ಕೆಲವು ಪಕ್ಷಗಳಿಗೆ ರೈತರಿಗೆ ಒಳಿತಾಗುವುದು ಬೇಕಾಗಿಲ್ಲ: ಕೃಷಿ ಕಾಯ್ದೆ ಹಿಂಪಡೆದ ಬೆನ್ನಲ್ಲೇ ವಿರೋಧ ಪಕ್ಷಗಳಿಗೆ ತಿರುಗೇಟು ಕೊಟ್ಟ ಪ್ರಧಾನಿ ಮೋದಿ
ನಮ್ಮ ದೇಶದಲ್ಲಿ ಒಂದಷ್ಟು ರಾಜಕೀಯ ಪಕ್ಷಗಳು ಸದಾ ಸಮಸ್ಯೆ ರಾಜಕಾರಣ ನಡೆಸುತ್ತವೆ. ಆದರೆ ಬಿಜೆಪಿ ಹಾಗಲ್ಲ. ನಮ್ಮ ಪಕ್ಷದ್ದು ಪರಿಹಾರ ರಾಜಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹೋಬಾ (ಉತ್ತರ ಪ್ರದೇಶ): ನಿನ್ನೆ ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದರು. ಅಷ್ಟು ಹೇಳಿದ್ದೇ ತಡ ಭಿನ್ನ-ವಿಭಿನ್ನ ಚರ್ಚೆಗಳು ಶುರುವಾಗಿವೆ. ಈ ಕೆಲಸ ಮೊದಲೇ ಮಾಡಬೇಕಿತ್ತು..ಇಷ್ಟಕ್ಕಾಗಿ ಯಾಕೆ ಒಂದು ವರ್ಷ ಸತಾಯಿಸಬೇಕಿತ್ತು, ಈಗ ಪಂಜಾಬ್, ಉತ್ತರಪ್ರದೇಶ ಚುನಾವಣೆ ಹತ್ತಿರ ಬಂದ ಕಾರಣ ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆದಿದೆ..ಹೀಗೆ ಒಂದೆರಡೇ ಅಲ್ಲ. ವಿಪಕ್ಷಗಳಂತೂ ಒಂದೇ ಸಮನೆ ಟೀಕಿಸುತ್ತಿವೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಉತ್ತರಪ್ರದೇಶ ಮಹೋಬಾದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ರೈತರನ್ನು ಸದಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುವುದೇ ಹಲವು ರಾಜಕೀಯ ಪಕ್ಷಗಳ ಕೆಲಸ. ಅದರ ಮೇಲೇ ಅವರು ತಮ್ಮ ಪಕ್ಷದ ತಳಹದಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೇ, ಕುಟುಂಬದವರನ್ನೇ ಒಳಗೊಂಡ ರಾಜಕೀಯ ಪಕ್ಷಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಅನ್ನದಾತರ ಅಗತ್ಯಗಳನ್ನು ಪೂರೈಸುವುದು ಅವರಿಗೆ ಬೇಕಾಗಿಲ್ಲ ಎಂದು ಮೋದಿಯವರು ತಿರುಗೇಟು ನೀಡಿದ್ದಾರೆ.
ನಮ್ಮ ದೇಶದಲ್ಲಿ ಒಂದಷ್ಟು ರಾಜಕೀಯ ಪಕ್ಷಗಳು ಸದಾ ಸಮಸ್ಯೆ ರಾಜಕಾರಣ ನಡೆಸುತ್ತವೆ. ಆದರೆ ಬಿಜೆಪಿ ಹಾಗಲ್ಲ. ನಮ್ಮ ಪಕ್ಷದ್ದು ಪರಿಹಾರ ರಾಜಕಾರಣ ಎಂದು ಹೇಳಿದ ಪ್ರಧಾನಿ ಮೋದಿ, ಕುಟುಂಬ ರಾಜಕಾರಣ ಮಾಡುವವರಿಗೆ ರೈತರು ತೊಂದರೆಯಲ್ಲಿ ಇರುವುದೇ ಬೇಕಾಗಿದೆ. ರೈತರ ಹೆಸರಲ್ಲಿ ದೊಡ್ಡದೊಡ್ಡ ಘೋಷಣೆ ಕೂಗುತ್ತಾರೆ. ಆದರೆ ಅವರಿದ್ದಲ್ಲಿಗೆ ಯಾರೂ ಹೋಗುವುದಿಲ್ಲ. ನಮ್ಮ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ 1.62 ಕೋಟಿ ರೂಪಾಯಿಯನ್ನು ರೈತರ ಅಕೌಂಟ್ಗೆ ನೇರವಾಗಿ ಹಾಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೆಹೋಬಾಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಸುಮಾರು 3250 ಕೋಟಿ ರೂಪಾಯಿ ವೆಚ್ಚದ ಅರ್ಜುನ್ ಸಹಾಯಕ್ ಪ್ರಾಜೆಕ್ಟ್, ರತೌಲಿ ವೀರ್ ಯೋಜನೆ, ಭೋನಿ ಅಣೆಕಟ್ಟು ಯೋಜನೆ ಮತ್ತು ಮಜ್ಗಾಂವ್-ಸ್ಪ್ರಿಂಕ್ಲರ್ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇವುಗಳಿಂದ ಮಹೋಬಾ, ಹಮೀರ್ಪುರ, ಬಂದಾ ಮತ್ತು ಲಲಿತ್ಪುರ ಜಿಲ್ಲೆಗಳ ಸುಮಾರು 65 ಸಾವಿರ ಹೆಕ್ಟೇರ್ಗಳಷ್ಟು ಭೂಮಿಗೆ ನೀರಾವರಿ ವ್ಯವಸ್ಥೆಯಾಗಲಿದೆ. ಅಲ್ಲದೆ, ಈ ಪ್ರದೇಶಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತವೆ.
ಇದನ್ನೂ ಓದಿ: ಹಾಡುವಾಗಲೇ ಖ್ಯಾತ ಗಾಯಕಿ ಮೇಲೆ ಬಕೆಟ್ಗಟ್ಟಲೆ ಹಣ ಸುರಿದ ಅಭಿಮಾನಿಗಳು; ವೈರಲ್ ಆಯ್ತು ವಿಡಿಯೋ