ಬುಲ್ಲಿ ಬಾಯ್ ಪ್ರಕರಣದ ಪ್ರಮುಖ ಆರೋಪಿ ನೀರಜ್ ಮನೆಯಲ್ಲಿ ಹೇಗಿರುತ್ತಿದ್ದ? ಕುಟುಂಬಸ್ಥರು ತಿಳಿಸಿದ ಶಾಕಿಂಗ್ ಮಾಹಿತಿ ಇಲ್ಲಿದೆ
Bulli Bai Arrest: ‘ಬುಲ್ಲಿ ಬಾಯ್’ ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಮನೆಯಲ್ಲಿ ಹೇಗಿರುತ್ತಿದ್ದ ಎಂಬುದನ್ನು ಅವರ ತಂದೆ ವಿವರಿಸಿದ್ದಾರೆ. ಯಾವಾಗಲೂ ಲ್ಯಾಪ್ಟಾಪ್ ಮುಂದೆ ಆತ ಕೂತಿರುತ್ತಿದ್ದ ನೀರಜ್, ಹೊರಗೆಲ್ಲಾ ತಿರುಗಾಡುವುದೇ ಅಪರೂಪವಾಗಿತ್ತು ಎಂದಿದ್ದಾರೆ ಅವರು.
‘ಬುಲ್ಲಿ ಬಾಯ್’ ಆಪ್ ಸೃಷ್ಟಿಸಿದ 21 ವರ್ಷದ ನೀರಜ್ ಬಿಷ್ಣೋಯ್ ಕುರಿತು ಒಂದೊಂದೇ ಮಾಹಿತಿ ಹೊರಬರುತ್ತಿದ್ದು, ಎಲ್ಲರನ್ನೂ ಚಕಿತಗೊಳಿಸುತ್ತಿದೆ. ಗಿಟ್ ಹಬ್ ಮೂಲಕ ಸೃಷ್ಟಿಸಲಾದ ‘ಬುಲ್ಲಿ ಬಾಯ್’ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿತ್ತು. ಇದರ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ನನ್ನು ಪೊಲೀಸರು ಗುರುವಾರ ಅಸ್ಸಾಂನ ಜೋರ್ಹತ್ನಲ್ಲಿ ಬಂಧಿಸಿದ್ದರು. ಇದಕ್ಕೂ ಮುನ್ನಶ್ವೇತಾ ಸಿಂಗ್ (18) , ಮಯಾಂಕ್ ರಾವಲ್ (21) ಮತ್ತು ವಿಶಾಲ್ ಕುಮಾರ್ ಝಾ (21) ಎಂಬುವವರನ್ನು ಬಂಧಿಸಲಾಗಿತ್ತು. ಎಲ್ಲರೂ ವಿದ್ಯಾರ್ಥಿಗಳೇ ಆಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿತ್ತು. ಇದೀಗ ನೀರಜ್ ಬಿಷ್ಣೋಯ್ ಕುಟುಂಬ ಆತನ ಬಗ್ಗೆ ಹಲವು ಶಾಕಿಂಗ್ ಮಾಹಿತಿ ನೀಡಿದ್ದು, ನೀರಜ್ ಯಾವಾಗಲೂ ಲ್ಯಾಪ್ಟಾಪ್ನಲ್ಲಿ ಮುಳುಗಿರುತ್ತಿದ್ದ; ತಡರಾತ್ರಿಯಾದರೂ ಎದ್ದೇಳುತ್ತಿರಲಿಲ್ಲ ಎಂದಿದ್ದಾರೆ.
ನೀರಜ್ ಬಿಷ್ಣೋಯ್ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಜೋರ್ಹಾತ್ನಲ್ಲಿ. ಭೋಪಾಲ್ ವಿಶ್ವವಿದ್ಯಾಲಯದ ವಿಐಟಿಯಲ್ಲಿ ಸೀಟ್ ದೊರಕುವ ಮುನ್ನ ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಷ್ಣೋಯ್ ಓದುತ್ತಿದ್ದ. ಆದರೆ ಎಂದೂ ಆತ ನೇರವಾಗಿ ತರಗತಿಗೆ ತೆರಳಿರಲಿಲ್ಲ. ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ಆನ್‌ಲೈನ್ ತರಗತಿಗಳೇ ನಡೆಯುತ್ತಿದ್ದವು.
