ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ; ಬಿಎಸ್​ಪಿ ವರಿಷ್ಠೆ ಮಾಯಾವತಿ ಘೋಷಣೆ

ಬಹುಜನ ಸಮಾಜವಾದಿ ಪಕ್ಷ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೆರಿಗಳ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ.

ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ; ಬಿಎಸ್​ಪಿ ವರಿಷ್ಠೆ ಮಾಯಾವತಿ ಘೋಷಣೆ
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ (ಸಂಗ್ರಹ ಚಿತ್ರ)
Edited By:

Updated on: Mar 15, 2021 | 6:24 PM

ಲಕ್ನೋ: ಬಹುಜನ ಸಮಾಜವಾದಿ ಪಕ್ಷ (BSP) ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೆರಿಗಳ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠೆ ಮಾಯಾವತಿ ಇಂದು (ಮಾರ್ಚ್ 15) ಘೋಷಿಸಿದ್ದಾರೆ. ಇತಿಹಾಸದಲ್ಲಿ ಇತರ ಪಕ್ಷಗಳ ಜತೆ ಮೈತ್ರಿಕೂಟ ರಚಿಸಿಕೊಂಡು ಕಹಿ ಅನುಭವಿಸಿದ್ದೇವೆ. ಹೀಗಾಗಿ, ಈ ಬಾರಿ 4 ರಾಜ್ಯಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಅಲ್ಲದೇ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿಯೂ ಬಹುಜನ ಸಮಾಜವಾದಿ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.

ಬಹುಜನ ಸಮಾಜವಾದಿ ಪಕ್ಷ ಸಂಸ್ಥಾಪಕ ಕಾನ್ಶಿ ರಾಮ್ ಅವರ 87ನೇ ಜನ್ಮ ದಿನಾಚರಣೆಯ ನಿಮಿತ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ಉತ್ತಮ ಸಾಧನೆ ಮಾಡಿತ್ತು. ಮತದಾರರು ಪಕ್ಷದ ಬಗ್ಗೆ ಭರವಸೆ ಹೊಂದಿದ್ದಾರೆ ಎಂಬುದನ್ನು ಅಂದಿನ ಪಂಚಾಯತ್ ಚುನಾವಣಾ ಫಲಿತಾಂಶ ಸಾಬೀತುಪಡಿಸಿತ್ತು. ಇದೇ ಆಧಾರದ ಮೇಲೆ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ಪಿ ಎಲ್ಲಾ 403 ಕ್ಷೇತ್ರಗಳಲ್ಲೂ ಸ್ವತಂತ್ರ ಸ್ಪರ್ಧೆ ನಡೆಸಲಿದೆ ಎಂದು ಅವರು ಘೋಷಿಸಿದ್ದಾರೆ.

ಇನ್ನೇನು ಕೆಲ ದಿನಗಳಲ್ಲಿ ಜರುಗಲಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಾಗಿ ಘೋಷಿಸಿದರೂ, ಪಕ್ಷ ಪ್ರಚಾರ ಕೈಗೊಳ್ಳುವ ಬಗೆಯನ್ನು ಬಿಎಸ್​ಪಿ ವರಿಷ್ಠೆ ಮಾಯಾವತಿ ವಿವರಿಸಿಲ್ಲ.

ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಯಾವಾಗ?

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಮೇ 2 ರಂದು ಮತ ಎಣಿಕೆ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಹಾಗೂ ಏಪ್ರಿಲ್ 29ರಂದು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಮೇ 2ರಂದು ನಡೆಯಲಿದೆ. ಕೇರಳದಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ. ಅಸ್ಸಾಂನಲ್ಲಿ 27 ಮಾರ್ಚ್, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.

ಅಸ್ಸಾಂನಲ್ಲಿ ಒಟ್ಟು 3 ಹಂತಗಳಲ್ಲಿ ಮತದಾನ ನಡೆಯಲಿದೆ. ಕೇರಳದಲ್ಲಿ 14 ಜಿಲ್ಲೆ, 148 ಕ್ಷೇತ್ರಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಕೂಡ ಒಂದೇ ಬಾರಿ ಚುನಾವಣೆ ನಡೆಯಲಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಕೇರಳ, ಪುದುಚೇರಿ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಚುನಾವಣೆ ವಿವರಗಳನ್ನು ನಾವು ಇವತ್ತು ನೀಡುತ್ತೇವೆ. ಬಿಹಾರದಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಸವಾಲಾಗಿತ್ತು. ಹೊಸ ಥರ ಪ್ಲಾನ್ ಮಾಡಬೇಕಾಯಿತು. ಅಲ್ಲಿನ ಮತದಾರರು ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಯೇ ಮತ ಚಲಾಯಿಸಿದ್ದು ವಿಶೇಷವಾಗಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಚುನಾವಣೆ ನಡೆಯಲಿರುವ ಎಲ್ಲ ರಾಜ್ಯಗಳಿಗೆ ಕಳೆದ ಜನವರಿ-ಫೆಬ್ರುವರಿಯಲ್ಲಿಯೇ ಭೇಟಿ ನೀಡಿದ್ದರು. ಅಗತ್ಯ ಸಿದ್ಧತೆ, ಸಮಾಲೋಚನೆಗಳನ್ನು ಆರಂಭಿಸಿದ್ದೇವೆ.ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಾವು ಮುಂದುವರಿಯುತ್ತೇವೆ. ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನ್ಯಾಯಸಮ್ಮತ ಚುನಾವಣೆ ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: TV9 Digital Live: ಒಂದು ದೇಶ-ಒಂದು ಚುನಾವಣೆ; ಅರ್ಥಪೂರ್ಣ ಚರ್ಚೆಗೆ ವೇದಿಕೆ ಕಲ್ಪಿಸಿದ ಟಿವಿ9 ಡಿಜಿಟಲ್ ಲೈವ್

ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