ಕೋಲ್ಕತಾ, ಮಾರ್ಚ್ 5: ಇಂದು ರಾಜೀನಾಮೆ (resignation) ನೀಡಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ್ (Justice Abhijit Gangopadhyay) ಅವರು ನಿರೀಕ್ಷೆಯಂತೆ ಬಿಜೆಪಿ ಸೇರಲಿದ್ದಾರೆ. ತಾನು ಬಿಜೆಪಿ ಸೇರಲಿರುವ ನಿರ್ಧಾರವನ್ನು ಸ್ವತಃ ಅಭಿಜಿತ್ ಅವರೇ ಪ್ರಕಟಿಸಿದ್ದಾರೆ. ಇಂದು ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರಿಗೆ ಕಳುಹಿಸಿದ್ದಾರೆ. ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಮಾರ್ಚ್ 7ರಂದು ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.
ರಾಜೀನಾಮೆ ಕೊಟ್ಟ ಬಳಿಕ ಇಂದು ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಭಿಜಿತ್ ಗಂಗೋಪಾಧ್ಯಾಯ್, ಅವರು ತಮ್ಮ ಭವಿಷ್ಯದ ದಾರಿ ಬಗ್ಗೆ ಎದ್ದಿದ್ದ ಪುಕಾರುಗಳಿಗೆ ತೆರೆ ಎಳೆದಿದ್ದಾರೆ. ತಾನು ಬಿಜೆಪಿ ಸೇರಲು ಪ್ರಧಾನಿ ಮೋದಿ ಅವರ ನಾಯಕತ್ವ ಕಾರಣ ಎಂಬುದನ್ನು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಮತ್ತು ಟಿಎಂಸಿ ಸರ್ಕಾರದ ಭ್ರಷ್ಟಾಚಾರವು ತನ್ನನ್ನು ರಾಜಕೀಯ ಕ್ಷೇತ್ರಕ್ಕೆ ಅಡಿ ಇಡುವಂತೆ ಮಾಡಿತು ಎಂದು ಹೃತ್ಪೂರ್ವಕ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಹೇಳಿದ್ದಾರೆ. ಹಾಗೆಯೇ, ನ್ಯಾಯಾಧೀಶರಾಗಿ ತಮ್ಮ ಕರ್ತವ್ಯ ಪೂರ್ಣಗೊಂಡಿತು ಎಂದೂ ತನ್ನ ಎರಡನೇ ಇನಿಂಗ್ಸ್ ಆಟದ ಆರಂಭದ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಇಡಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಿದ ಹೈಕೋರ್ಟ್ ಆದೇಶ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಂಗಾಳ
‘ತೃಣಮೂಲ ಪಕ್ಷ ಒಳಗಿಂದೊಳಗೆ ಕುಸಿಯುತ್ತಿದೆ. ಟಿಎಂಸಿಗೆ ಭ್ರಷ್ಟಾಚಾರ ಅನ್ವರ್ಥ ನಾಮ. ಇನ್ನೂ ಒಂದೆರಡು ಬಂಧಗಳಾದರೆ ಟಿಎಂಸಿ ಪೂರ್ತಿ ನೆಲಕಚ್ಚಲು ಆರಂಭಿಸುತ್ತದೆ,’ ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವನ್ನು ಮಾಜಿ ನ್ಯಾಯಾಧೀಶರು ಝಾಡಿಸಿದ್ದಾರೆ.
‘ಆಡಳಿತ ಪಕ್ಷದಲ್ಲಿ ಬಹುತೇಕರು ಅರ್ಧಂಬರ್ಧ ತಿಳಿದವರು. ನನ್ನ ಬಗ್ಗೆ ಅವರು ಏನು ಹೇಳಿದರೂ ನನಗೆ ಲೆಕ್ಕಕ್ಕೆ ಇಲ್ಲ. ಅವರು ಅರ್ಧ ತಿಳಿದವರ ಗುಂಪಿಗೆ ಸೇರಿದವರು. ಇವರು ಸಣ್ಣ ತಪ್ಪುಗಳನ್ನು ಮಾಡಿಲ್ಲ. ಉದ್ದೇಶಪೂರ್ವಕವಾಗಿ ಪ್ರಮಾದಗಳನ್ನು ಎಸಗಿದ್ದಾರೆ,’ ಎಂದು ನ್ಯಾ| ಅಭಿಜಿತ್ ಗಂಗೋಪಾಧ್ಯಾಯ ಅವರು ಕಿಡಿಕಾರಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಶ್ರಮಜೀವಿ. ಈ ದೇಶಕ್ಕೆ ಏನಾದರೂ ಮಾಡಲು ಯತ್ನಿಸುತ್ತಿದ್ದಾರೆ. ಟಿಎಂಸಿ, ಕಾಂಗ್ರೆಸ್ಗಿಂತ ಬಿಜೆಪಿ ಉತ್ತಮ ಎನಿಸಿದೆ,’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮೇ 10ರೊಳಗೆ ದೇಶ ಬಿಟ್ಟು ಹೋಗಿ: ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್ಲೈನ್
‘ಟಿಎಂಸಿ ಒಂದು ರಾಜಕೀಯ ಪಕ್ಷವಲ್ಲ, ಅದೊಂದು ಕ್ಲಬ್. ಟಿಎಂಸಿಗೆ ಹೋಲಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಉತ್ತಮವಾಗಿವೆ. ಟಿಎಂಸಿ ನಾನು ಕಂಡ ಅತ್ಯಂತ ಹೀನ ಪಕ್ಷ. ಆದರೆ, ಕಾಂಗ್ರೆಸ್ ಕೌಟುಂಬಿಕ ಜಮೀನ್ದಾರ ಪಕ್ಷ. ಕಮ್ಯೂನಿಸ್ಟ ಪಕ್ಷಕ್ಕೆ ದೇವರು ಮತ್ತು ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ಆ ನಂಬಿಕೆ ಇದೆ,’ ಎಂದು ನ್ಯಾ| ಉಪಾಧ್ಯಾಯ ಅವರು ಬಿಜೆಪಿ ಸೇರುವ ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ತಿಳಿಸಿದ್ದಾರೆ.
ವರದಿ ಪ್ರಕಾರ, ನ್ಯಾ| ಅಭಿಜಿತ್ ಗಂಗೋಪಾಧ್ಯಾಯ ಅವರು ಟಿಎಂಸಿ ಭದ್ರಕೋಟೆ ಎನಿಸಿದ ತಮ್ಲುಕ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