ಕೋಲ್ಕತ್ತ: ಪಶ್ಚಿಮಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಇಟಾಹಾರ್ನ ಬಿಜೆಪಿ ಯುವ ನಾಯಕನ ಹತ್ಯೆಯಾಗಿದೆ. ಮಿಥುನ್ ಘೋಷ್ ಮೃತ ಯುವ ನಾಯಕರು. ರಾಜ್ಗ್ರಾಮ ಹಳ್ಳಿಯಲ್ಲಿರುವ ಇವರ ಮನೆಯ ಮುಂದೆಯೇ ದುಷ್ಕರ್ಮಿಗಳು ಮಿಥುನ್ಗೆ ಗುಂಡಿಕ್ಕಿ ಕೊಂದಿದ್ದಾರೆ. ಈ ಕೃತ್ಯ ಟಿಎಂಸಿ ಕಾರ್ಯಕರ್ತರದ್ದೇ ಆಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಟ್ವೀಟ್ ಮಾಡಿ, ಮಿಥುನ್ ಘೋಷ್ ಅವರು ಬಿಜೆಪಿ ಯುವ ಮೋರ್ಚಾದ ಉತ್ತರ ದಿನಾಜ್ಪುರ ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಇಟಾಹಾರ್ನಲ್ಲಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರಲ್ಲಿ ಖಂಡಿತ ಟಿಎಂಸಿ ಕೈವಾಡವಿದೆ. ಅವರು ತಮ್ಮ ಯಜಮಾನನ ಆಣತಿಗೆ ಅನುಸಾರವಾಗಿ ಇಂಥ ಕೃತ್ಯ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ. ಹಾಗೇ, ಮಿಥುನ್ ಘೋಷ್ ಸದಾ ನೆನಪಿರುತ್ತಾರೆ ಎಂದು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
@BJYM VP Uttar Dinajpur dist. Mithun Ghosh has been shot dead by assailants at Itahar. This is TMC’s handiwork written all over it. The bloodthirsty antisocial hound dogs who executed their master’s orders would be taken to task when the tide turns.
We won’t forget Mithun Ghosh. pic.twitter.com/V819egcHHt— Suvendu Adhikari • শুভেন্দু অধিকারী (@SuvenduWB) October 17, 2021
ಈ ದುರ್ಘಟನೆ ಭಾನುವಾರ ರಾತ್ರಿ 11 ಗಂಟೆ ಹೊತ್ತಿಗೆ ನಡೆದಿದೆ. ರಾಜ್ಗ್ರಾಮ ಹಳ್ಳಿಯಲ್ಲಿರುವ ತಮ್ಮ ಮನೆ ಎದುರು ಮಿಥುನ್ ಘೋಷ್ ನಿಂತಿದ್ದರು. ಮೋಟಾರ್ ಬೈಕ್ನಲ್ಲಿ ಅಲ್ಲಗೆ ಬಂದ ಕೆಲವರು ಮಿಥುನ್ ಹೊಟ್ಟೆಗೆ ಗುಂಡು ಹೊಡೆದಿದ್ದಾರೆ. ತುಂಬ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಮಿಥುನ್ ಘೋಷ್ರನ್ನು ಕೂಡಲೇ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಮೃತರಾಗಿದ್ದರು. ಈ ದುರ್ಘಟನೆ ಬೆನ್ನಲ್ಲೇ ಬಿಜೆಪಿ ಟಿಎಂಸಿ ವಿರುದ್ಧ ಆರೋಪ ಮಾಡಿದೆ. ಆದರೆ ಟಿಎಂಸಿ ತಾವೇನೂ ಮಾಡಿಲ್ಲ. ಬಿಜೆಪಿ ವೃಥಾ ಆರೋಪ ಮಾಡುತ್ತಿದೆ ಎಂದು ಹೇಳಿದೆ. ಇನ್ನು ಮಿಥುನ್ ಘೋಷ್ಗೆ ಈಗಾಗಲೇ ಹಲವು ಬಾರಿ ಜೀವ ಬೆದರಿಕೆ ಹಾಕಲಾಗಿತ್ತು. ಕೆಲವು ಬಾರಿ ಅವರ ಮೇಲೆ ಹಲ್ಲೆ ಪ್ರಯತ್ನವೂ ಆಗಿತ್ತು. ಪೊಲೀಸರಿಗೆ ಈ ಬಗ್ಗೆ ದೂರು ಕೂಡ ನೀಡಿದ್ದೆವು. ಆದರೆ ಪೊಲಿಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಉತ್ತರ ದಿನಾಜ್ಪುರ ಬಿಜೆಪಿ ಅಧ್ಯಕ್ಷ ವಸುದೇವ್ ಸರ್ಕಾರ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ಇಟಾಹಾರ್ ಶಾಸಕ ಮೊಹಾರಾಫ್ ಹುಸ್ಸೇನ್, ನಮ್ಮ ತೃಣಮೂಲ ಕಾಂಗ್ರೆಸ್ಗೂ, ಮಿಥುನ್ ಘೋಷ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಬೇರೆ ಯಾರಾದರೂ, ಇನ್ಯಾವುದೇ ದ್ವೇಷದ ಕಾರಣಕ್ಕೆ ಈ ಹತ್ಯೆ ಮಾಡಿಬಹುದು. ಪೊಲೀಸರ ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ ಪ್ರಚಾರ; ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ನಾಯಕರ ಹೋರಾಟ
ನಕಲಿ ಬಿಎಂಟಿಸಿ ಅಧಿಕಾರಿ ನೂರ್ ಅಹ್ಮದ್ ಬಂಧನ; ಆರೋಪಿ ಸ್ಟೈಲ್ಗೆ ದಂಗಾದ ಅಸಲಿ ಅಧಿಕಾರಿಗಳು
Published On - 12:33 pm, Mon, 18 October 21