ಚಿತ್ರದುರ್ಗ: ಉಚಿತ ನಿವೇಶನ ವದಂತಿಗೆ ಕಿವಿಗೊಟ್ಟು ಗುಡಿಸಲು ನಿರ್ಮಿಸಿದ ಜನರಿಗೆ ಲಾಠಿ ಏಟಿನ ಬಿಸಿ
ನಿನ್ನೆ ರಾತ್ರಿ 9 ಗಂಟೆ ಬಳಿಕ ಕೆಲ ಜನರು ಸ್ಥಳಕ್ಕೆ ತೆರಳಿ ಬೇಲಿ ಹಾಕಿದ್ದಾರೆ ಮತ್ತು ಗುಡಿಸಲು ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಷಯ ತಿಳಿದ ತಹಸೀಲ್ದಾರ್ ರಘುಮೂರ್ತಿ, ಡಿವೈಎಸ್ಪಿ ಶ್ರೀಧರ್, ಸಿಪಿಐ ತಿಪ್ಪೇಸ್ಚಾಮಿ ಮತ್ತಿತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿನ ಸರ್ಕಾರಿ ಜಾಗದಲ್ಲಿ ಉಚಿತವಾಗಿ ನಿವೇಶನ ಪಡೆಯಲು ಸರ್ಕಾರ ಅನುಮತಿಸಿದೆ ಎಂದು ಕಿಡಿಗೇಡಿಗಳು ವದಂತಿ ಸೃಷ್ಟಿಸಿದ್ದಾರೆ. ಪರಿಣಾಮ ನಿನ್ನೆ( ಅಕ್ಟೋಬರ್ 22) ರಾತ್ರಿ 9 ಗಂಟೆ ಬಳಿಕ ಕೆಲ ಜನರು ಸ್ಥಳಕ್ಕೆ ತೆರಳಿ ಬೇಲಿ ಹಾಕಿದ್ದಾರೆ ಮತ್ತು ಗುಡಿಸಲು ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಷಯ ತಿಳಿದ ತಹಸೀಲ್ದಾರ್ ರಘುಮೂರ್ತಿ, ಡಿವೈಎಸ್ಪಿ ಶ್ರೀಧರ್, ಸಿಪಿಐ ತಿಪ್ಪೇಸ್ಚಾಮಿ ಮತ್ತಿತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಠಿಚಾರ್ಜ್ ವದಂತಿ ಬಗ್ಗೆ ಅಧಿಕಾರಿಗಳು ತಿಳಿವಳಿಕೆ ನೀಡಲೆತ್ನಿಸಿದರೂ ಪ್ರಯೋಜನ ಆಗಿಲ್ಲ. ಬದಲಾಗಿ ಕೆಲವರು ಮಚ್ಚು ಹಿಡಿದಿರುವುದು ಅಧಿಕಾರಿಗಳಲ್ಲಿ ಆತಂಕ ಹುಟ್ಟಿಸಿತ್ತು. ಜತೆಗೆ ಪ್ರಶ್ನಿಸಿದಾಗ ಗುಡಿಸಲು ನಿರ್ಮಾಣಕ್ಕಾಗಿ ಮಚ್ಚು ತಂದಿರುವ ಉತ್ತರ ಬಂದಿದೆ. ನೂರಾರು ಜನ ಸೇರಿದ್ದು, ಸ್ಥಳಬಿಟ್ಟು ತೆರಳುವಂತೆ ಸೂಚಿಸಿದ ಅಧಿಕಾರಿಗಳ ಮನವಿಗೆ ಸ್ಪಂದಿಸದಿದ್ದಾಗ ಪೊಲೀಸರು ಲಾಠಿ ಏಟು ನೀಡಿ ಜನರನ್ನು ಚದುರಿಸಿದ ಘಟನೆ ನಡೆದಿದೆ.
