ಕಾಂಗ್ರೆಸ್ನಿಂದ ಹೊರಬಂದಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದೀಗ ಒಂದು ವಿಷಯಕ್ಕೆ ಸುದ್ಧಿಯಲ್ಲಿದ್ದಾರೆ. ಅಮರಿಂದರ್ ಸಿಂಗ್ ಅವರ ಆಪ್ತ ಸ್ನೇಹಿತೆ, ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪಂಜಾಬ್ಗೆ ಪಾಕಿಸ್ತಾನದ ಐಎಸ್ಐ (ಇಂಟರ್ ಸರ್ವೀಸ್ ಇಂಟಲಿಜೆನ್ಸ್ -ISI)ನಿಂದ ಬೆದರಿಕೆ ಇರುವುದಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳುತ್ತಿದ್ದಾರೆ. ಇದೇ ಹೊತ್ತಲ್ಲಿ ಅವರ ಸ್ನೇಹಿತೆ, ಪಾಕಿಸ್ತಾನಿ ಪತ್ರಕರ್ತೆ ಅರೂಸಾ ಅಲಂಗೆ ಐಎಸ್ಐ ಸಂಪರ್ಕ ಇದೆಯಾ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಪಂಜಾಬ್ ಗೃಹ ಸಚಿವ ಸುಖ್ಜಿಂದರ್ ಸಿಂಗ್ ಒತ್ತಾಯಿಸಿದ್ದಾರೆ.
ಅಂದಹಾಗೆ ಈ ಅರೂಸಾ ಅಲಂ ಪಾಕಿಸ್ತಾನದ ಪತ್ರಕರ್ತೆಯಾಗಿದ್ದು, ಅಮರಿಂದರ್ ಸಿಂಗ್ರಿಗೆ ಹಳೇ ಪರಿಚಯ ಮತ್ತು ಅವರ ಆಪ್ತ ಸ್ನೇಹಿತೆಯಾಗಿದ್ದಾರೆ. 2018ರಲ್ಲಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗಲೂ ಅವರು ಬಂದಿದ್ದರು. ಆಗಲೇ ನವಜೋತ್ ಸಿಂಗ್ ಸಿಧು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸುಖ್ಜಿಂದರ್ ಸಿಂಗ್ ಹೊಸದೊಂದು ವಿಷಯ ಎತ್ತಿದ್ದಾರೆ. ಅಷ್ಟೆಲ್ಲ ವರ್ಷ ಅರೂಸಾ ಇಲ್ಲಿ ಹೇಗೆ ಇದ್ದರು? ಅವರ ವೀಸಾ ಮೂರು ಬಾರಿ ಪರಿಷ್ಕೃತಗೊಂಡಿದ್ದಾದರೂ ಹೇಗೆ? ಎಂದು ಕೇಳಿದ್ದಾರೆ. ಆದರೆ ಇದನ್ನು ಅಮರಿಂದರ್ ಸಿಂಗ್ ತಿರಸ್ಕರಿಸಿದ್ದಾರೆ. ಇದೆಲ್ಲ ಬೇಕೆಂದು ನನ್ನ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಅರೂಸಾ ಅಲಂ ಮತ್ತು ಸೋನಿಯಾ ಗಾಂಧಿ ಒಟ್ಟಿಗೆ ಇರುವ ಫೋಟೋವನ್ನು ಅವರ ಮಾಧ್ಯಮ ಸಲಹೆಗಾರ ರವೀನ್ ಠಾಕೂರ್ ಬಿಡುಗಡೆ ಮಾಡಿದ್ದಾರೆ.
