ಪ್ರಶ್ನೆಗಾಗಿ ನಗದು ಆರೋಪ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ

TMC MP Mahua Moitra: 'ಪ್ರಶ್ನೆಗಾಗಿ ನಗದು' ದೂರಿನ ಕುರಿತು ನೈತಿಕ ಸಮಿತಿ ಇಂದು (ಶುಕ್ರವಾರ) ಲೋಕಸಭೆಗೆ ವರದಿ ಸಲ್ಲಿಸಿದೆ. ಈ ವರದಿಯನ್ನು ಆಧರಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದೆ.

ಪ್ರಶ್ನೆಗಾಗಿ ನಗದು ಆರೋಪ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ
ಮಹುವಾ ಮೊಯಿತ್ರಾ
Follow us
ರಶ್ಮಿ ಕಲ್ಲಕಟ್ಟ
|

Updated on:Dec 08, 2023 | 3:52 PM

ದೆಹಲಿ ಡಿಸೆಂಬರ್ 08:  ‘ಪ್ರಶ್ನೆಗಾಗಿ ನಗದು’ (Cash  for Query) ದೂರಿನ ಕುರಿತು ನೈತಿಕ ಸಮಿತಿಯ ವರದಿಯನ್ನು ಆಧರಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ( TMC MP Mahua Moitra) ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ(Lok sabha) ಅಂಗೀಕರಿಸಿದೆ. ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಿದ ನಂತರ  ಡಿಸೆಂಬರ್ 11ರವರೆಗೆ ಸದನದ ಕಲಾಪಗಳನ್ನು ಮುಂದೂಡಲಾಗಿದೆ. ಸದನದಲ್ಲಿ ನಿರ್ಣಯ ಅಂಗೀಕರಿಸುತ್ತಿದ್ದಂತೆ ವಿಪಕ್ಷಗಳು ಪ್ರತಿಭಟಿಸಿ ಸದನದಿಂದ ಹೊರ ನಡೆದಿವೆ.

ಸದನದ ನಿರ್ಧಾರವನ್ನು ಓದಿದ ಸ್ಪೀಕರ್  ಓಂ ಬಿರ್ಲಾ, ಸಂಸದೆ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಸರಿಯಾದುದಲ್ಲ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ವರದಿಯನ್ನು ಮಂಡಿಸುವ ಮೊದಲು ಮಹುವಾ ಮೊಯಿತ್ರಾ ಅವರಲ್ಲಿ ಈ ಬಗ್ಗೆ ಕೇಳಿದಾಗ, “ಏನಾಗಬಹುದು ಎಂದು ನೀವು ಯೋಚಿಸುತ್ತೀರಿ? ದುರ್ಗಾ ಮಾತೆ ಬಂದಿದ್ದಾಳೆ, ನೋಡುತ್ತೇವೆ. ಅವರು ‘ವಸ್ತ್ರಾಹರಣ’ ಆರಂಭಿಸಿದ್ದಾರೆ. ನಾವು ಮಹಾಭಾರತವನ್ನು ನೋಡಬೇಕಾಗಿದೆ ಎಂದು  ಮೊಯಿತ್ರಾ  ‘ಮಹಾಭಾರತ’ವನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  ಪ್ರಶ್ನೆಗಾಗಿ ನಗದು ಪ್ರಕರಣ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆಗೆ ನೈತಿಕ ಸಮಿತಿ ಶಿಫಾರಸು

ಮಧ್ಯಾಹ್ನ 12 ಗಂಟೆ ಸುಮಾರಿಗೆ ಸದನದಲ್ಲಿ ವರದಿ ಮಂಡಿಸಲಾಯಿತು. ಬೆಳಗ್ಗೆ ಕಲಾಪ ಮುಂದೂಡಲ್ಪಟ್ಟ ನಂತರ, ಮಧ್ಯಾಹ್ನ 2 ಗಂಟೆಗೆ ಮತ್ತೆ ಕಲಾಪ ಶುರುವಾಗಿತ್ತು.  ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸಮಿತಿಯ ವರದಿಯನ್ನು ಚರ್ಚಿಸಲು ಪ್ರಸ್ತಾವನೆಯನ್ನು ಮಂಡಿಸಿದರು. ಲೋಕಸಭೆಯು ನೈತಿಕ ಸಮಿತಿಯ ವರದಿ ಮತ್ತು ಶಿಫಾರಸನ್ನು ಅಂಗೀಕರಿಸಿದ್ದರಿಂದ ಹೆಚ್ಚಿನ ಮತಗಳೊಂದಿಗೆ ಟಿಎಂಸಿ ಸಂಸದರನ್ನು ಹೊರಹಾಕಿತು.

ಲೋಕಸಭೆಯು ಸದನದಿಂದ ಹೊರಹಾಕಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಹುವಾ, ನನಗೆ 49 ವರ್ಷ, ನಾನು ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ, ಸಂಸತ್ತಿನ ಹೊರಗೆ ನಿಮಗಾಗಿ  ಹೋರಾಡುತ್ತೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Fri, 8 December 23