ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಎಂಐ 17ವಿ5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನವಾಗಿ, ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಉಳಿದ 11 ಸೇನಾಧಿಕಾರಿಗಳು ದುರ್ಮರಣಕ್ಕೀಡಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಅಲ್ಲಿಗೆ ಹಿರಿಯ ಸೇನಾ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಹೆಲಿಕಾಪ್ಟರ್ ಪತನಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಹವಾಮಾನವೋ, ತಾಂತ್ರಿಕ ದೋಷವೋ ಅಥವಾ ಪೈಲಟ್ ನಿರ್ಲಕ್ಷ್ಯತನವೋ ಎಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ. ಅದೆಲ್ಲ ಗೊತ್ತಾಗಬೇಕು ಎಂದರೆ ಹೆಲಿಕಾಪ್ಟರ್ನ ಬ್ಲ್ಯಾಕ್ಸ್ ಬಾಕ್ಸ್ ಸಿಗಬೇಕಿತ್ತು. ನಿನ್ನೆಯಿಂದಲೂ ಸ್ಥಳದಲ್ಲಿದ್ದ ತನಿಖಾಧಿಕಾರಿಗಳು ಈ ಬ್ಲ್ಯಾಕ್ ಬಾಕ್ಸ್ಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಕೊನೆಗೂ ಆ ಬ್ಲ್ಯಾಕ್ ಬಾಕ್ಸ್ ಇಂದು ಪತ್ತೆಯಾಗಿದೆ. ಈ ಬಾಕ್ಸ್ಗೆ ಫ್ಲೈಟ್ ರೆಕಾರ್ಡರ್ ಎಂದೂ ಕರೆಯುತ್ತಾರೆ. ಹೆಲಿಕಾಪ್ಟರ್ ಪತನವಾಗುವುದಕ್ಕೂ ಮೊದಲು ಏನಾಯಿತು ಎಂಬುದನ್ನು ಇದು ತಿಳಿಸಲಿದೆ.
ಹೆಲಿಕಾಪ್ಟರ್ ಪತನಗೊಂಡಿದ್ದು ತಮಿಳುನಾಡಿನ ಕೂನೂರಿನ ಬಳಿಯ ಕಟ್ಟೇರಿ ಎಂಬ ಗ್ರಾಮದಲ್ಲಿ. ಇದು ಗುಡ್ಡಗಾಡು ಪ್ರದೇಶವಾಗಿದ್ದರೂ ಅಂಥ ದುರ್ಗಮ ಸ್ಥಳವಲ್ಲ. ಅದರಲ್ಲೂ ಹೀಗೆ ಸೇನೆಯ ಉನ್ನತ ಅಧಿಕಾರಿಗಳು ಪ್ರಯಾಣ ಮಾಡುವ ಹೆಲಿಕಾಪ್ಟರ್ಗಳನ್ನು ತುಂಬ ಜಾಗರೂಕತೆಯಿಂದ ಮೊದಲೇ ತಪಾಸಣೆ ಮಾಡಲಾಗುತ್ತದೆ. ಇನ್ನು ಹವಾಮಾನದಲ್ಲಿಏನಾದರೂ ಸಮಸ್ಯೆ ಇರಬಹುದು ಎಂದರೂ, ಉನ್ನತಾಧಿಕಾರಿಗಳು ಪ್ರಯಾಣ ಮಾಡುವುದಕ್ಕೂ ಮೊದಲು ಇನ್ನೊಂದು ಹೆಲಿಕಾಪ್ಟರ್ ಆ ಮಾರ್ಗದಲ್ಲಿ ಹೋಗಿ ಎಲ್ಲವನ್ನೂ ಚೆಕ್ ಮಾಡುತ್ತದೆ. ಅಂಥದ್ದರಲ್ಲಿ ನಿನ್ನೆ ಸಿಡಿಎಸ್ ಸೇರಿ ಇತರ 11 ಪ್ರಮುಖ ಅಧಿಕಾರಿಗಳು ಇದ್ದ ಹೆಲಿಕಾಪ್ಟರ್ ಪತನವಾಗಿದ್ದು ನಿಜಕ್ಕೂ ಸೋಜುಗ ಎನ್ನಿಸಿದೆ. ಇದರ ಉನ್ನತ ಮಟ್ಟದ ತನಿಖೆಯಾಗಲೇಬೇಕು ಎಂಬ ಆಗ್ರಹ ಬಲವಾಗಿ ಕೇಳಿದೆ. ಅದೆಲ್ಲದಕ್ಕೂ ಪ್ರಮುಖವಾಗಿ ಬೇಕಿದ್ದುದು ಇದೇ ಬ್ಲ್ಯಾಕ್ ಬಾಕ್ಸ್ ಆಗಿತ್ತು. ನಿನ್ನೆಯಿಂದ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ. ಇಂದು ತನಿಖಾಧಿಕಾರಿಗಳು ತಮ್ಮ ಹುಡುಕಾಟದ ವ್ಯಾಪ್ತಿಯನ್ನು ಘಟನೆ ನಡೆದ ಸ್ಥಳಕ್ಕಿಂತಲೂ ಒಂದು ಕಿಮೀ ದೂರದವರೆಗೆ ವಿಸ್ತರಿಸಿದ ನಂತರ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಏನಿದು ಬ್ಲ್ಯಾಕ್ ಬಾಕ್ಸ್?
