AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೌರತ್ವ ತಿದ್ದುಪಡಿ ಕಾಯ್ದೆ: ಹಿಂಸೆಗೆ ತಿರುಗಿದ ರಾಷ್ಟ್ರ ರಾಜಧಾನಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ದೆಹಲಿ: ರಾಷ್ಟ್ರ ರಾಜಧಾನಿ ಧಗಧಗನೆ ಹೊತ್ತಿ ಉರಿಯುತ್ತಿದೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ವಿರೋಧಿಸಿ ದೇಶದ ನಾನಾ ಕಡೆ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರೋ ಬೆನ್ನಲ್ಲೇ ದೆಹಲಿಯಲ್ಲೂ ಕಿಡಿ ಹೊತ್ತಿದೆ. ಪ್ರತಿಭಟನಾಕಾರರ ಕೃತ್ಯಕ್ಕೆ ರಾಷ್ಟ್ರ ರಾಜಧಾನಿ ನಲುಗಿ ಹೋಗಿದ್ದು, ಎಲ್ಲೆಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೆಹಲಿಯಲ್ಲಿ ಎಲ್ಲಿ ನೋಡಿದ್ರೂ ಕಿರುಚಾಟ, ಚೀರಾಟ. ಧಗಧಗನೆ ಹೊತ್ತಿ ಉರಿಯುತ್ತಿರುವ ವಾಹನಗಳು. ಇನ್ನು ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿರುವ ಖಾಕಿ ಪಡೆ. ಮೊದಲು ಹೋರಾಟ.. ಆಮೇಲೆ ಹಿಂಸಾಚಾರ..! ಅಂದಹಾಗೆ ನಿನ್ನೆ ಸಂಜೆ ದೆಹಲಿಯ ಜಾಮೀಯಾ ಮಿಲಿಯಾ […]

ಪೌರತ್ವ ತಿದ್ದುಪಡಿ ಕಾಯ್ದೆ: ಹಿಂಸೆಗೆ ತಿರುಗಿದ ರಾಷ್ಟ್ರ ರಾಜಧಾನಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಸಾಧು ಶ್ರೀನಾಥ್​
|

Updated on: Dec 16, 2019 | 7:07 AM

Share

ದೆಹಲಿ: ರಾಷ್ಟ್ರ ರಾಜಧಾನಿ ಧಗಧಗನೆ ಹೊತ್ತಿ ಉರಿಯುತ್ತಿದೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ವಿರೋಧಿಸಿ ದೇಶದ ನಾನಾ ಕಡೆ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರೋ ಬೆನ್ನಲ್ಲೇ ದೆಹಲಿಯಲ್ಲೂ ಕಿಡಿ ಹೊತ್ತಿದೆ. ಪ್ರತಿಭಟನಾಕಾರರ ಕೃತ್ಯಕ್ಕೆ ರಾಷ್ಟ್ರ ರಾಜಧಾನಿ ನಲುಗಿ ಹೋಗಿದ್ದು, ಎಲ್ಲೆಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೆಹಲಿಯಲ್ಲಿ ಎಲ್ಲಿ ನೋಡಿದ್ರೂ ಕಿರುಚಾಟ, ಚೀರಾಟ. ಧಗಧಗನೆ ಹೊತ್ತಿ ಉರಿಯುತ್ತಿರುವ ವಾಹನಗಳು. ಇನ್ನು ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿರುವ ಖಾಕಿ ಪಡೆ.

ಮೊದಲು ಹೋರಾಟ.. ಆಮೇಲೆ ಹಿಂಸಾಚಾರ..! ಅಂದಹಾಗೆ ನಿನ್ನೆ ಸಂಜೆ ದೆಹಲಿಯ ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನ ಹಮ್ಮಿಕೊಂಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈ ಹೋರಾಟ ಆರಂಭಗೊಂಡಿತ್ತು. ಮೊದಲ ಮೊದಲು ಘೋಷಣೆ, ಆಕ್ರೋಶಕ್ಕೆ ಸೀಮಿತವಾಗಿದ್ದ ಪ್ರತಿಭಟನೆ ಇದ್ದಕ್ಕಿದ್ದಂತೆ ಸಿನಿಮೀಯ ಶೈಲಿಯಲ್ಲಿ ತಿರುವು ಪಡೆಯಿತು. ನೋಡ ನೋಡ್ತಿದ್ದಂತೆ ಹಿಂಸಾಚಾರ ಭುಗಿಲೆದ್ದು, 3 ಬಸ್ ಸೇರಿದಂತೆ ನೂರಾರು ದ್ವಿಚಕ್ರ ವಾಹನಗಳು ಭಸ್ಮವಾದವು.

