೇನಾ ಪಕ್ಷವನ್ನು ಬಳಸಿ ಬಿಸಾಡಲು ಯತ್ನಿಸಿದರು. ಮುಂದಿನ ದಿನಗಳಲ್ಲಿ ಅದೇ ರೀತಿಯ ಆಟವನ್ನು ಆರೆಸ್ಸೆಸ್ ಜೊತೆ ಆಡಲಿದ್ದಾರೆ. ಅದರ ಸುಳಿವನ್ನು ನಡ್ಡಾ ಕೂಡ ನೀಡಿದ್ದಾರೆ,’ ಎಂದು ಠಾಕ್ರೆ ತಿಳಿಸಿದ್ದಾರೆ.
‘ಇಲ್ಲಿಯವರೆಗೆ ಆರೆಸ್ಸೆಸ್ನ ಅಗತ್ಯತೆ ಇತ್ತು. ಈಗ ನಾವು ಸಮರ್ಥರಿದ್ದು, ಆರೆಸ್ಸೆಸ್ ಬೇಕಿಲ್ಲ ಎಂದು ನಡ್ಡಾ ಹೇಳುತ್ತಾರೆ. ಅವರು (ಬಿಜೆಪಿ) ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ಕಾರ್ಯಕರ್ತರಿಗೆ ಅಪಾಯ ಆಗುತ್ತದೆ. ಯಾಕೆಂದರೆ ಆರೆಸ್ಸೆಸ್ಸನ್ನು ಅವರು ನಿಷೇಧಿಸುತ್ತಾರೆ,’ ಎಂದು ಹೇಳಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಠಾಕ್ರೆ ಅವರು ಹಿಂದೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರೂ ಆರೆಸ್ಸೆಸ್ ಅನ್ನು ನಿಷೇಧಿಸಿದ್ದ ಸಂಗತಿಯನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಅದಾನಿ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಹೀಗಾಗಿಯೇ ಬಹಿರಂಗ ಚರ್ಚೆಗೆ ಬರ್ತಿಲ್ಲ: ರಾಹುಲ್
ಉದ್ಧವ್ ಠಾಕ್ರೆ ಅವರು ಭಾರತದಲ್ಲಿರುವ ಈಗಿನ ಪರಿಸ್ಥಿತಿಯನ್ನು ರಷ್ಯಾಗೆ ಹೋಲಿಸಿದ್ದಾರೆ. ‘ನಮ್ಮ ದೇಶವು ರಷ್ಯಾದಲ್ಲಿನ ಪರಿಸ್ಥಿತಿಗೆ ಹೋಗುತ್ತಿದೆ. ರಷ್ಯಾದಲ್ಲಿರುವ ರಾಜಕೀಯದಂತೆ ನಮ್ಮಲ್ಲಿನ ರಾಜಕೀಯ ಪ್ರಕ್ರಿಯೆಗಳು ಕೇವಲ ಒಬ್ಬ ನಾಯಕನಿಗೋಸ್ಕರ (ನರೇಂದ್ರ ಮೋದಿ) ಇದ್ದಂತಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ ನಡುವೆ ಯಾವ ವ್ಯತ್ಯಾಸವೂ ಇಲ್ಲ. ನರೇಂದ್ರ ಮೋದಿ ಅವರು ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ನಿಧಾನವಾಗಿ ನಾಶ ಮಾಡುತ್ತಿದ್ದಾರೆ,’ ಎಂದು ಉದ್ಧವ್ ಠಾಕ್ರೆ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