ಸುಖ್ಜಿಂದರ್ ಸಿಂಗ್ ಆರೋಪಕ್ಕೆ ರವೀನ್ ಠಾಕೂರ್ ಅಕೌಂಟ್ ಮೂಲಕವೇ ಉತ್ತರ ನೀಡುತ್ತಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ನೀವೀಗ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದೀರಿ. ಅರೂಸಾ ಅವರು ಭಾರತದಲ್ಲಿ ಅಂದಿನ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದೇ 16 ವರ್ಷ ನೆಲೆಸಿದ್ದರು. ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎನ್ಡಿಎ ಮತ್ತು ಯುಪಿಎ ಸರ್ಕಾರಗಳೆರಡೂ ಐಎಸ್ಐ ಜತೆ ಸಂಪರ್ಕದಲ್ಲಿದ್ದವು ಎಂದು ನೀವು ಹೇಳುತ್ತೀರಾ? ನೀವು ನನ್ನ ಕ್ಯಾಬಿನೆಟ್ನಲ್ಲೂ ಇದ್ದಿರಿ. ಆಗ ಅರೂಸಾ ಬಗ್ಗೆ ಇಲ್ಲದ ಅನುಮಾನ? ದೂರುಗಳು ಈಗ್ಯಾಕೆ ಎಂದು ಸುಖ್ಜಿಂದರ್ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.
ಹಾಗೇ, ಅರೂಸಾ ಅಲಂ ವೀಸಾವನ್ನು ಗುಪ್ತಚರ ದಳದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವೇ ವಿಸ್ತಾರ ಮಾಡಿತ್ತು. 2007ರಲ್ಲಿಯೇ ಈ ಬಗ್ಗೆ ಸಂಪೂರ್ಣ ವಿಚಾರಣೆಯೂ ನಡೆದಿದೆ. ಆದರೆ ಈ ತನಿಖೆಯನ್ನು ಪಂಜಾಬ್ ಡಿಜಿಪಿಗೆ ನೀಡಿ ಮತ್ತೆ ಇಲ್ಲಿನ ವ್ಯಕ್ತಿಸಂಪನ್ಮೂಲವನ್ನು ಹಾಳು ಮಾಡುತ್ತಿದ್ದೀರಿ. ಇದೀಗ ಹಬ್ಬದ ಸಂದರ್ಭ. ಇಲ್ಲಿನ ಡಿಜಿಪಿ ಸೇರಿ ಪೊಲೀಸ್ ಸಿಬ್ಬಂದಿಗೆ ಕಾನೂನು-ಸುವ್ಯವಸ್ಥೆ ನಿಭಾಯಿಸುವ ಜವಾಬ್ದಾರಿ ಇರುತ್ತದೆ. ಆದರೆ ಅದನ್ನೆಲ್ಲ ಬಿಟ್ಟು ನೀವು ಅರೂಸಾ ಮತ್ತು ಐಎಸ್ಐ ಲಿಂಕ್ ಬಗ್ಗೆ ತನಿಖೆ ಮಾಡುವಂತೆ ಹೇಳುತ್ತಿದ್ದೀರಿ ಎಂದು ಕ್ಯಾಪ್ಟನ್ ಕಿಡಿಕಾರಿದ್ದಾರೆ.
Just by the way. (File photo). @Sukhjinder_INC @INCPunjab @CHARANJITCHANNI @INCIndia pic.twitter.com/NxrrZZT4ic
— Raveen Thukral (@RT_Media_Capt) October 22, 2021
ಇದನ್ನೂ ಓದಿ: ಚಿತ್ರದುರ್ಗ: ಉಚಿತ ನಿವೇಶನ ವದಂತಿಗೆ ಕಿವಿಗೊಟ್ಟು ಗುಡಿಸಲು ನಿರ್ಮಿಸಿದ ಜನರಿಗೆ ಲಾಠಿ ಏಟಿನ ಬಿಸಿ
ಚಿಕ್ಕಬಳ್ಳಾಪುರ: ಭಾರಿ ಮಳೆ; ಗುಡಿಬಂಡೆ ಪಟ್ಟಣದಲ್ಲಿ ಕೆರೆಗಳಂತಾದ ರಸ್ತೆಗಳು
Published On - 10:45 am, Sat, 23 October 21