CDS Bipin Rawat: ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ: ಪ್ರಧಾನಿ ಮೋದಿ ಹಾಗೂ ಸಂಸತ್ಗೆ ರಾಜನಾಥ್ ಸಿಂಗ್ ವಿವರ
ರಕ್ಷಣ ಇಲಾಖೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ರಾವತ್ ಸೇವೆ ಸಲ್ಲಿಸುತ್ತಿದ್ದರು
ದೆಹಲಿ: ತಮಿಳುನಾಡಿನ ಕುನೂರಿನಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (Chief of Defence Staff – CDS) ಜನರಲ್ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ರಾವತ್ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ವಿವರ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸತ್ತಿಗೂ ಈ ಕುರಿತು ಮಾಹಿತಿ ನೀಡಲಿದ್ದಾರೆ. ಅವರು ತಮಿಳುನಾಡಿನಲ್ಲಿ ಅಪಘಾತ ಸಂಭವಿಸಿದ ಸ್ಥಳಕ್ಕೂ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಘಟನೆಯ ಬಗ್ಗೆ ಸ್ವತಃ ರಕ್ಷಣಾ ಸಚಿವರೇ ಸ್ವತಃ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ನೀಲಗಿರಿ ಜಿಲ್ಲಾಧಿಕಾರಿ ಎಸ್ಪಿ ಅಮೃತ್ ಮತ್ತು ಜಿಲ್ಲಾಡಳಿತದ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಕ್ಕಪಕ್ಕದ ಜಿಲ್ಲೆಗಳಿಂದಲೂ ವೈದ್ಯಕೀಯ ನೆರವು ತಂಡಗಳು ಬಂದಿವೆ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಸೂಲೂರಿನಿಂದ ವೆಲ್ಲಿಂಗ್ಟನ್ಗೆ ತೆರಳುತ್ತಿತ್ತು. ಘಟನಾ ಸ್ಥಳದಲ್ಲಿ 7 ಮೃತದೇಹಗಳು ಪತ್ತೆಯಾಗಿದ್ದು, ರಾವತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಾಯುಪಡೆಯ Mi-17V5 ಹೆಲಿಕಾಪ್ಟರ್ನಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಅಧಿಕಾರಿಗಳಾದ ಗುರುಸೇವಕ್ ಸಿಂಗ್, ಜಿತೇಂದ್ರ ಕುಮಾರ್, ವಿವೇಕ್ ಕುಮಾರ್, ಸಾಯಿತೇಜಾ, ಸತ್ಪಾಲ್ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ತೀವ್ರವಾಗಿ ಗಾಯಗೊಂಡಿರುವ ಬಿಪಿನ್ ರಾವತ್ ಮತ್ತು ಇತರ ನಾಲ್ವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.
ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಯ ಸಿಬ್ಬಂದಿ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರವು ಜನವರಿ 1, 2020ರಂದು ನೇಮಿಸಿತ್ತು. ರಕ್ಷಣ ಇಲಾಖೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ರಾವತ್ ಸೇವೆ ಸಲ್ಲಿಸುತ್ತಿದ್ದರು. ಏಕೀಕೃತ ಕಮಾಂಡ್ಗಳ ರಚನೆ ಮತ್ತು ಸೇನೆಯ ಪುನರ್ ಸಂಘಟನೆಯ ಮಹತ್ವದ ಹೊಣೆಗಾರಿಕೆಯನ್ನು ಅವರು ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: Army Chopper Crash: ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನ; ಲಭ್ಯ ವಿವರಗಳು ಇಲ್ಲಿದೆ ಇದನ್ನೂ ಓದಿ: Army Chopper Crash: ಸಿಡಿಎಸ್ ಬಿಪಿನ್ ರಾವತ್ ದಂಪತಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನ; ಮೂವರ ಸ್ಥಿತಿ ಗಂಭೀರ, ನಾಲ್ವರ ಮೃತದೇಹ ಪತ್ತೆ