
ನವದೆಹಲಿ, ನವೆಂಬರ್ 23: ಚಂಡೀಗಡವನ್ನು ಆರ್ಟಿಕಲ್ 240 ಅಡಿಗೆ ತರುವುದರಿಂದ ಅದರ ಆಡಳಿತ ವ್ಯವಹಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರದ ಈ ನಡೆಯ ವಿರುದ್ಧ ಪಂಜಾಬ್ನಲ್ಲಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯವು ತನ್ನ ಪ್ರಸ್ತಾಪನೆ ಕುರಿತು ಸ್ಪಷ್ಟನೆ ಹೊರಡಿಸಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದೂ ಹೇಳಿದೆ.
‘ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡಕ್ಕೆ ಕಾನೂನು ರಚನೆಯ ಪ್ರಕ್ರಿಯೆ ಸರಳಗೊಳಿಸುವ ಪ್ರಸ್ತಾಪವೊಂದು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಪರಿಗಣನೆಗೆ ಬಂದಿದೆ. ಈ ಪ್ರಸ್ತಾಪದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ’ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಹೇಳಿಕೆ ನೀಡಿದೆ.
ಇದನ್ನೂ ಓದಿ: ಆರ್ಟಿಕಲ್ 240 ಅಡಿಗೆ ಚಂಡೀಗಡ; ಕೇಂದ್ರದ ಪ್ರಯತ್ನ ವಿರುದ್ಧ ಪಂಜಾಬ್ನಲ್ಲಿ ಭುಗಿಲೆದ್ದ ಆಕ್ರೋಶ
ಚಂಡೀಗಡವನ್ನು ಪಂಜಾಬ್ ರಾಜ್ಯದಿಂದ ಪೂರ್ಣವಾಗಿ ಕಿತ್ತುಕೊಳ್ಳುವ ಹುನ್ನಾರ ನಡೆದಿದೆ ಎಂದು ಪಂಜಾಬ್ ನಾಯಕರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಚಂಡೀಗಡದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಸಂಗತಿ ಇಲ್ಲ. ಚಂಡೀಗಡದ ಜೊತೆ ಪಂಜಾಬ್ ಅಥವಾ ಹರ್ಯಾಣಕ್ಕೆ ಇರುವ ಸಾಂಪ್ರದಾಯಿಕ ಸಂಬಂಧದಲ್ಲೂ ಬದಲಾವಣೆ ಆಗಲ್ಲ ಎಂದು ಸಚಿವಾಲಯವು ತಿಳಿಸಿದೆ.
‘ಚಂಡೀಗಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಭಾಗಿದಾರರ ಜೊತೆ ಸರಿಯಾಗಿ ಸಮಾಲೋಚನೆ ನಡೆಸಿದ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಚಾರದ ಬಗ್ಗೆ ಯಾವುದೇ ಆತಂಕ ಪಡುವುದು ಬೇಡ’ ಎಂದು ಕೇಂದ್ರ ಗೃಹ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಉತ್ತರಾಖಂಡ್ನ ಶಾಲೆ ಬಳಿ ಭಾರೀ ಸ್ಫೋಟಕಗಳು ಪತ್ತೆ; ಹೆಚ್ಚಿದ ಉಗ್ರಾತಂಕ
ಚಂಡೀಗಡವನ್ನು ಆರ್ಟಿಕಲ್ 240ರ ಅಡಿಗೆ ತರುವ ಮಸೂದೆಯನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎನ್ನುವ ಸುದ್ದಿಯನ್ನು ಸರ್ಕಾರ ತಳ್ಳಿ ಹಾಕಿದೆ. ಅಂಥ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