ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ತನಿಖೆಗಾಗಿ ಮನವಿ; ಇಂದು ನಿರ್ಣಾಯಕ ಆದೇಶ ಸಾಧ್ಯತೆ
ಜ್ಞಾನವಾಪಿ ಮಸೀದಿಯೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಐದು ಹಿಂದೂ ಮಹಿಳಾ ಅರ್ಜಿದಾರರ ಪೈಕಿ ನಾಲ್ವರ ಅರ್ಜಿ ಬಗ್ಗೆ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಲಕ್ನೋ: ಈ ವರ್ಷದ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ (c) ಪತ್ತೆಯಾದ ‘ಶಿವಲಿಂಗ’ದ (Shivling)ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ತನಿಖೆಗಾಗಿ ಹಿಂದೂ ಮಹಿಳಾ ಅರ್ಜಿದಾರರು ಮನವಿ ಮಾಡಿದ್ದು, ಈ ಬಗ್ಗೆ ವಾರಣಾಸಿಯ ಹಿರಿಯ ನ್ಯಾಯಾಧೀಶರ ನ್ಯಾಯಾಲಯವು ಇಂದು ನಿರ್ಣಾಯಕ ಆದೇಶವನ್ನು ನೀಡುವ ಸಾಧ್ಯತೆ ಇದೆ. ಕೆಳ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆಯನ್ನು ನಡೆಸಲಾಗಿತ್ತು. ಜ್ಞಾನವಾಪಿ ಮಸೀದಿಯೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಐದು ಹಿಂದೂ ಮಹಿಳಾ ಅರ್ಜಿದಾರರ ಪೈಕಿ ನಾಲ್ವರ ಅರ್ಜಿ ಬಗ್ಗೆ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಳೆದ ತಿಂಗಳು ‘ಶಿವಲಿಂಗ’ದ ವಯಸ್ಸು ನಿರ್ಧರಿಸುವುದಕ್ಕಾಗಿ “ವೈಜ್ಞಾನಿಕ ತನಿಖೆ” ನಡೆಸಬೇಕು ಎಂದು ಇವರು ಅರ್ಜಿ ಸಲ್ಲಿಸಿದ್ದರು. ಅಂತಹ ತನಿಖೆಯು ಕಾರ್ಬನ್ ಡೇಟಿಂಗ್ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಸರ್ಕಾರಿ ಸಂಸ್ಥೆಯಾದ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಇದನ್ನು ನಡೆಸಬಹುದು ಎಂದು ಮಹಿಳೆಯರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಐವರು ಹಿಂದೂ ಮಹಿಳೆಯರಲ್ಲಿ ಒಬ್ಬರು, ಇತರ ನಾಲ್ವರು ಮಹಿಳೆಯರ ವೈಜ್ಞಾನಿಕ ತನಿಖೆಯ ಮನವಿಯನ್ನು ವಿರೋಧಿಸಿ, ಕಾರ್ಬನ್ ಡೇಟಿಂಗ್ ಸೇರಿದಂತೆ ಯಾವುದೇ ಪರೀಕ್ಷೆಯು ‘ಶಿವಲಿಂಗ’ಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 12 ರಂದು, ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಮಸೀದಿಯ ಸಂಕೀರ್ಣದೊಳಗೆ ವರ್ಷಪೂರ್ತಿ ಪೂಜೆಗಾಗಿ ಹಿಂದೂ ಮಹಿಳೆಯರು ನಡೆಸುತ್ತಿರುವ ಪ್ರಕರಣಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದ ಮಸೀದಿ ಸಮಿತಿಯ ಮೇಲ್ಮನವಿ ವಜಾಗೊಳಿಸಿದರು. ಅವರು ಉಲ್ಲೇಖಿಸಿದ ಎಲ್ಲಾ ಮೂರು ಅಂಶಗಳ ಮೇಲೆ ಅವರ ಮೇಲ್ಮನವಿ ತಿರಸ್ಕರಿಸಲಾಯಿತು. ಇವುಗಳಲ್ಲಿ ಪ್ರಮುಖವಾದದ್ದು 1991 ರ ಕಾನೂನು, ಅದು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಪೂಜಾ ಸ್ಥಳದ ಸ್ಥಿತಿಯನ್ನು ಸ್ಥಗಿತಗೊಳಿಸುತ್ತದೆ. ಅರ್ಜಿದಾರರು ಮಾಲೀಕತ್ವವನ್ನು ಬಯಸಲಿಲ್ಲ, ಕೇವಲ ಪೂಜೆ ಮಾಡುವ ಹಕ್ಕು ಕೇಳಿದ್ದು ಎಂದು ನ್ಯಾಯಾಲಯ ತೀರ್ಪು ನೀಡಿತು.
ಈ ವರ್ಷದ ಆರಂಭದಲ್ಲಿ, ವಾರಣಾಸಿಯ ಕೆಳ ನ್ಯಾಯಾಲಯವು ಮಹಿಳೆಯರ ಅರ್ಜಿಯ ಆಧಾರದ ಮೇಲೆ ಶತಮಾನಗಳಷ್ಟು ಹಳೆಯದಾದ ಮಸೀದಿಯ ಚಿತ್ರೀಕರಣಕ್ಕೆ ಆದೇಶಿಸಿತ್ತು. ಹಿಂದೂ ಅರ್ಜಿದಾರರಿಂದ ವಿವಾದಾತ್ಮಕವಾಗಿ ಸೋರಿಕೆಯಾದ ವೀಡಿಯೊಗ್ರಫಿ ವರದಿಯಲ್ಲಿ, ಮುಸ್ಲಿಂ ಪ್ರಾರ್ಥನೆಯ ಮೊದಲು ವಜೂ ಅಥವಾ ಶುದ್ಧೀಕರಣ ಆಚರಣೆಗಳಿಗೆ ಬಳಸಲಾಗುವ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಅಥವಾ ಶಿವನ ಅವಶೇಷ ಕಂಡುಬಂದಿದೆ ಎಂದು ಹೇಳಲಾಗಿದೆ.