Covovax Covid 19 Vaccine: ಕೊವಾವ್ಯಾಕ್ಸ್​ ಲಸಿಕೆಯ ಮಕ್ಕಳ ಮೇಲಿನ ಪ್ರಯೋಗಕ್ಕೆ ಒಪ್ಪಿಗೆ ನೀಡದ ಕೇಂದ್ರ ತಜ್ಞರ ಸಮಿತಿ; ಸೀರಮ್​ ಸಂಸ್ಥೆಗೆ ಸಿಗದ ಅನುಮತಿ

| Updated By: Lakshmi Hegde

Updated on: Jul 01, 2021 | 10:07 AM

ಯುಎಸ್​​ನ ನೊವಾವ್ಯಾಕ್ಸ್​​ ಸಂಸ್ಥೆಯ ಲಸಿಕೆಯನ್ನು ಭಾರತದಲ್ಲಿ ಕೊವಾವ್ಯಾಕ್ಸ್​ ಹೆಸರಿನಲ್ಲಿ ಪುಣೆಯ ಸೀರಮ್​ ಇನ್​ಸ್ಟಿಟ್ಯೂಟ್​ ಉತ್ಪಾದನೆ ಮಾಡಿದ್ದು, ಸೆಪ್ಟೆಂಬರ್​ ಹೊತ್ತಿಗೆ ಬಳಕೆಗೆ ಮುಕ್ತಗೊಳಿಸಲು ನಿರ್ಧರಿಸಿದೆ. ಹಾಗೇ, ಜುಲೈನಿಂದ ಮಕ್ಕಳ ಮೇಲೆ ಕೂಡ ಕ್ಲಿನಿಕಲ್​ ಪ್ರಯೋಗ ನಡೆಸಲು ತೀರ್ಮಾನಿಸಿತ್ತು.

Covovax Covid 19 Vaccine: ಕೊವಾವ್ಯಾಕ್ಸ್​ ಲಸಿಕೆಯ ಮಕ್ಕಳ ಮೇಲಿನ ಪ್ರಯೋಗಕ್ಕೆ ಒಪ್ಪಿಗೆ ನೀಡದ ಕೇಂದ್ರ ತಜ್ಞರ ಸಮಿತಿ; ಸೀರಮ್​ ಸಂಸ್ಥೆಗೆ ಸಿಗದ ಅನುಮತಿ
ಕೊವಾವ್ಯಾಕ್ಸ್​
Follow us on

ಯುಎಸ್​ ಮೂಲದ ಕೊವಾವ್ಯಾಕ್ಸ್​ ಲಸಿಕೆಯನ್ನು 2-17ವರ್ಷದವರ ಮೇಲೆ 2 ಮತ್ತು 3ನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಲು ಕೇಂದ್ರದ ತಜ್ಞರ ಸಮಿತಿ ಒಪ್ಪಿಗೆ ನೀಡಿಲ್ಲ. ಈ ಲಸಿಕೆಯನ್ನು ಪುಣೆಯ ಸೀರಮ್​ ಇನ್​ಸ್ಟಿಟ್ಯೂಟ್​ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ. ಆದರೆ ಕೊವಾವ್ಯಾಕ್ಸ್​​ ಕ್ಲಿನಿಕಲ್​ ಪ್ರಯೋಗವನ್ನು ಮೊದಲು ವಯಸ್ಕರ ಮೇಲೆ ಮಾಡಿ ಮುಗಿಸಿ. ಸದ್ಯಕ್ಕೇನೂ 2-17ವರ್ಷದವರ ಮೇಲೆ ಬೇಡ ಎಂದು ಈ ಸಮಿತಿ ಸೀರಮ್​ ಸಂಸ್ಥೆಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಯುಎಸ್​​ನ ನೊವಾವ್ಯಾಕ್ಸ್​​ ಸಂಸ್ಥೆಯ ಲಸಿಕೆಯನ್ನು ಭಾರತದಲ್ಲಿ ಕೊವಾವ್ಯಾಕ್ಸ್​ ಹೆಸರಿನಲ್ಲಿ ಪುಣೆಯ ಸೀರಮ್​ ಇನ್​ಸ್ಟಿಟ್ಯೂಟ್​ ಉತ್ಪಾದನೆ ಮಾಡಿದ್ದು, ಸೆಪ್ಟೆಂಬರ್​ ಹೊತ್ತಿಗೆ ಬಳಕೆಗೆ ಮುಕ್ತಗೊಳಿಸಲು ನಿರ್ಧರಿಸಿದೆ. ಹಾಗೇ, ಜುಲೈನಿಂದ ಮಕ್ಕಳ ಮೇಲೆ ಕೂಡ ಕ್ಲಿನಿಕಲ್​ ಪ್ರಯೋಗ ನಡೆಸಲು ತೀರ್ಮಾನಿಸಿತ್ತು. ಇದಕ್ಕೆ ಅನುಮತಿ ಕೋರಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI)ಕ್ಕೆ ಸೋಮವಾರ ಅರ್ಜಿಯನ್ನೂ ಸಲ್ಲಿಸಿತ್ತು. ನಾವು ಒಟ್ಟು 10 ಪ್ರದೇಶಗಳಲ್ಲಿ, 920 ಮಕ್ಕಳ ಮೇಲೆ ಕೊವಾವ್ಯಾಕ್ಸ್​ ಲಸಿಕೆ ಪ್ರಯೋಗ ನಡೆಸಲು ಇಚ್ಛಿಸಿದ್ದೇವೆ. ಅದರಲ್ಲಿ 2-11 ವರ್ಷದ 460 ಮಕ್ಕಳು ಮತ್ತು 12-17ವರ್ಷದ 460 ಮಕ್ಕಳನ್ನು ಆಯ್ಕೆ ಮಾಡಿ, ಕ್ಲಿನಿಕಲ್ ಟ್ರಯಲ್​ಗೆ ಒಳಪಡಿಸುತ್ತೇವೆ. ಇದಕ್ಕೆ ಅನುಮತಿ ಕೊಡಿ ಎಂದು ಸೀರಮ್​ ಸಂಸ್ಥೆ ಡಿಸಿಜಿಐಗೆ ಕೇಳಿತ್ತು.

