
ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ನೇರ ನೇಮಕಾತಿ (Direct Recruitment) ಯೋಜನೆಯಡಿ ಖಾಲಿ ಇರುವ ಜೂನಿಯರ್ ಟೆಲಿಕಾಂ ಅಧಿಕಾರಿ (JTO – Telecom) ಕೇಡರ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಮತ್ತು ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೂತನ ಅಧಿಸೂಚನೆಯ ಅಡಿಯಲ್ಲಿ ದೇಶಾದ್ಯಂತ ಒಟ್ಟು 100 ಜೂನಿಯರ್ ಟೆಲಿಕಾಂ ಅಧಿಕಾರಿ (JTO) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವಿವಿಧ ವಲಯಗಳ ಆಧಾರದ ಮೇಲೆ ಈ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಭಾರತದಾದ್ಯಂತ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ವಿಸ್ತರಣೆಯ ಭಾಗವಾಗಿ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾಗುವ ವೃತ್ತಿಪರರಿಗೆ ಸಂಸ್ಥೆಯ ತಾಂತ್ರಿಕ ವಿಭಾಗಗಳನ್ನು ಮುನ್ನಡೆಸುವ ಜವಾಬ್ದಾರಿ ಸಿಗಲಿದೆ.
ಬಿಎಸ್‌ಎನ್‌ಎಲ್‌ನಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಇ (B.E) / ಬಿ.ಟೆಕ್ (B.Tech) ಪದವಿ ಮುಗಿಸಿರಬೇಕು ಅಥವಾ ಎಂಎಸ್‌ಸಿ (M.Sc), ಎಂಟೆಕ್ (M.Tech) ಉತ್ತೀರ್ಣರಾಗಿರಬೇಕು. ಇನ್ನು ಅಭ್ಯರ್ಥಿಗಳ ವಯಸ್ಸು ಜುಲೈ 3, 2026 ರ ಅನ್ವಯ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ, ಒಬಿಸಿ (OBC) ಅಭ್ಯರ್ಥಿಗಳಿಗೆ 3 ವರ್ಷಗಳು, ಎಸ್‌ಸಿ/ಎಸ್‌ಟಿ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ
ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಜುಲೈ 3, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕದ ಭಾಗವಾಗಿ ಸಾಮಾನ್ಯ (General), ಒಬಿಸಿ ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಅಭ್ಯರ್ಥಿಗಳು 2,000ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರಿಯಾಯಿತಿ ಇದ್ದು, ತಲಾ 1,000ರೂ. ಶುಲ್ಕ ನಿಗದಿಪಡಿಸಲಾಗಿದೆ. ಇನ್ನು ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಲಿಖಿತ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯ (Medical Exam) ಆಧಾರದ ಮೇಲೆ ಮಾಡಲಾಗುತ್ತದೆ. ಪ್ರಮುಖವಾಗಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 16,400 ರಿಂದ 40,500 ರೂ. ರ ಶ್ರೇಣಿಯಲ್ಲಿ ಆಕರ್ಷಕ ವೇತನವನ್ನು ನೀಡಲಾಗುತ್ತದೆ.
ಬಿಎಸ್‌ಎನ್‌ಎಲ್ ಜೆಟಿಒ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ವಿವರ ಈ ಕೆಳಗಿನಂತಿದೆ:
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Fri, 29 May 26