ಪರಿಸ್ಥಿತಿ ನಿಭಾಯಿಸಲು ಪೊಲೀಸರ ಹರಸಾಹಸ..! ಹೌದು ಪ್ರತಿಭಟನೆಯ ಭಯಾನಕತೆ ಹೇಗಿದೆ ಅಂದ್ರೆ ದೆಹಲಿಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸದ್ಯಕ್ಕೆ ಪ್ರತಿಭಟನೆ ಆಗ್ನೇಯ ದೆಹಲಿಯಲ್ಲಿ ಮಾತ್ರ ಹಬ್ಬಿದ್ದರೂ, ಇತರೆಡೆಗೆ ಹರಡುವ ಭೀತಿ ಇದೆ. ಮತ್ತೊಂದುಕಡೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದರೂ ಪ್ರಯೋಜನ ಆಗಿಲ್ಲ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ದೆಹಲಿ ಪೊಲೀಸರು, ಮೆಟ್ರೋ ರೈಲು ನಿಲ್ದಾಣಗಳ ಹೊರ ಹೋಗುವ ಮತ್ತು ಒಳ ಬರುವ ಡೋರ್​ಗಳನ್ನ ಮುಚ್ಚಿಸಿದ್ರು. ಸುಮಾರು 15 ನಿಲ್ದಾಣಗಳ ಬಾಗಿಲು ಸಂಪೂರ್ಣ ಬಂದ್ ಆಗಿದ್ದವು. ಈ ವೇಳೆ ಎಲ್ಲೆಂದ್ರಲ್ಲಿ ಕಲ್ಲುತೂರಾಟ ನಡೆದಿದ್ದು, ಘಟನೆಯಲ್ಲಿ ಹತ್ತಾರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.

ಪ್ರತಿಭಟನೆಗೆ ‘ಜೆಎನ್​ಯು’ ವಿದ್ಯಾರ್ಥಿಗಳ ಎಂಟ್ರಿ..! ಜಾಮೀಯಾ ಮಿಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪ ಪಡೆದ ನಂತರ, ಜೆಎನ್​ಯು ವಿದ್ಯಾರ್ಥಿಗಳು ಅಖಾಡಕ್ಕೆ ಧುಮುಕಿದ್ದಾರೆ. ಘಟನೆ ವಿರೋಧಿಸಿ ದೆಹಲಿ ಪೊಲೀಸ್ ಕೇಂದ್ರಕಚೇರಿ ಬಳಿ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇನ್ನು ದೆಹಲಿ ಧಗಧಗನೆ ಹೊತ್ತಿ ಉರಿಯುತ್ತಿದ್ರೆ, ಪರಿಸ್ಥಿತಿ ಕಂಡು ಕೇಜ್ರಿವಾಲ್ ಬೆಚ್ಚಿಬಿದ್ದಿದ್ದಾರೆ. ಗವರ್ನರ್ ಜೊತೆ ಈ ಬಗ್ಗೆ ಸುಧೀರ್ಘ ಮಾತುಕತೆ ನಡೆಸಿರುವ ಕೇಜ್ರಿವಾಲ್, ಹಿಂಸಾಚಾರ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತೆ ಎಂದಿದ್ದಾರೆ.

‘ಶಾಂತಿಸ್ಥಾಪನೆಗೆ ಸಂಪೂರ್ಣ ಸಹಕಾರ’ ಲೆಫ್ಟಿನೆಂಟ್ ಗೌವರ್ನರ್ ಅನಿಲ್ ಬೈಜಲ್ ಅವರ ಜೊತೆ ಚರ್ಚೆ ನಡೆಸಿದ್ದು, ಶಾಂತಿ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ. ಪರಿಸ್ಥಿತಿ ನಿಯಂತ್ರಣಕ್ಕೆ ದೆಹಲಿ ಸರ್ಕಾರದಿಂದಲೂ ಸೂಕ್ತ ಕ್ರಮಗಳನ್ನ ಕೈಗೊಳ್ಳಲಾಗಿದೆ. ಘಟನೆಯಲ್ಲಿ ನಿಜವಾಗಿಯೂ ಭಾಗಿಯಾದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕಿದೆ. -ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..! ಪರಿಸ್ಥಿತಿ ಭೀಕರ ರೂಪ ತಾಳುತ್ತಿದ್ದಂತೆ ಆಗ್ನೇಯ ದೆಹಲಿಯಲ್ಲಿರುವ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ದೆಹಲಿ ಡಿಸಿಎಂ ಮತ್ತು ಶಿಕ್ಷಣ ಸಚಿವ ಮನಿಶ್ ಸಿಸೋಡಿಯಾ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇನ್ನು ‘ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ’ದ ಪರೀಕ್ಷೆಗಳನ್ನ ಮುಂದೂಡಿ, ಜನವರಿ 5ರವರೆಗೂ ಯೂನಿವರ್ಸಿಟಿಯನ್ನ ಮುಚ್ಚಲು ತೀರ್ಮಾನಿಸಲಾಗಿದೆ.

ಇದಿಷ್ಟು ಒಂದ್ಕಡೆಯಾದ್ರೆ ಪ್ರತಿಭಟನೆ ಹಿಂಸಾರೂಪ ಪಡೆದಿರುವುದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ ಅಂತಾ ಬಿಜೆಪಿ ಆರೋಪಿಸುತ್ತಿದ್ರೆ, ಕಾಂಗ್ರೆಸ್ ನಾಯಕರು ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇವರ ಆರೋಪ, ಪ್ರತ್ಯಾರೋಪಗಳ ಮಧ್ಯೆ ಹಿಂಸಾರೂಪಕ್ಕೆ ತಿರುಗಿರುವ ದೆಹಲಿ ವಾತಾವರಣ, ಮತ್ತಷ್ಟ ಮತ್ತಷ್ಟು ಜಟಿಲವಾಗುತ್ತಿರುವುದು ಸುಳ್ಳಲ್ಲ.