ವದಂತಿ ಹಿನ್ನೆಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಕೆರೆ ಅಂಗಳದಲ್ಲಿ ಕೊರಚ ಸಮುದಾಯದ ಜನರು ಸುಮಾರು ಮೂರು ದಶಕಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದರು. ಈ ವರ್ಷ ಅತಿಯಾದ ಮಳೆ ಸುರಿದ ಕಾರಣ ಕೆರೆ ತುಂಬಿದ್ದು, ಸುಮಾರು 25 ಗುಡಿಸಲು ಮನೆಗಳು ಜಲಾವೃತಗೊಂಡಿದ್ದವು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿ, ತಹಸೀಲ್ದಾರ್ ರಘುಮೂರ್ತಿ ತಾತ್ಕಾಲಿಕ ಶೆಡ್ ಹಾಕಿಕೊಳ್ಳಲು ಪರ್ಯಾಯ ಸ್ಥಳ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಪಾವಗಡ ರಸ್ತೆಯ ಗೋಮಾಳದಲ್ಲೇ ಸ್ಥಳಾವಕಾಶ ಕಲ್ಪಿಸಲಾಗುತ್ತಿದ್ದು, ಉಚಿತವಾಗಿ ನಿವೇಶನ ನೀಡಲಾಗುತ್ತಿದೆ. ಯಾರು ಬೇಕಾದರು ಬೇಲಿ ಹಾಕಿಕೊಳ್ಳಬಹುದು. ಗುಡಿಸಲು ಕಟ್ಟಿಕೊಳ್ಳಬಹುದು ಎಂಬ ವದಂತಿಯನ್ನು ಹರಿಬಿಟ್ಟಿದ್ದು ಅವಾಂತರಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
52 ಎಕರೆ ಮೀಸಲು ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿರುವ 52 ಎಕರೆ ಸರ್ಕಾರಿ ಜಾಗವನ್ನು ನಿರಾಶ್ರಿತರಿಗೆ ಸೂರು ಕಲ್ಪಿಸಲೆಂದೇ ಮೀಸಲಿರಿಸಲಾಗಿದೆ. ತಾಲೂಕು ಪಂಚಾಯತಿಯಿಂದ ನಿವೇಶನ ನಿರ್ಮಾಣ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲೇ ಕೆಲ ಕಿಡಿಗೇಡಿಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡರೆ ಅಕ್ರಮ ಸಕ್ರಮ ಆಗುತ್ತದೆಂದು ವದಂತಿ ಹಬ್ಬಿಸಿದ್ದಾರೆ. ಪರಿಣಾಮ ಒಬ್ಬರಿಂದ ಒಬ್ಬರು ಸರ್ಕಾರಿ ಜಾಗವನ್ನು ಪಡೆದುಕೊಳ್ಳಲು ಮುಗಿ ಬಿದ್ದ ಘಟನೆ ನಡೆದಿದೆ.
ರಾತ್ರಿ ವೇಳೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ವದಂತಿ ಬಗ್ಗೆ ತಿಳಿವಳಿಕೆ ನೀಡಿದರೂ ಕೆಲವರು ಸ್ಪಂದಿಸದಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಬಡವರಿಗೆ, ನಿರಾಶ್ರಿತರಿಗೆ ಸೂರು ಕಲ್ಪಿಸುವ ಯೋಜನೆಯಿದೆ. ಯಾರೂ ಕಿಡಿಗೇಡಿಗಳ ಮಾತಿಗೆ ಕಿವಿಗೊಟ್ಟು ದುಸ್ಸಾಹಸಕ್ಕೆ ಮುಂದಾಗಿ ಕಾನೂನು ಕ್ರಮಕ್ಕೆ ಗುರಿ ಆಗಬಾರದು ಎಂದು ತಹಸೀಲ್ದಾರ್ ರಘುಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ಭೂಮಿ ಮಂಜೂರು ಮಾಡದ ಹಿನ್ನೆಲೆ ಸರ್ಕಾರಿ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಗುಡಿಸಲುಗಳು
Kolar Crime: ನಡುರಾತ್ರಿ ಹೊತ್ತಿ ಉರಿದ ವೃದ್ಧೆಯ ಗುಡಿಸಲು; ಬೆಂಕಿ ಆರಿಸಿ ಸಾಹಸ ಮೆರೆದ ಯುವಕರು
Published On - 9:58 am, Sat, 23 October 21