‘ಮಹಾರಾಷ್ಟ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ’-ಮಾಜಿ ಸಿಎಂ ದೇವೇಂದ್ರ ಫಡ್ನವೀಸ್
ಕಳೆದ ಚುನಾವಣೆ ನಂತರ ಬಿಜೆಪಿಯನ್ನು ಬದಿಗೆ ಇಡಲೆಂದೇ ಶಿವಸೇನೆ ಕಾಂಗ್ರೆಸ್, ಎನ್ಸಿಪಿಯೊಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಸರ್ಕಾರ ರಚನೆ ಆದ ಮೇಲೆ ಪರಸ್ಪರರಲ್ಲಿ ಹೊಂದಾಣಿಕೆಯಿಲ್ಲದೆ ಅಲ್ಲಿನ ಮುನಿಸು ಎಂಬುದು ಬೂದಿಮುಚ್ಚಿದ ಕೆಂಡದಂತಾಗಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸುತ್ತದೆ ಎಂದು ಈಗಲೇ ಹೇಳಿದ್ದಾರೆ. ಅದರ ಬೆನ್ನಲ್ಲೇ, ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರು ಉದ್ಧವ್ ಠಾಕ್ರೆಯವರಿಗೆ ಪತ್ರೆ ಬರೆದು, ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೆ ಹತ್ತಿರವಾಗೋಣ. ಇಲ್ಲದಿದ್ದ ನಮ್ಮ ಪಕ್ಷ ದುರ್ಬಲಗೊಳ್ಳುತ್ತದೆ ಎಂದೂ ಸಲಹೆ ನೀಡಿದ್ದಾರೆ. ಶಿವಸೇನೆ ಕಾಂಗ್ರೆಸ್-ಎನ್ಸಿಪಿಯೊಂದಿಗೆ ಮೈತ್ರಿ ಮುರಿದುಕೊಂಡು, ಮತ್ತೆ ಬಿಜೆಪಿಯೊಂದಿಗೆ ಸೇರಲಿದೆಯಾ? ಎಂಬ ಕುತೂಹಲ, ಪ್ರಶ್ನೆಗಳು ಎದ್ದ ಬೆನ್ನಲ್ಲೇ ಅದಕ್ಕೊಂದು ಉತ್ತರ ಸಿಕ್ಕಿದೆ. ಮಹಾರಾಷ್ಟ್ರದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತದೆ. ಯಾರೊಂದಿಗೂ ಮೈತ್ರಿಯಿಲ್ಲ ಎಂದು ಹೇಳಿದ್ದಾರೆ.
ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಮುಂದಿನ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸುತ್ತದೆ. ಈಗಿನ ಮಹಾ ವಿಕಾಸ್ ಅಘಾಡಿಯಲ್ಲಿರುವ ಪಕ್ಷಗಳು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ..ಯಾರಿಗೆ ಚಪ್ಪಲಿ ಎಸೆಯುತ್ತಾರೆ? ಯಾರಿಗೆ ಹಾರ ಹಾಕುತ್ತಾರೆ ಎಂಬ ವಿಚಾರ ಅವರಿಗೇ ಬಿಟ್ಟಿದ್ದು ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಯಾವುದೇ ಬದಲಾವಣೆಗಳನ್ನೂ ಮಾಡದೆ, ಸಮಸ್ಯೆಗಳಿಗೆ ಪರಿಹಾರ ನೀಡದೆ ಚುನಾವಣೆಯ ಬಗ್ಗೆ ಮಾತನಾಡಿದ ಜನರು ಚಪ್ಪಲಿಯಲ್ಲಿ ಹೊಡೆಯುತ್ತಾರೆ ಎಂದು ಸಿಎಂ ಉದ್ಧವ್ ಠಾಕ್ರೆ ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಹೀಗೆ ಮಾತನಾಡಿದ್ದಾರೆ. ನಮ್ಮ ಬಿಜೆಪಿ ಪಕ್ಷ ಸಾರ್ವಜನಿಕರೊಂದಿಗೆ ಬೆಸೆದಿರುವ ಪಕ್ಷ. ನಾವು ಜನರ ಒಳಿತಿಗಾಗಿಯೇ ದುಡಿಯುತ್ತಿದ್ದೇವೆ. ಮುಂದೆಯೂ ದುಡಿಯುತ್ತೇವೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಕಳೆದ ಚುನಾವಣೆ ನಂತರ ಬಿಜೆಪಿಯನ್ನು ಬದಿಗೆ ಇಡಲೆಂದೇ ಶಿವಸೇನೆ ಕಾಂಗ್ರೆಸ್, ಎನ್ಸಿಪಿಯೊಟ್ಟಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಸರ್ಕಾರ ರಚನೆ ಆದ ಮೇಲೆ ಪರಸ್ಪರರಲ್ಲಿ ಹೊಂದಾಣಿಕೆಯಿಲ್ಲದೆ ಅಲ್ಲಿನ ಮುನಿಸು ಎಂಬುದು ಬೂದಿಮುಚ್ಚಿದ ಕೆಂಡದಂತಾಗಿದೆ. ಈ ಮಧ್ಯೆ ಕಾಂಗ್ರೆಸ್, ಶಿವಸೇನೆಯೊಟ್ಟಿಗೆ ಇದ್ದುಕೊಂಡೇ ಮಹಾರಾಷ್ಟ್ರದಲ್ಲಿ ಬಲಿಷ್ಠ ಪಕ್ಷವಾಗಿ ಬೆಳೆಯುವ ಪ್ರಯತ್ನ ಮುಂದುವರಿಸಿದೆ. ಹಾಗೇ, ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಇಲ್ಲ ಎಂಬುದನ್ನು ಸಮಯ ಸಿಕ್ಕಾಗಲೆಲ್ಲ ಸ್ಪಷ್ಟಪಡಿಸುತ್ತಲೇ ಇದೆ.
ಇದನ್ನೂ ಓದಿ: ಬಿಗ್ ಬಾಸ್ 2ನೇ ಇನ್ನಿಂಗ್ಸ್ ಶುರುವಿಗೂ ಮುನ್ನ ದಿವ್ಯಾ ಉರುಡುಗಗೆ 5 ಲಕ್ಷ ಜನರ ಬೆಂಬಲ; ಏನಿದು ಲೆಕ್ಕಾಚಾರ?