ಕಿರಾಣಿ ಅಂಗಡಿ ಮಾಲಿಕರಾದ ಅವರ ತಂದೆ ಹೇಳಿರುವ ಪ್ರಕಾರ, ಅವರಿಗೆ ಪುತ್ರನ ಬಂಧನದ ಹಿನ್ನೆಲೆ, ಅದಕ್ಕೆ ಕಾರಣವಾಗಿದ್ದರ ಕುರಿತು ಏನೂ ಸುಳಿವಿರಲಿಲ್ಲವಂತೆ. ‘‘ನಮಗೆ ಏನೂ ತಿಳಿದಿಲ್ಲ. ಇಡೀ ಕುಟುಂಬ ಶಾಕ್ಗೆ ಒಳಗಾಗಿದ್ದೇವೆ. ಬುಧವಾರ ರಾತ್ರಿ 11ಕ್ಕೆ ಪೊಲೀಸರು ಬರುವಾಗ ನಾವು ನಿದ್ರೆಗೆ ಜಾರಿದ್ದೆವು’’ ಎಂದಿದ್ದಾರೆ ನೀರಜ್ ತಂದೆ. ಅಲ್ಲದೇ ಪುತ್ರನ ಬಂಧನದಲ್ಲಿ ಏನೋ ಎಡವಟ್ಟಾಗಿದೆ ಎಂಬುದು ಅವರ ಅಭಿಪ್ರಾಯ. ಆದರೆ ಪೊಲೀಸರ ಪ್ರಕಾರ ನೀರಜ್ನೇ ಪ್ರಕರಣದ ಪ್ರಮುಖ ಆರೋಪಿ!
ಮಗನ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ನೀರಜ್ ತಂದೆ, ‘‘ಆತ ತಡರಾತ್ರಿಯವರೆಗೂ ಲ್ಯಾಪ್ಟಾಪ್ನಲ್ಲೇ ಮುಳುಗಿರುತ್ತಿದ್ದ. ಬಂಧನದ ಹಿಂದಿನ ದಿನವೂ ಹಾಗೇ ಇದ್ದ. ಆತ ಏನು ಮಾಡುತ್ತಿದ್ದ ಎಂಬುದರ ಅರಿವು ನಮಗಿರಲಿಲ್ಲ. ನಾನು, ನನ್ನ ಪತ್ನಿ ಆತನಿಗೆ ಸಾಕು, ಲ್ಯಾಪ್ಟಾಪ್ ಮುಚ್ಚಿಡು ಎಂದರೆ, ಇನ್ನೂ ಐದು ನಿಮಿಷ ಎನ್ನುತ್ತಿದ್ದ’’ ಎಂದಿದ್ದಾರೆ.
‘‘ನೀರಜ್ ಬಿಷ್ಣೋಯ್ ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ. ಕಂಪ್ಯೂಟರ್ ಸೈನ್ಸ್ನಲ್ಲೂ ಮುಂದಿದ್ದ. ಶಾಲಾ ಸಮಯದಲ್ಲಿ ಯಾವುದೇ ಕೆಟ್ಟ ಹಿನ್ನೆಲೆಯನ್ನು ಆತ ಹೊಂದಿರಲಿಲ್ಲ. ನೀರಜ್ನನ್ನು ಶಾಲೆಗೆ ಸೈಕಲ್ನಲ್ಲಿ ಕರೆದುಕೊಂಡು ಹೋಗುತ್ತಿದ್ದೆ. ಇತ್ತೀಚೆಗೆ ಆತನ ಯಾವುದೇ ಸ್ನೇಹಿತರನ್ನು ನಾನು ಭೇಟಿಯಾಗಿಲ್ಲ. ಕಾರಣ, ಆತ ತನ್ನ ಕೊಠಡಿಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ, ಹೊರಗೆ ಬರುವುದು ಅಪರೂಪವಾಗಿತ್ತು’’ ಎಂದಿದ್ದಾರೆ ನೀರಜ್ ತಂದೆ.
