ಕೊವಿಡ್ 19ನಿಂದ ಮೃತಪಟ್ಟ ಎಲ್ಲರ ಕುಟುಂಬಗಳಿಗೂ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲು ಸಾಧ್ಯವೇ ಇಲ್ಲ. ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿದರೆ ವಿಪತ್ತು ಪರಿಹಾರ ನಿಧಿ ಪೂರ್ತಿಯಾಗಿ ಖಾಲಿಯಾಗುತ್ತದೆ. ಆರ್ಥಿಕ ಸಮಸ್ಯೆ ಮತ್ತು ಇತರ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರ ಇಂದು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಕೊವಿಡ್ 19ನಿಂದ ಮೃತಪಟ್ಟವರ ಕುಟುಂಬಕ್ಕೆ ಕನಿಷ್ಠ ಪರಿಹಾರ ಮಾನದಂಡದಡಿ ನೆರವು ನೀಡಬೇಕು ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರ, ಸದ್ಯ ಹಣಕಾಸಿನ ತೊಂದರೆ ಹಾಗೂ ಕೆಲವು ತೊಂದರೆಗಳ ಕಾರಣಕ್ಕೆ ಕೊವಿಡ್ 19 ನಿಂದ ಮೃತಪಟ್ಟವರ ರಕ್ತ ಸಂಬಂಧಿಗಳಿಗೆ ಲಕ್ಷಾಂತರ ರೂಪಾಯಿ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ಅಗತ್ಯ ಇರುವವರಿಗೆ ಹಣ ನೀಡಲಾಗಿದೆ. ಬಡವರು, ದುರ್ಬಲವರ್ಗಗಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಪರಿಹಾರ ನೀಡಲು ಆಗುವುದಿಲ್ಲ. ಅದರಲ್ಲೂ ವಿಪತ್ತು ಪರಿಹಾರ ನಿಧಿ ಎಂಬುದು ಭೂಕಂಪ, ಪ್ರವಾಹ ಸೇರಿ ಪ್ರಾಕೃತಿಕ ವಿಕೋಪಗಳಾದಾಗ ಪರಿಹಾರ ನೀಡಲು ಬಳಕೆಯಾಗುತ್ತದೆ ಎಂದು ವಿವರಿಸಿದೆ.
ಭಾರತದಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 4 ಲಕ್ಷ ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಈ ಎಲ್ಲರ ಕುಟುಂಬಕ್ಕೂ ತಲಾ 4 ಲಕ್ಷ ರೂ. ಪರಿಹಾರ ನೀಡುತ್ತ ಹೋದರೆ ಆಯಾ ರಾಜ್ಯಗಳ ವಿಪತ್ತು ಪ್ರತಿಕ್ರಿಯೆ ನಿಧಿಗಳೆಲ್ಲ ಇದಕ್ಕೇ ಖರ್ಚಾಗುತ್ತದೆ. ಮತ್ತೂ ಹೆಚ್ಚಾಗಿಯೇ ವ್ಯಯಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಕೊವಿಡ್ 19 ಸನ್ನಿವೇಶ ಇಲ್ಲಿಗೇ ಮುಂದುವರಿಯುವುದಿಲ್ಲ. ಇದು ನಿರಂತರವಾಗಿರುತ್ತದೆ. ಹಾಗಾಗಿ ಉಳಿದ ಪಾಕೃತಿಕ ವಿಕೋಪ, ಅವಘಡಗಳ ಸಾಲಿಗೆ ಸೇರುವುದಿಲ್ಲ. ಆಯಾ ಜಿಲ್ಲಾಧಿಕಾರಿಗಳು ವಿಮಾ ಹಕ್ಕುಗಳ ಬಗ್ಗೆ ಪ್ರಕ್ರಿಯೆ ಆರಂಭಿಸಿದ್ದಾರೆ. ಹಕ್ಕುದಾರರಿಗೆ ಹಣ ಬಿಡುಗಡೆ ಮಾಡುವಂತೆ ವಿಮಾ ಕಂಪನಿಗಳಿಗೆ ಅವರೇ ಸಂದೇಶ ರವಾನಿಸುತ್ತದೆ. ಈ ಪ್ರಕ್ರಿಯೆಗಾಗಿ ವಿಮಾ ಕಂಪನಿಗಳಿಗೆ 442.4 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ: ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್! ವಿಡಿಯೋ ನೋಡಿ