AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರ್ಖಂಡ ನ್ಯಾಯಾಧೀಶರ ಹತ್ಯೆ ಕೇಸ್​: ಸಿಬಿಐ ವಿರುದ್ಧ ಬೇಸರ ವ್ಯಕ್ತಪಡಿಸಿ, ನಮಗ್ಯಾರೂ ಸಹಾಯ ಮಾಡೋದಿಲ್ಲವೆಂದ ಸಿಜೆಐ ರಮಣ

ಕಳೆದ ತಿಂಗಳು ನ್ಯಾಯಾಧೀಶ ಉತ್ತಮ್ ಆನಂದ್​ ಹತ್ಯೆಯಾಗುತ್ತಿದ್ದಂತೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂಕೋರ್ಟ್​ನ ಬಾರ್​ ಅಸೋಸಿಯೇಶನ್​ (SCBA) ಆಗ್ರಹಿಸಿತ್ತು.

ಜಾರ್ಖಂಡ ನ್ಯಾಯಾಧೀಶರ ಹತ್ಯೆ ಕೇಸ್​: ಸಿಬಿಐ ವಿರುದ್ಧ ಬೇಸರ ವ್ಯಕ್ತಪಡಿಸಿ, ನಮಗ್ಯಾರೂ ಸಹಾಯ ಮಾಡೋದಿಲ್ಲವೆಂದ ಸಿಜೆಐ ರಮಣ
ಸುಪ್ರೀಂ​ ಕೋರ್ಟ್
TV9 Web
| Updated By: Lakshmi Hegde|

Updated on: Aug 06, 2021 | 1:50 PM

Share

ಜಾರ್ಖಂಡದ ಧನ್​ಬಾದ್​ನ ನ್ಯಾಯಾಧೀಶ ಉತ್ತಮ್​ ಆನಂದ್​ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮೊಟೊ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್​, ಇಂದು ಕೇಂದ್ರೀಯ ತನಿಖಾ ದಳ (CBI)ಕ್ಕೆ ನೋಟಿಸ್​ ನೀಡಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, ಸಿಬಿಐನ ಒಂದು ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧನ್​ಬಾದ್ ಜಿಲ್ಲೆಯ ಹೆಚ್ಚುವರಿ ಹಾಗೂ ಸೆಶನ್ಸ್ ನ್ಯಾಯಾಧೀಶ ಉತ್ತಮ್​ ಆನಂದ್​ ಜುಲೈ 28ರಂದು ಮುಂಜಾನೆ ವಾಕಿಂಗ್​ ಹೋಗಿದ್ದಾಗ, ಟೆಂಪೋವೊಂದು ಅವರಿಗೆ ಡಿಕ್ಕಿ ಹೊಡೆದು ಹತ್ಯೆ ಮಾಡಿದೆ. ಇದರ ಸಿಸಿಟಿವಿ ಫೂಟೇಜ್​ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈದೀಗ ಸಿಬಿಐ ಕೂಡ ತನಿಖೆ ಕೈಗೆತ್ತಿಕೊಂಡಿದೆ. ಪ್ರಕರಣದ ತನಿಖೆ ವೇಳೆ ಎನ್.ವಿ.ರಮಣ ಕೆಲವು ಪ್ರಮುಖ ವಿಚಾರಗಳನ್ನು ಎತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಸಿಬಿಐ, ನ್ಯಾಯಾಧೀಶರಿಗೆ ಸಹಾಯ ಮಾಡುವುದಿಲ್ಲ ಎಂಬುದು. ಹೈಪ್ರೊಫೈಲ್​ ಪ್ರಕರಣಗಳಲ್ಲಿ ತಮಗೆ ಬೇಕಾದಂತೆ ತೀರ್ಪು ಬಾರದೆ ಇದ್ದಾಗ, ದುರುದ್ದೇಶಪೂರಿತವಾಗಿ ನ್ಯಾಯಾಂಗ ವ್ಯವಸ್ಥೆಯನ್ನು ನಿಂದಿಸುವ ಪ್ರವೃತ್ತಿ ಹೆಚ್ಚಾಗಿದೆ. ಗುಪ್ತಚರ ದಳಗಳು (IB) ಮತ್ತು ಸಿಬಿಐ ತನಿಖಾ ದಳಗಳು ನ್ಯಾಯಾಂಗಕ್ಕೆ ಸಹಾಯ ಮಾಡುವುದಿಲ್ಲ. ನ್ಯಾಯಾಧೀಶರೇ ಮುಂದಾಗಿ ತಮಗೆ ಬೆದರಿಕೆ ಇದೆ ಎಂದು ದೂರು ನೀಡಿದರೂ ಅವರು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ಸಿಬಿಐ ಮತ್ತು ಐಬಿಗಳು ತಮ್ಮ ಮನೋಭಾವ ಬದಲಿಸಿಕೊಳ್ಳುತ್ತಿಲ್ಲ. ನಾನು ಇಲ್ಲಿ ಕುಳಿತು, ತುಂಬ ಜವಾಬ್ದಾರಿಯುತವಾಗಿ ಈ ಹೇಳಿಕೆ ನೀಡುತ್ತಿದ್ದೇನೆ ಎಂದೂ ಸಿಜೆಐ ರಮಣ ಹೇಳಿದ್ದಾರೆ.

ಕಳೆದ ತಿಂಗಳು ನ್ಯಾಯಾಧೀಶ ಉತ್ತಮ್ ಆನಂದ್​ ಹತ್ಯೆಯಾಗುತ್ತಿದ್ದಂತೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂಕೋರ್ಟ್​ನ ಬಾರ್​ ಅಸೋಸಿಯೇಶನ್​ (SCBA) ಆಗ್ರಹಿಸಿತ್ತು. ಇದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ. ನ್ಯಾಯಾಧೀಶರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದೂ ಹೇಳಿತ್ತು. ಅದಾದ ಮೇಲೆ ಕೂಡ ಪೊಲೀಸರೇ ತನಿಖೆ ಪ್ರಾರಂಭಿಸಿ, ನಂತರ ಹೈಕೋರ್ಟ್​ ತನಿಖೆಯನ್ನು ಸಿಬಿಐಗೆ ವಹಿಸಿದೆ.

ಇದನ್ನೂ ಓದಿ: ನಿಮ್ಮ ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪೌಷ್ಟಿಕ ಆಹಾರಗಳು