ಬುಲ್ಲಿ ಬಾಯ್ ವಿವಾದಿತ ಆ್ಯಪ್ ಸೃಷ್ಟಿಸಿದ 21 ವರ್ಷದ ನೀರಜ್ ಬಿಷ್ಣೋಯ್ ಎಂಬುವನನ್ನು ಇಂದು ದೆಹಲಿ ಪೊಲೀಸರು ಆಸ್ಸಾಂನಲ್ಲಿ ಬಂಧಿಸಿದ್ದಾರೆ. ಅಲ್ಲಿಗೆ, ಪ್ರಸ್ತುತ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಬುಲ್ಲಿ ಆ್ಯಪ್ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಇದರಲ್ಲಿ ಹಲವು ಮುಸ್ಲಿಂ ಮಹಿಳೆಯರ ಫೋಟೋವನ್ನು ಅವರಿಗೇ ಗೊತ್ತಿಲ್ಲದಂತೆ ಹಾಕಿ, ವರ್ಚ್ಯುವಲ್ ಹರಾಜು ಕರೆಯಲಾಗಿತ್ತು. ಅಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಅವಹೇಳನಕಾರಿ, ಅಸಭ್ಯ ಕಾಮೆಂಟ್ಗಳನ್ನೂ ಹಾಕಲಾಗಿತ್ತು. ಅದನ್ನೀಗ ಪೊಲೀಸರು ಬೇಧಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಹೀಗೆ ಬಂಧಿತರಾದವರೆಲ್ಲ ವಿದ್ಯಾರ್ಥಿಗಳೇ ಆಗಿದ್ದಾರೆ. ಸದ್ಯ ನಾಲ್ವರಲ್ಲಿ ಒಬ್ಬಳು ಯುವತಿ, ಇನ್ನು ಮೂವರು ಯುವಕರು.
ಇದೀಗ ಬಂಧಿತನಾಗಿರುವ ನೀರಜ್ ಬಿಷ್ಣೋಯ್ ಭೋಪಾಲ್ನಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ. ಅಸ್ಸಾಂನ ದಿಗಂಬರ್ ಜೊರ್ಹಾತ್ನ ನಿವಾಸಿ. ಅಲ್ಲಿಗೇ ಹೋಗಿ ಬಂಧಿಸಿರುವ ಪೊಲೀಸರು, ಬುಲ್ಲಿ ಬಾಯ್ ಆ್ಯಪ್ ತಯಾರಿಸಲು ಆತ ಬಳಸಿದ್ದ ಡಿವೈಸ್ನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಹಾಗೇ, ಅಸ್ಸಾಂನಿಂದ ಆತನನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಿದ್ಧತೆಯೂ ನಡೆದಿದೆ. ಈ ಮೊದಲು ಬಂಧಿತರದಾವರು ಶ್ವೇತಾ ಸಿಂಗ್ (18) , ಮಯಾಂಕ್ ರಾವಲ್ (21) ಮತ್ತು ವಿಶಾಲ್ ಕುಮಾರ್ ಝಾ (21). ಇವರಲ್ಲಿ ಶ್ವೇತಾ ಮತ್ತು ಮಯಾಂಕ್ ಉತ್ತರಾಖಂಡ್ನಲ್ಲಿ ಬಂಧಿಸಲ್ಪಟ್ಟಿದ್ದರೆ, ವಿಶಾಲ್ ಕುಮಾರ್ನನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. ಇವರನ್ನೆಲ್ಲ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬುಲ್ಲಿ ಬಾಯ್ ಆ್ಯಪ್ ಸೃಷ್ಟಿಯಲ್ಲಿ ಶ್ವೇತಾಳೇ ಮಾಸ್ಟರ್ಮೈಂಡ್ ಎಂದು ಹೇಳಲಾಗಿತ್ತು. ಆದರೆ ನಿಜಕ್ಕೂ ಈ ನೀರಜ್ ಪ್ರಮುಖ ಆರೋಪಿ ಎಂದು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ನ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ. ಗಿಟ್ಹಬ್ ವೆಬ್ಸೈಟ್ ಮೂಲಕ ಈ ಆ್ಯಪ್ನ್ನು ಸೃಷ್ಟಿಸಿದ್ದಾನೆ. ಬುಲ್ಲಿ ಬಾಯ್ ಆ್ಯಪ್ಗೆ ಸಂಬಂಧಪಟ್ಟ ಪ್ರಧಾನ ಟ್ವಿಟ್ ಹ್ಯಾಂಡಲ್ ಈತನ ಬಳಿಯೇ ಇದೆ ಎಂದೂ ಮಾಹಿತಿ ನೀಡಿದ್ದಾರೆ. (ಗಿಟ್ಹಬ್ (GitHub) ಎನ್ನುವುದು ಡೆವಲಪರ್ಗಳು Git ಅನ್ನು ಬಳಸಿಕೊಂಡು ತಮ್ಮ ಸೋರ್ಸ್ ಕೋಡ್ಗಳನ್ನು ಸಂಗ್ರಹಿಸಬಹುದಾದ ಮತ್ತು ನಿರ್ವಹಿಸಬಹುದಾದ ವೆಬ್ಸೈಟ್ ಆಗಿದೆ. ಸಾಫ್ಟ್ವೇರ್ಗೆ ಮಾಡಿದ ಬದಲಾವಣೆಗಳನ್ನು Git ಟ್ರ್ಯಾಕ್ ಮಾಡುತ್ತದೆ, ಇದು ಪ್ರೋಗ್ರಾಮರ್ಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಪರಿಣಾಮಕಾರಿಯಾಗಿ ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ. ಗಿಟ್ಹಬ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ).
ಕಳೆದ ತಿಂಗಳು ಸುಲ್ಲಿ ಡೀಲ್ಸ್ ಎಂಬ ಆ್ಯಪ್ ವಿವಾದ ಎಬ್ಬಿಸಿತ್ತು. ಅಂದರೆ ಇದೂ ಕೂಡ ಮಸ್ಲಿಂ ಮಹಿಳೆಯರನ್ನು ಹರಾಜು ಹಾಕಿದ್ದ ಆ್ಯಪ್. ಸುಲ್ಲಿ ಎಂಬುದು ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡುವ ಒಂದು ಶಬ್ದವಾಗಿದೆ. ಈ ಸುಲ್ಲಿ ಡೀಲ್ಸ್ ಬೆನ್ನಲ್ಲೇ ಬುಲ್ಲಿ ಬಾಯ್ ಆ್ಯಪ್ ಬೆಳಕಿಗೆ ಬಂದಿದೆ. ಮೊಟ್ಟಮೊದಲು ಮುಸ್ಲಿಂ ಮಹಿಳಾ ಪತ್ರಕರ್ತರೊಬ್ಬರು ತಮ್ಮ ಫೋಟೋ ಇಲ್ಲಿ ಅಪ್ಲೋಡ್ ಆಗಿದ್ದನ್ನು ನೋಡಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.