ಸಣ್ಣ ಕಾರಿನಲ್ಲಿ ಬಂದ ಕೇಜ್ರಿವಾಲ್ ಶೀಶ್ ಮಹಲ್‌ನಲ್ಲಿ ವಾಸಿಸತೊಡಗಿದರು; ರಾಹುಲ್ ಗಾಂಧಿ ವಾಗ್ದಾಳಿ

|

Updated on: Jan 28, 2025 | 7:59 PM

ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಇಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊದಲು ಸಣ್ಣ ಕಾರಿನಲ್ಲಿ ಬರುತ್ತಿದ್ದರು. ಆದರೆ, ನಂತರ ಶೀಶ್ ಮಹಲ್‌ನಲ್ಲಿ ವಾಸಿಸತೊಡಗಿದರು ಎಂದು ಟೀಕಿಸಿದ್ದಾರೆ.

ಸಣ್ಣ ಕಾರಿನಲ್ಲಿ ಬಂದ ಕೇಜ್ರಿವಾಲ್ ಶೀಶ್ ಮಹಲ್‌ನಲ್ಲಿ ವಾಸಿಸತೊಡಗಿದರು; ರಾಹುಲ್ ಗಾಂಧಿ ವಾಗ್ದಾಳಿ
Rahul Gandhi In Delhi
Follow us on

ನವದೆಹಲಿ: ಅರವಿಂದ್ ಕೇಜ್ರಿವಾಲ್ ಮೊದಲ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾದಾಗ ನೀಲಿ ಬಣ್ಣದ ವ್ಯಾಗನ್ ಆರ್ ಕಾರಿನಲ್ಲಿ ಬರುತ್ತಿದ್ದರು. ಆದರೆ, ಸಿಎಂ ಆದ ನಂತರ ಶೀಶ್ ಮಹಲ್ ಎಂಬ ಐಷಾರಾಮಿ ಬಂಗಲೆಯಲ್ಲಿ ವಾಸಿಸತೊಡಗಿದರು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ತಮ್ಮ ಅಧಿಕೃತ ನಿವಾಸವಾದ ಶೀಶ್ ಮಹಲ್ ಅನ್ನು ನವೀಕರಿಸಲು ಸಾರ್ವಜನಿಕ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಬಿಜೆಪಿಯ ಆರೋಪದ ಬೆನ್ನಲ್ಲೇ ರಾಹುಲ್ ಗಾಂಧಿ ಕೂಡ ಕೇಜ್ರಿವಾಲ್ ವಿರುದ್ಧ ಆರೋಪಿಸಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಅವರು ಅಧಿಕಾರಕ್ಕೆ ಬಂದ ಮೇಲೆ ಬೇರೆಯವರಿಗಿಂತಲೂ ವಿಭಿನ್ನವಾಗಿ ರಾಜಕೀಯ ಮಾಡುವುದಾಗಿ ಹೇಳಿದರು. ಮೊದಲು ಸಣ್ಣ ಕಾರಿನಲ್ಲಿ ಬಂದರು. ಆದರೆ, ಶೀಶ್ ಮಹಲ್‌ನಲ್ಲಿ ವಾಸಿಸುತ್ತಿದ್ದರು” ಎಂದು ರಾಹುಲ್ ಗಾಂಧಿ ಪತ್ಪರ್‌ಗಂಜ್ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.

ಇದನ್ನೂ ಓದಿ: ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್​: ರಾಹುಲ್ ಗಾಂಧಿಗೆ ತಾತ್ಕಾಲಿಕ ರಿಲೀಫ್

ದೆಹಲಿ ಹಿಂಸಾಚಾರ ನಡೆದಾಗ ಅರವಿಂದ್ ಕೇಜ್ರಿವಾಲ್ ಎಲ್ಲೂ ಕಾಣಿಸಲಿಲ್ಲ. ಬಡವರಿಗೆ ಅಗತ್ಯವಿದ್ದಾಗ ಮತ್ತು ದೆಹಲಿ ಹಿಂಸಾಚಾರವನ್ನು ಎದುರಿಸಿದಾಗ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಎಂದಿಗೂ ನೋಡಲು ಸಾಧ್ಯವಾಗಲಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದ ಬಗ್ಗೆ ಪ್ರಸ್ತಾಪಿಸಿದ ರಾಹುಲ್, “ಪತ್ಪರ್‌ಗಂಜ್ ಶಾಸಕ ಮನೀಶ್ ಸಿಸೋಡಿಯಾ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಅಬಕಾರಿ ಹಗರಣದ ರೂವಾರಿ. ಅದಕ್ಕಾಗಿಯೇ ಸಿಸೋಡಿಯಾ ರಾಜೀನಾಮೆ ನೀಡಬೇಕಾಯಿತು” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಮತ್ತೆ ರಾಹುಲ್ ಗಾಂಧಿ ಆಕ್ರೋಶ; ಜಾತಿ ಜನಗಣತಿಯ ಪ್ರತಿಜ್ಞೆ

ಮದ್ಯ ಹಗರಣದಲ್ಲಿ ಸಿಸೋಡಿಯಾ ಮತ್ತು ಕೇಜ್ರಿವಾಲ್ ಇಬ್ಬರೂ ತಿಂಗಳುಗಟ್ಟಲೆ ಜೈಲಿನಲ್ಲಿ ಇದ್ದರು. ಕಳೆದ ವರ್ಷ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮನೀಶ್ ಸಿಸೋಡಿಯಾ ಜಂಗ್ ಪುರ ಕ್ಷೇತ್ರದಿಂದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

70 ಸದಸ್ಯರ ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 5ರಂದು ನಡೆಯಲಿದೆ. ಮತ ಎಣಿಕೆ ಫೆಬ್ರವರಿ 8ರಂದು ನಡೆಯಲಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳೊಂದಿಗೆ ಚುನಾವಣೆಯಲ್ಲಿ ಜಯ ಗಳಿಸಿತು. ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