ಆದರೆ ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ)ಯ ಕೊವಿಡ್​ 19 ಸಂಬಂಧಿತ ವಿಷಯ ತಜ್ಞರ ಸಮಿತಿ (ಎಸ್​ಇಸಿ) ಇದನ್ನು ಒಪ್ಪಿಕೊಂಡಿಲ್ಲ. ಸೀರಮ್​ ಸಂಸ್ಥೆಯ ಅರ್ಜಿಯನ್ನು ಸವಿಸ್ತಾರವಾಗಿ ಪರಿಶೀಲನೆ ನಡೆಸಿದ ಸಿಡಿಎಸ್​ಸಿಒ, ಈ ಲಸಿಕೆಗೆ ಇನ್ನೂ ಯಾವುದೇ ದೇಶದಲ್ಲೂ ಅನುಮೋದನೆ ಸಿಕ್ಕಿಲ್ಲ. ಮಕ್ಕಳ ಮೇಲೆ ಪ್ರಯೋಗ ನಡೆಸುವ ಮೊದಲು, ಸದ್ಯ ವಯಸ್ಕರ ಮೇಲೆ ನಡೆಯುತ್ತಿರುವ ಕ್ಲಿನಿಕಲ್​ ಟ್ರಯಲ್​​ನಲ್ಲಿ ಕಂಡು ಬಂದ ಲಸಿಕೆಯ ಸುರಕ್ಷತೆಯ ಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಡಾಟಾವನ್ನು ಸೀರಮ್​ ಸಂಸ್ಥೆ ಸಲ್ಲಿಸಬೇಕು. ಅದನ್ನು ಪರಿಶೀಲನೆ ನಡೆಸಿದ ಬಳಿಕವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಜ್ಞರ ಸಮಿತಿ ಸ್ಪಷ್ಟಪಡಿಸಿದೆ.

ಅಮೆರಿಕದಲ್ಲಿ ಸದ್ಯ ಬಳಕೆಯಾಗುತ್ತಿರುವ ಫಿಜರ್ ಲಸಿಕೆ ಕೊವಿಡ್​ 19 ವಿರುದ್ಧ ಶೇ. 91.3ರಷ್ಟು ಪರಿಣಾಮಕಾರಿಯಾದರೆ, ಮಾಡೆರ್ನಾ ಶೇ.90ರಷ್ಟು ಪರಿಣಾಮ ಬೀರುತ್ತದೆ. ನೊವಾವ್ಯಾಕ್ಸ್​ ಇವೆರಡಕ್ಕಿಂತಲೂ ಹೆಚ್ಚು ಅಂದರೆ ಶೇ.94ರಷ್ಟು ಪ್ರಭಾವಶಾಲಿ ಎಂಬುದು ಅದರ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​​ನ ಫಲಿತಾಂಶ. ಈ ನೊವಾವ್ಯಾಕ್ಸ್​​ನ್ನು ಪುಣೆಯ ಸೀರಮ್​​ ಇನ್​ಸ್ಟಿಟ್ಯೂಟ್​​ನಲ್ಲಿ ಉತ್ಪಾದಿಸಲು, ಕ್ಲಿನಿಕಲ್ ಟ್ರಯಲ್​ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ಒಮ್ಮೆಲೇ ಮಕ್ಕಳ ಮೇಲೆ ಪ್ರಯೋಗ ಬೇಡ ಎಂದು ಹೇಳಿದೆ.

ಇದನ್ನೂ ಓದಿ: ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ

(Central Government panel says no to Covovax trial on children In India)