ದೆಹಲಿ: ಕೊರೊನಾ ವಿರುದ್ಧ ಹೋರಾಡಲು ವಿಶ್ವದ ವಿವಿಧ ದೇಶಗಳು ಭಾರತದ ಸಹಾಯಕ್ಕೆ ಧಾವಿಸಿವೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಬ್ರಿಟನ್ ಮತ್ತು ಜರ್ಮನಿ ಭಾರತಕ್ಕೆ ಸಹಾಯ ಹಸ್ತ ಚಾಚಿವೆ. ಶೀಘ್ರವೇ ಕೊವಿಶೀಲ್ಡ್ ಲಸಿಕೆ ಉತ್ಪಾದನೆಗೆ ಬಳಸುವ ಕಚ್ಚಾವಸ್ತುಗಳನ್ನು ಭಾರತಕ್ಕೆ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. ಲಸಿಕೆ ತಯಾರಿಕೆಗೆ ಅಗತ್ಯವಿರುವ ಕಚ್ಚಾವಸ್ತುಗಳ ಪೂರೈಕೆ ಬಗ್ಗೆ ಅಮೆರಿಕ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸೆರಮ್ ಇನ್ಸ್ಟಿಟ್ಯೂಟ್ಗೆ ಕಚ್ಚಾವಸ್ತುಗಳ ರಫ್ತಿಗೆ ಒಪ್ಪಿಗೆ ನೀಡಿದೆ. ಜತೆಗೆ ಕೊರೊನಾ ಟೆಸ್ಟಿಂಗ್ ಕಿಟ್, ವೆಂಟಿಲೇಟರ್ಗಳನ್ನು ಭಾರತಕ್ಕೆ ನೀಡಲು ಸಹ ಅಮೆರಿಕ ತೀರ್ಮಾನಿಸಿದೆ. ಲಸಿಕೆಯ ಕಚ್ಚಾವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುವ ಕುರಿತು ಭಾರತ– ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಮಾತುಕತೆ ನಡೆದಿದೆ.
ಕೊರೊನಾ ನಿರೋಧಕ ಲಸಿಕೆ ತಯಾರಿಕೆಗೆ ಭಾರತಕ್ಕೆ ಬೇಕಾದ ಕಚ್ಚಾವಸ್ತು ಒದಗಿಸಲು ಅಮೆರಿಕ ಸಮ್ಮಿತಿಸಿದೆ. ಈ ವಿಚಾರವನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಭಾನುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ತಿಳಿಸಿದ್ದಾರೆ. ಕೊರೊನಾ ಪಿಡುಗಿನಿಂದ ಅತಿಹೆಚ್ಚು ಅಪಾಯ ಎದುರಿಸುತ್ತಿರುವ ಎರಡೂ ದೇಶಗಳು ಸಾಂಕ್ರಾಮಿಕದ ವಿರುದ್ಧ ಒಗ್ಗೂಡಿ ಹೋರಾಡಲು ನಿರ್ಧರಿಸಿವೆ. ಸೋಂಕು ಕಾಣಿಸಿಕೊಂಡ ಆರಂಭದ ದಿನಗಳಲ್ಲಿ ಭಾರತ ಅಮೆರಿಕಕ್ಕೆ ನೆರವಾಗಿತ್ತು, ಇದೀಗ ಭಾರತದ ಸಂಕಷ್ಟ ಪರಿಸ್ಥಿತಿ ಅಮೆರಿಕ ಎಲ್ಲ ರೀತಿಯ ನೆರವು ಒದಗಿಸಲಿದೆ’ ಎಂದು ಅಮೆರಿಕ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ಇದರ ಜತೆಗೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಭಾರತಕ್ಕೆ ಬ್ರಿಟನ್ನ ಸಹಾಯಹಸ್ತವೂ ದೊರೆಯಲಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗುವ ಅತ್ಯಂತ ಪ್ರಮುಖ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ರಫ್ತು ಮಾಡುವುದಾಗಿ ಬ್ರಿಟನ್ ತಿಳಿಸಿದೆ. ಮುಂದಿನ ಮಂಗಳವಾರ ಬ್ರಿಟನ್ನಿಂದ ಹೊರಟ ಮೊದಲ ಹಂತದ ವೈದ್ಯಕೀಯ ಉಪಕರಣಗಳು ತಲುಪಲಿವೆ. ಮುಂದಿನ ದಿನಗಳಲ್ಲಿ ಒಟ್ಟು 9 ಕಂಟೇನರ್ಗಳಲ್ಲಿ ವೈದ್ಯಕೀಯ ಉಪಕರಣಗಳು ಭಾರತ ತಲುಪಲಿವೆ ಎಂದು ಹೇಳಲಾಗಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಕಾರಣ ಅವರ ಭೇಟಿ ರದ್ಧುಗೊಂಡಿದೆ.
ಅಮೆರಿಕ ಮತ್ತು ಬ್ರಿಟನ್ ಜತೆಗೆ ಜರ್ಮನಿ ಮತ್ತು ಯೂರೋಪಿಯನ್ ಯೂನಿಯನ್ಗಳು ಸಹ ಭಾರತಕ್ಕೆ ಕೊರೊನಾ ವಿರುದ್ಧ ಹೋರಾಡಲು ವೈದ್ಯಕೀಯ ಸಹಾಯ ಮಾಡುವುದಾಗಿ ತಿಳಿಸಿವೆ.
Upon request for assistance by #India, we have activated the #EU Civil Protection Mechanism.
The ?? will do its utmost to mobilise assistance to support people of ??.
Our #ERCC is already coordinating EU MS that are ready to provide urgently needed #oxygen & medicine rapidly.
— Janez Lenarčič (@JanezLenarcic) April 25, 2021
ಭಾರತದಲ್ಲಿ ಸತತ ನಾಲ್ಕನೇ ದಿನವೂ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷ ದಾಟಿದ್ದು ಕಳೆದ 24 ಗಂಟೆಗಳಲ್ಲಿ 3,49,691 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಶನಿವಾರ ದೇಶದಲ್ಲಿ 2,767 ಸಾವು ಸಂಭವಿಸಿದ್ದು 2,17,113 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 26,82,751 ಸಕ್ರಿಯ ಪ್ರಕರಣಗಳಿದ್ದು, ಕೊವಿಡ್ ರೋಗಿಗಳ ಸಂಖ್ಯೆ 1,69,60,172ಕ್ಕೇರಿದೆ. ಇಲ್ಲಿಯವರೆಗೆ 1,92,311 ಮಂದಿ ಸಾವಿಗೀಡಾಗಿದ್ದು, 1,40,85,110 ಮಂದಿ ಚೇತರಿಸಿಕೊಂಡಿದ್ದಾರೆ. 14,09,16,417 ಮಂದಿ ಕೊವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಏಪ್ರಿಲ್ 22 ರಂದು ಮೊದಲ ಬಾರಿ ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ 3 ಲಕ್ಷದಾಟಿತ್ತು. ಆ ದಿನ ಸೋಂಕಿತರ ಸಂಖ್ಯೆ 3,14,835 ವರದಿ ಆಗಿದ್ದು ಜಗತ್ತಿನಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ದಾಖಲೆಯಾಗಿತ್ತು
Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ
(Britain America Germany and European union helps India to fight against covid 19)
Published On - 11:40 pm, Sun, 25 April 21