ಬ್ಲ್ಯಾಕ್ ಬಾಕ್ಸ್ ಒಂದು ಉಪಕರಣವಾಗಿದ್ದು, ಇದನ್ನು ಏರ್ಕ್ರಾಫ್ಟ್ನಲ್ಲಿ ಅಳವಡಿಸಲಾಗುತ್ತದೆ. ಹೀಗೆ ಅಪಘಾತಗಳಾದಾಗ ತನಿಖೆಗೆ ಸಹಕಾರವಾಗಲಿ ಎಂಬ ದೃಷ್ಟಿಯಿಂದಲೇ ಇದನ್ನು ತಯಾರಿಸಲಾಗಿದೆ. ಇದೊಂತರ ಹಾರ್ಡ್ಡಿಸ್ಕ್ ಮಾದರಿಯ ಉಪಕರಣವಾಗಿದ್ದು, ಫ್ಲೈಟ್ಗೆ ಸಂಬಂಧಪಟ್ಟ ಎಲ್ಲ ಡಾಟಾಗಳು, ಕಾಕ್ಪಿಟ್ನಲ್ಲಿ ನಡೆಯುವ ಮಾತುಕತೆಗಳನ್ನು ಇದು ರೆಕಾರ್ಡ್ ಮಾಡುತ್ತದೆ. ಅಷ್ಟೇ ಅಲ್ಲ, ಸ್ವಯಂ ಚಾಲಿತ ಕಂಪ್ಯೂಟರ್ ಪ್ರಕಟಣೆಗಳು, ರೇಡಿಯೋ ಟ್ರಾಫಿಕ್, ಪ್ರಯಾಣಿಕರು, ಸಿಬ್ಬಂದಿಯ ಮಾತುಕತೆ, ಇಬ್ಬರು ಪೈಲಟ್ಗಳ ನಡುವಿನ ಮಾತುಕತೆ, ಪ್ರಕಟಣಾ ಮಾಹಿತಿ ಇತ್ಯಾದಿಗಳನ್ನೂ ಈ ರೆಕಾರ್ಡರ್ ಸಂರಕ್ಷಿಸಿಡುತ್ತದೆ. ಹೀಗಾಗಿ ಯಾವುದೇ ಹೆಲಿಕಾಪ್ಟರ್ ಪತನವಾದಾಗಲೂ ಮೊದಲು ಹುಡುಕುವುದು ಈ ಬ್ಲ್ಯಾಕ್ಬಾಕ್ಸ್ಗಾಗಿ. ನಿನ್ನೆ ತಮಿಳುನಾಡಿನಲ್ಲಿ ಪತನಗೊಂಡ ಹೆಲಿಕಾಪ್ಟರ್ನಲ್ಲಿ ಕೊನೆ ಕ್ಷಣದಲ್ಲಿ ಏನಾಯಿತು ಎಂಬುದನ್ನೂ ಇದೀಗ ಪತ್ತೆಯಾದ ಬ್ಲ್ಯಾಕ್ ಬಾಕ್ಸ್ ಬಹಿರಂಗಪಡಿಸಲಿದೆ.
ಬ್ಲ್ಯಾಕ್ ಬಾಕ್ಸ್ ಎಂದೇಕೆ ಕರೆಯುತ್ತಾರೆ?
ಬ್ಲ್ಯಾಕ್ ಬಾಕ್ಸ್ ಎಂದ ಮಾತ್ರಕ್ಕೆ ಈಗ ಅವು ಕಪ್ಪು ಬಣ್ಣದಲ್ಲಿ ಇರುವುದಿಲ್ಲ. ಸದ್ಯ ಕಡು ಕಿತ್ತಳೆ ಬಣ್ಣದಲ್ಲಿ ಇರುತ್ತದೆ. ಆದರೆ ಈ ಮೊದಲು ರೆಕಾರ್ಡರ್ ಬಾಕ್ಸ್ ಕಪ್ಪುಬಣ್ಣದಲ್ಲಿಯೇ ಇರುತ್ತಿತ್ತು. ಹಾಗಾಗಿ ಬ್ಲ್ಯಾಕ್ ಬಾಕ್ಸ್ ಎಂದು ಹೆಸರು ಬಂತು. ಇದು ಹೆಚ್ಚಿನ ತಾಪಮಾನ, ತುಕ್ಕು ನಿರೋಧಕವಾಗಿದ್ದು, ಸ್ಟೇನ್ಲೆಸ್ ಸ್ಟೀಲ್ ಕಂಟೇನರ್ನಲ್ಲಿ ಎರಡು ಹೊದಿಕೆಯಲ್ಲಿ ಸುತ್ತಿಡಲಾಗುತ್ತದೆ. ಈ ಕಪ್ಪು ಪೆಟ್ಟಿಗೆಗಳು ಬರೀ ಭೂಮಿ ಮೇಲೆ ಬಿದ್ದರಷ್ಟೇ ಅಲ್ಲ, ಸಮುದ್ರದಲ್ಲಿ ಬಿದ್ದರೂ ಹಾಳಾಗದಂತೆ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Army Chopper Crash: ಜನರಲ್ ಬಿಪಿನ್ ರಾವತ್ ನನಗೆ ನೀರು ಕೇಳಿದ್ದರು -ಪ್ರತ್ಯಕ್ಷದರ್ಶಿ