ಕೃಷಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತೆಲಂಗಾಣ ಸರ್ಕಾರದಿಂದ 3 ಲಕ್ಷ ಪರಿಹಾರ
ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ತಲಾ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದೆಹಲಿ: ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ತೆಲಂಗಾಣ ರಾಜ್ಯ ಸರ್ಕಾರವು ₹ 3 ಲಕ್ಷ ಪರಿಹಾರ ಘೋಷಿಸಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಈ ಕುರಿತು ಘೋಷಣೆ ಮಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ತಲಾ ₹ 25 ಲಕ್ಷ ಪರಿಹಾರ ನೀಡಬೇಕು. ಅವರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಪರಿಹಾರ ನೀಡಬೇಕು ಎಂದು ಹಲವು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಶುಕ್ರವಾರ ಒತ್ತಾಯಿಸಿದ್ದರು.
ಹೋರಾಟ ಮುಂದುವರಿಸಲು ರೈತ ಸಂಘಟನೆಗಳ ನಿರ್ಧಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದ್ದರೂ ರೈತ ಸಂಘಟನೆಗಳು ತಮ್ಮ ಹೋರಾಟ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ. ಪಟ್ಟು ಸಡಿಲಿಸದ ರೈತ ಸಂಘಟನೆಗಳು ನ.22, 26 ಮತ್ತು 29ರಂದು ಈ ಮೊದಲು ಘೋಷಣೆಯಾಗಿದ್ದಂತೆಯೇ ಕಾರ್ಯಕ್ರಮಗಳು ನಡೆಯಲಿವೆ ಎಂದು ಘೋಷಿಸಿವೆ. ನ.22ರಂದು ರೈತ ಸಂಘಟನೆಗಳು ಲಖನೌದಲ್ಲಿ ಱಲಿ ನಡೆಸಲಿವೆ. ನ.26ರಂದು ರೈತರ ಹೋರಾಟ ಆರಂಭವಾಗಿ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರ ಹೋರಾಟದ ವಾರ್ಷಿಕೋತ್ಸವದ ಸಭೆಗಳು ನಡೆಯಲಿವೆ. ನ.29ರಂದು ದೆಹಲಿಯ ಸಂಸತ್ತಿಗೆ ರೈತರು ಟ್ರ್ಯಾಕ್ಟರ್ ಜಾಥಾ ನಡೆಸಲಿದ್ದಾರೆ ಎಂದು ರೈತ ಸಂಘಟನೆಗಳು ಘೋಷಿಸಿವೆ.
ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೂ ರೈತರ ಹೋರಾಟ ಮುಂದುವರಿಯಲಿದೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ನೀಡಬೇಕು. ಕೃಷಿ ವಿರೋಧಿಸಿ ನಡೆದ ಹೋರಾಟದಲ್ಲಿ ಹುತಾತ್ಮರಾದ ಮೃತ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿರುವ ಸಂಘಟನೆಗಳು ವಿದ್ಯುತ್ ಖಾಸಗೀಕರಣ, ಮಾಲಿನ್ಯಕ್ಕೆ ರೈತರ ಹೊಣೆಯಾಗಿಸುವ ಮಸೂದೆಗಳನ್ನೂ ಹಿಂಪಡೆಯಬೇಕು ಎಂದು ಒತ್ತಾಯಿಸಿದವು.
ಇದನ್ನೂ ಓದಿ: ಕೆಲವು ಪಕ್ಷಗಳಿಗೆ ರೈತರಿಗೆ ಒಳಿತಾಗುವುದು ಬೇಕಾಗಿಲ್ಲ: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ವಿರೋಧ ಪಕ್ಷಗಳಿಗೆ ತಿರುಗೇಟು ಕೊಟ್ಟ ಪ್ರಧಾನಿ ಮೋದಿ ಇದನ್ನೂ ಓದಿ: ನಿಜವಾದ ರೈತರಿಗೆ ದೀರ್ಘಕಾಲೀನ ನಷ್ಟವನ್ನು ಉಂಟು ಮಾಡಿದೆ; ಕೃಷಿ ಕಾನೂನು ವಾಪಸ್ ಪಡೆದ ಬಗ್ಗೆ ಭಾರತೀಯ ಕಿಸಾನ್ ಸಂಘ ಪ್ರತಿಕ್ರಿಯೆ