ಭೋಪಾಲ್, ಮಾ.5: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಹೋದಲ್ಲಿ ಬಂದಲ್ಲಿ ಬಿಜೆಪಿ ಕಾರ್ಯಕರ್ತರು (BJP Workers) ಜೈ ಶ್ರೀರಾಮ್, ಮೋದಿ ಮೋದಿ ಘೋಷಣೆಗಳನ್ನು ಕೂಗುವುದನ್ನು ನೋಡಿರುತ್ತೀರಿ. ಹೀಗೆ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಈ ಹಿಂದೆ ರಾಹುಲ್ ಗಾಂಧಿ ಹಸ್ತಲಾಘವ ಮಾಡಿದ್ದರು. ಆದರೆ, ಈ ಬಾರಿ ಶೇಕ್ ಹ್ಯಾಂಡ್ ಕೊಡಲು ಬಂದ ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರು ಬಟಾಟೆ (ಆಲೂಗಡ್ಡೆ/ Potato) ನೀಡಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಇರುವಂತೆ, ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಎದುರಾದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಕೂಡಲೇ ವಾಹನವನ್ನು ನಿಲ್ಲಿಸುವಂತೆ ಹೇಳಿದ ರಾಹುಲ್ ಗಾಂಧಿ, ವಾಹನದಿಂದ ಇಳಿದು ನೇರವಾಗಿ ಬಿಜೆಪಿ ಕಾರ್ಯಕರ್ತರಿದ್ದಲ್ಲಿಗೆ ಹೋದರು.
ಈ ವೇಳೆ ಕಾರ್ಯಕರ್ತರು ಜೈ ಶ್ರೀರಾಮ್, ಜೈ ಶ್ರೀರಾಮ್, ಮೋದಿ-ಮೋದಿ ಎಂದು ಘೋಷಣೆಗಳನ್ನು ಕೂಗಿದರು. ಈ ನಡುವೆಯೂ ರಾಹುಲ್ ಗಾಂಧಿ ಅವರು ಬಿಜೆಪಿ ಕಾರ್ಯಕರ್ತರಿಗೆ ಹಸ್ತಲಾಘವ ಮಾಡಿದರು. ಈ ವೇಳೆ ಕೆಲವು ಕಾರ್ಯಕರ್ತರು ರಾಹುಲ್ ಗಾಂಧಿಗೆ ಚಿನ್ನ ತಯಾರಿಸಲು ಆಲೂಗಡ್ಡೆಯನ್ನು ನೀಡಿದರು. ರಾಹುಲ್ ಗಾಂಧಿ ಒಡಿಶಾ ಪ್ರವಾಸದ ವೇಳೆ ನಡೆದ ಘಟನೆ ಇದಾಗಿದೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿ ಅವರು 2017 ರಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಗುಜರಾತ್ ಭಾಷಣ ಮಾಡಿದ ರಾಹುಲ್ ಗಾಂಧಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋದಲ್ಲಿ, “ಮೆಷೀನ್ನ ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆಕಡೆಯಿಂದ ಚಿನ್ನ ಬರುತ್ತದೆ” ಎಂದು ಹೇಳುವುದನ್ನು ಕೇಳಬಹುದು.
ವಿಡಿಯೋ ವೈರಲ್ ನಂತರ ಬಿಜೆಪಿ ನಾಯಕರು, ಕಾರ್ಯಕರ್ತರು ರಾಹುಲ್ ಗಾಂಧಿ ಅವರನ್ನು ವ್ಯಂಗ್ಯವಾಡಲು ಆರಂಭಿಸಿದ್ದರು. ಅದಾಗ್ಯೂ, ಆಲೂಗಡ್ಡೆ ಹೇಳಿಕೆಯ ವಿಡಿಯೋ ಅರ್ಧ ಮಾತ್ರ ವೈರಲ್ ಆಗಿದೆ ಎನ್ನಲಾಗುತ್ತಿದೆ. ಆಲೂಗಡ್ಡೆಯಿಂದ ಚಿನ್ನ ತಯಾರಿಸುವ ಮೆಷೀನ್ ಬಗ್ಗೆ ಮೋದಿ ರೈತರಿಗೆ ಹೇಳಿದ ಮಾತನ್ನು ರಾಹುಲ್ ಹೇಳಿದ್ದಾರಷ್ಟೆ ಎಂಬ ವಾದವೂ ಇದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Tue, 5 March 24