ಫೇಸ್ಬುಕ್ ದತ್ತಾಂಶ ಅಕ್ರಮ ಸಂಗ್ರಹ: ಕೇಂಬ್ರಿಡ್ಜ್ ಅನಾಲಿಟಿಕಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ ಸಿಬಿಐ
2018ರಲ್ಲಿಯೇ ಅಂತರಾಷ್ಟ್ರೀಯ ಮಾಧ್ಯಮಗಳು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್ಬುಕ್ ಪ್ರೊಪೈಲ್ಗಳ ಮೂಲಕ ಅಕ್ರಮವಾಗಿ ಮಾಹಿತಿ ಸಂಗ್ರಹಿಸಿದೆ ಎಂದು ದೂರಿದ್ದವು.
ದೆಹಲಿ: ಭಾರತದ ಫೇಸ್ಬುಕ್ ಬಳಕೆದಾರರ ದತ್ತಾಂಶಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಸಂಗ್ರಹಿಸಿದ ಆರೋಪದಡಿ ಇಂಗ್ಲೆಂಡ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ಸಂಸ್ಥೆಗಳ ಮೇಲೆ ಸಿಬಿಐ ಪಿತೂರಿ ಮತ್ತು ಸೈಬರ್ ಕ್ರೈಮ್ ಪ್ರಕರಣ ದಾಖಲಿಸಿದೆ.
5.24 ಲಕ್ಷ ಭಾರತೀಯರೂ ಸೇರಿದಂತೆ ಒಟ್ಟು 8.7 ಕೋಟಿ ಗ್ರಾಹಕರ ದತ್ತಾಂಶವನ್ನು ಅನುಮತಿಯಿಲ್ಲದೇ ಸಂಗ್ರಹಿಸಿ ಮಾರಿದ ಆರೋಪ ಈ ಎರಡೂ ಸಂಸ್ಥೆಗಳ ಮೇಲಿತ್ತು. 2018ರಲ್ಲಿಯೇ ಅಂತರಾಷ್ಟ್ರೀಯ ಮಾಧ್ಯಮಗಳು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್ಬುಕ್ ಪ್ರೊಪೈಲ್ಗಳ ಮೂಲಕ ಅಕ್ರಮವಾಗಿ ಮಾಹಿತಿ ಸಂಗ್ರಹಿಸಿದೆ ಎಂದು ದೂರಿದ್ದವು. ಜತೆಗೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಮೇಲೆ ಸಿಬಿಐ ಪ್ರಕರಣ ದಾಖಲಿಸುವುದಾಗಿ ಸಂಸತ್ಗೆ ತಿಳಿಸಿದ್ದರು.
ಫೇಸ್ಬುಕ್ 2014ರಲ್ಲಿ ಗ್ಲೋಬಲ್ ಸೈನ್ಸ್ ರಿಸರ್ಚ್ ಲಿಮಿಟೆಡ್ ಸಂಸ್ಥೆಗೆ ತನ್ನ ಬಳಕೆದಾರರ ದತ್ತಾಂಶ ಶೇಖರಣೆಗೆ ಅನುಮತಿ ನೀಡಿತ್ತು. ಆದರೆ, ಸಂಗ್ರಹಿಸಿದ ದತ್ತಾಂಶವನ್ನು 2016-17ರಲ್ಲಿಯೇ ನಾಶಪಡಿಸಲಾಗಿದೆ ಎಂದು ಫೇಸ್ಬುಕ್ ತಿಳಿಸಿತ್ತು. ಆದರೆ, ಸಿಬಿಐಗೆ ದತ್ತಾಂಶ ನಾಶದ ಕುರಿತು ಸಾಕ್ಷಿ ಲಭ್ಯವಾಗದ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.