ಅಖಿಲ ಭಾರತೀಯ ಆಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಸಾವಿನ ಪ್ರಕರಣಕ್ಕೆ (Narendra Giri Death Case) ಸಂಬಂಧಪಟ್ಟಂತೆ ಸಿಬಿಐ ಇಂದು ಅವರ ಶಿಷ್ಯಂದಿರಾದ ಆನಂದ್ ತಿವಾರಿ, ಸಂದೀಪ್ ತಿವಾರಿ ಮತ್ತು ಆತನ ಪುತ್ರ ಆಧ್ಯ ತಿವಾರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಈ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಪ್ರಯಾಗ್ರಾಜ್ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದೆ. ಪ್ರಸ್ತುತ ಚಾರ್ಜ್ಶೀಟ್ನ್ನು ಪರಿಗಣಿಸಿರುವ ನ್ಯಾಯಾಲಯ ನವೆಂಬರ್ 25ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯದಲ್ಲಿ ಮೂವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆರೋಪಪಟ್ಟಿಯನ್ನು ಪರಿಗಣಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನವೆಂಬರ್ 25 ಕ್ಕೆ ನಿಗದಿಪಡಿಸಿದೆ. ಅಲ್ಲಿಯವರೆಗೂ ಮೂವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ಏನಿದು ಪ್ರಕರಣ?
ಮಹಾಂತ ನರೇಂದ್ರ ಗಿರಿ ಅವರು ಸೆಪ್ಟೆಂಬರ್ 20ರಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಆಶ್ರಮದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಅವರು ಬರೆದ ಸೂಸೈಡ್ ನೋಟ್ ಪತ್ತೆಯಾಗಿತ್ತು. ಅಂದು ಮಧ್ಯಾಹ್ನ ಊಟ ಮಾಡಿದ ಮಹಾಂತ ನರೇಂದ್ರ ಗಿರಿ (72) ತಮ್ಮ ಕೋಣೆ ಸೇರಿಕೊಂಡಿದ್ದರು. ಸಂಜೆಯಾದರೂ ಹೊರ ಬಾರದೆ ಇದ್ದಾಗ ಅವರ ಶಿಷ್ಯಂದಿರು ಹೋಗಿ ಬಾಗಿಲು ಬಡಿದು, ಕರೆದಿದ್ದರು. ಆದರೆ ಎಷ್ಟೇ ಹೊತ್ತಾದರೂ ಅವರಿಂದ ಉತ್ತರ ಬರದೆ ಇದ್ದಾಗ ಶಿಷ್ಯಂದಿರು ಬಾಗಿಲು ಮುರಿದು ಒಳಗೆ ಹೋಗಿದ್ದರು. ಆಗ ನರೇಂದ್ರ ಗಿರಿಯವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು.
ದೇಶದ ಸಾಧು-ಸಂತರ ಅತ್ಯಂತ ದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಆಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿಯವರ ಮೃತದೇಹದ ಬಳಿ ಸೂಸೈಡ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ಕೆಲವು ಜನರ ಹೆಸರನ್ನು ನಮೂದಿಸಿ, ಇವರಿಂದ ತೀವ್ರ ತೊಂದರೆಯಾಗುತ್ತಿದೆ. ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನನಗೆ ಸಾರ್ವಜನಿಕವಾಗಿ ಅವಮಾನ ಸಹಿಸಿ ಬದುಕುವ ಶಕ್ತಿ ಇಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿತ್ತು. ಈ ಆತ್ಮಹತ್ಯೆ ನೋಟ್ ಆಧಾರದ ಮೇಲೆ ಆನಂದ್ ತಿವಾರಿ, ಸಂದೀಪ್ ತಿವಾರಿ ಮತ್ತು ಆಧ್ಯ ತಿವಾರಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ಮಹಾಂತ ನರೇಂದ್ರ ಗಿರಿ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದರು.
ಇದನ್ನೂ ಓದಿ: Video: ಕುಲಗಾಂವ್ನಲ್ಲಿ ಇಬ್ಬರು ಭಯೋತ್ಪಾದಕ ಹತ್ಯೆ; 60 ಮಂದಿಯನ್ನು ರಕ್ಷಿಸಿದ ಭದ್ರತಾ ಪಡೆ