ಉತ್ತರಾಖಂಡ್ನ ಶಾಲೆ ಬಳಿ ಭಾರೀ ಸ್ಫೋಟಕಗಳು ಪತ್ತೆ; ಹೆಚ್ಚಿದ ಉಗ್ರಾತಂಕ
161 Gelatin sticks found near a school of Uttarakhand: ಉತ್ತರಾಖಂಡ್ನ ಆಲ್ಮೋರಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 161 ಗಿಲಾಟಿನ್ ಸ್ಫೋಟಕಗಳು ಸಿಕ್ಕಿರುವುದು ವರದಿಯಾಗಿದೆ. ಶಾಲೆ ಬಳಿ ಪೊದೆಗಳಲ್ಲಿ ಪೊಟ್ಟಣಗಳನ್ನು ಕಂಡು ಸಂಶಯಗೊಂಡು ಶಾಲಾ ಪ್ರಿನ್ಸಿಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬಂದ ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ನಡೆಸಿ 161 ಗಿಲಾಟಿನ್ ಕಡ್ಡಿಗಳನ್ನು ಪತ್ತೆ ಮಾಡಿವೆ.

ನವದೆಹಲಿ, ನವೆಂಬರ್ 23: ಹರ್ಯಾಣದಲ್ಲಿ 3,000 ಕಿಲೋ ಸ್ಫೋಟಕಗಳು ದೊರೆತ ಬೆನ್ನಲ್ಲೇ ಉತ್ತರಾಖಂಡ್ನ ಶಾಲೆಯೊಂದರಲ್ಲೂ ಸ್ಫೋಟಕಗಳು (explosives) ಪತ್ತೆಯಾಗಿವೆ. ವರದಿಗಳ ಪ್ರಕಾರ, ಉತ್ತರಾಖಂಡ್ನ ಆಲ್ಮೋರಾ ಜಿಲ್ಲೆಯ ದಬರ (Dabara) ಗ್ರಾಮದ ಸರ್ಕಾರಿ ಶಾಲೆಯಲ್ಲಿ 20 ಕಿಲೋ ತೂಕದ 161 ಗಿಲಾಟಿನ್ ಸ್ಪೋಟಕಗಳು (Gelatin stick) ಕಂಡು ಬಂದಿವೆ. ಶಾಲೆಯ ಪ್ರಾಂಶುಪಾಲ ಸುಭಾಷ್ ಸಿಂಗ್ ಅವರು ಈ ಸ್ಫೋಟಕಗಳನ್ನು ಕಂಡು, ಪೊಲೀಸರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ.
ವರದಿಗಳ ಪ್ರಕಾರ, ಶಾಲೆ ಸಮೀಪದ ಪೊದೆಗಳಲ್ಲಿ ಚೀಲಗಳನ್ನು ಕಂಡು ಪ್ರಾಂಶುಪಾಲರಿಗೆ ಸಂಶಯ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಎರಡು ತಂಡಗಳು ತತ್ಕ್ಷಣವೇ ಆಗಮಿಸಿವೆ. ಉಧಮ್ ಸಿಂಗ್ ನಗರ್ ಮತ್ತು ನೈನಿತಾಲ್ ಜಿಲ್ಲೆಗಳಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳಗಳನ್ನೂ ಕರೆಸಲಾಗಿದೆ.
ಇದನ್ನೂ ಓದಿ: ಉಗ್ರರು ನೆತ್ತರು ಹರಿಸಿದ್ದ ಪಹಲ್ಗಾಮ್ ಕಣಿವೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ
ಶ್ವಾನ ದಳದ ನೆರವಿನಿಂದ ಪೊದೆಗಳಲ್ಲಿ ಗಿಲಾಟಿನ್ ಕಡ್ಡಿಗಳ ಕೆಲ ಪೊಟ್ಟಣಗಳ್ನು ಶೋಧಿಸಲಾಯಿತು. ಅಲ್ಲಿಂದ 20 ಅಡಿ ದೂರದಲ್ಲಿ ಇನ್ನಷ್ಟು ಸ್ಫೋಟಕಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳವು ಈ ಎಲ್ಲಾ ಸ್ಫೋಟಕಗಳ ಪ್ಯಾಕೆಟ್ಗಳನ್ನು ಪಡೆದು, ಸೀಲ್ ಮಾಡಿ ಸುರಕ್ಷಿತ ಸ್ಥಳವೊಂದರಲ್ಲಿ ಇರಿಸಿದೆ.
‘ದಬರ ಗ್ರಾಮದ ಶಾಲೆಯೊಂದರ ಬಳಿಯ ಪೊದೆಗಳಲ್ಲಿ 161 ಗಿಲಾಟಿನ್ ಸ್ಫೋಟಕ ಕಡ್ಡಿಗಳು ಸಿಕ್ಕಿವೆ. ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸಿದೆ. ಸಮೀಪದ ಪ್ರದೇಶಗಳಲ್ಲೂ ಸ್ಫೋಟಕಗಳ ಪತ್ತೆಗೆ ಶೋಧ ನಡೆಸಲಾಯಿತು’ ಎಂದು ಎಸ್ಎಸ್ಪಿ ದೇವೇಂದ್ರ ಪಿಂಚಾ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಪಾಕ್ಗೂ ಇರುವ ನಂಟು ಖಾತ್ರಿಯಾಯ್ತು, ಪಿಒಕೆಯಲ್ಲಿ ನಡೆದಿದೆ ದಾಳಿಕೋರನ ಅಂತ್ಯಕ್ರಿಯೆ
ಬಂಡೆ ಒಡೆಯಲು ಬಳಸುವ ಗಿಲಾಟಿನ್ ಕಡ್ಡಿ
ಗಿಲಾಟಿನ್ ಕಡ್ಡಿಗಳು ತೀವ್ರ ಮಟ್ಟದ ಸ್ಫೋಟಕ ವಸ್ತುವಾಗಿವೆ. ಗಣಿಗಳಲ್ಲಿ ಇವುಗಳ ಬಳಕೆ ಸಾಮಾನ್ಯ. ಬೆಟ್ಟಗಳಲ್ಲಿ ಬಂಡೆ ಒಡೆಯಲು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಶಾಲೆಗೆ ಈ ಗಿಲಾಟಿನ್ ಸ್ಫೋಟಕಗಳು ಯಾಕೆ ಬಂದವು ಎಂಬುದು ಆಶ್ಚರ್ಯ ಮೂಡಿಸಿದೆ. ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತು ಕಾಯ್ದೆಯ ಸೆಕ್ಷನ್ 4ಎ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