ಬಿಷ್ಣೋಯ್ ಕಳೆದ ತಿಂಗಳು ತನ್ನ ತಾಯಿಯೊಂದಿಗೆ ರಾಜಸ್ಥಾನಕ್ಕೆ ತೆರಳಿ ವಿವಾಹವೊಂದರಲ್ಲಿ ಭಾಗವಹಿಸಿದ್ದ. ಡಿಸೆಂಬರ್ 25ರಂದು ಮರಳಿದ್ದರು ಎಂದೂ ಬಿಷ್ಣೋಯ್ ತಂದೆ ಮಾಹಿತಿ ನೀಡಿದ್ದಾರೆ. ನೀರಜ್ ಬಿಷ್ಣೋಯ್ಗೆ ಇಬ್ಬರು ಸೋದರಿಯರಿದ್ದು, ಒಬ್ಬರು ಕಾನೂನು ಹಾಗೂ ಮತ್ತೊಬ್ಬರು ಗಣಿತ ಶಾಸ್ತ್ರವನ್ನು ವ್ಯಾಸಂಗಮಾಡುತ್ತಿದ್ದಾರೆ.
ಬಿಷ್ಣೋಯ್ ಬಂಧನದ ಕುರಿತು ಪೊಲೀಸರು ಹೇಳಿದ್ದೇನು? ಬುಲ್ಲಿ ಬಾಯಿ ಆ್ಯಪ್ ರೂಪಿಸಿದ ಆರೋಪದ ಮೇಲೆ ಅಸ್ಸಾಂನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರಜ್ ಬಿಷ್ಣೋಯ್ ಬಂಧಿಸಿದ್ದ ದೆಹಲಿ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದರು. ಆ್ಯಪ್ ಸೃಷ್ಟಿಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ .ಬಿಷ್ಣೋಯಿಯನ್ನು ಗುರುವಾರ ರಾತ್ರಿ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಿಂದ ತಾಂತ್ರಿಕ ಪುರಾವೆಗಳನ್ನು ಪಡೆದುಕೊಂಡಿದ್ದು, ಆತನ ಬಂಧನದೊಂದಿಗೆ ಪ್ರಕರಣದ ಸಂಪೂರ್ಣ ಜಾಲವನ್ನು ಭೇದಿಸಲಾಗಿದೆ. ವಿಚಾರಣೆಯಲ್ಲಿ ಆ್ಯಪ್ ಅನ್ನು ನವೆಂಬರ್ 2021 ರಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಡಿಸೆಂಬರ್ 2021 ರಲ್ಲಿ ನವೀಕರಿಸಲಾಗಿದೆ ಎಂದು ಬಿಷ್ಣೋಯ್ ಬಹಿರಂಗಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದರು.
ಬಿಷ್ಣೋಯಿಯನ್ನು ಭೋಪಾಲ್‌ನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ‘ನೀರಜ್ ಬಿಷ್ಣೋಯ್ ಸೆಪ್ಟೆಂಬರ್ 2020 ರಿಂದ ಆನ್‌ಲೈನ್ ಮೂಲಕ ಬಿಟೆಕ್ ಓದುತ್ತಿದ್ದಾನೆ. ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅದರಂತೆ, ಮುಂದಿನ ಸೂಚನೆ ಬರುವವರೆಗೆ ನೀರಜ್ನನ್ನು ವಿಶ್ವವಿದ್ಯಾಲಯದಿಂದ ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಉಪಕುಲಪತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಬುಲ್ಲಿ ಬಾಯ್ ಆ್ಯಪ್ ಲಾಂಚ್ ಮಾಡಿರುವ ಆರೋಪದಲ್ಲಿ ಯುವಕನೊಬ್ಬ ಮುಂಬೈ ಪೊಲೀಸರಿಗೆ ಸೆರೆ ಸಿಕ್ಕಿದ್ದು ಬೆಂಗಳೂರಲ್ಲಿ!
Published On - 12:05 pm, Fri, 7 January 22