ಉಗ್ರರು ನೆತ್ತರು ಹರಿಸಿದ್ದ ಪಹಲ್ಗಾಮ್ ಕಣಿವೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ
ಕಣಿವೆ ನಾಡಿನಲ್ಲಿ ಕನ್ನಡದ ಬಾವುಟ ರಾರಾಜಿಸಿದೆ. ಉಗ್ರರು ಅಟ್ಟಹಾಸದ ಜಾಗದಲ್ಲಿ ‘ಕನ್ನಡ ಡಿಂಡಿಮ’ ಮೊಳಗಿದೆ. ಪಹಲ್ಗಾಮ್ನಲ್ಲಿ ಐತಿಹಾಸಿಕ ಕನ್ನಡ ರಾಜ್ಯೋತ್ಸವ ನಡೆದಿದೆ. ಜಿಬಿಎ ಮತ್ತು ನೌಕರರ ಸಂಘದಿಂದ ರಾಜ್ಯೋತ್ಸವ ನಡೆದಿದೆ. ಪ್ರವಾಸಿಗರ ತಾಣದಲ್ಲಿ ಕನ್ನಡಿಗರ ಕಲರವ ಮೂಡಿದೆ. ಕಾಶ್ಮೀರದ ಕೊರೆಯೋ ಚಳಿಯಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಕರ್ನಾಟಕದಿಂದ 400ಕ್ಕೂ ಹೆಚ್ಚು ನೌಕರರು ಭಾಗಿಯಾಗಿದ್ದಾರೆ.

ಬೆಂಗಳೂರು, ನವೆಂಬರ್ 22: ಭಾರತದ ಸ್ವರ್ಗವೆಂದೇ ಕರೆಯಲ್ಪಡುವ ಕಾಶ್ಮೀರವನ್ನು ಭಾರತದ ಮುಕುಟವೆಂದು ಕರೆಯಲಾಗುತ್ತದೆ. ಏಪ್ರಿಲ್ 22ರಂದು ಉಗ್ರರು ಅಟ್ಟಹಾಸ ಮೆರೆದು ಭಾರತೀಯ ಪ್ರವಾಸಿಗರ ನೆತ್ತರು ಹರಿಸಿದ್ದ ಜಾಗದಲ್ಲೇ ಕರ್ನಾಟಕದ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ನಡೆಯಿತು. ಪಹಲ್ಗಾಮ್ (Pahalgam) ಕಣಿವೆಯಲ್ಲಿ ಕನ್ನಡ ಡಿಂಡಿಮ ಮೊಳಗಿದೆ.
ಅದು 2025ರ ಏಪ್ರಿಲ್ 22ರಂದು ಪ್ರವಾಸಿಗರ ಸ್ವರ್ಗ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನೆತ್ತರೋಕುಳಿ ಹರಿಸಿದ್ದರು. ಕಂಡ ಕಂಡ ಪ್ರವಾಸಿಗರ ಎದೆಗೆ ಗುಂಡಿಕ್ಕಿ 26 ಜನರ ಹತ್ಯೆಗೈದಿದ್ದರು. ಬರೀ ಕೆಂಪು ರಕ್ತವೇ ಹರಿದಿದ್ದ ಜಾಗದಲ್ಲಿಂದು ಅರಿಶಿಣ-ಕುಂಕುಮ ಬಣ್ಣ ರಾರಾಜಿಸಿದೆ. ಈ ಜಾಗದಲ್ಲಿ ಕನ್ನಡದ ಬಾವುಟ ಹಾರಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಪಾಕ್ಗೂ ಇರುವ ನಂಟು ಖಾತ್ರಿಯಾಯ್ತು, ಪಿಒಕೆಯಲ್ಲಿ ನಡೆದಿದೆ ದಾಳಿಕೋರನ ಅಂತ್ಯಕ್ರಿಯೆ
ಉಗ್ರರ ಅಟ್ಟಹಾಸದ ಬಳಿಕ ಪಹಲ್ಗಾಮ್ಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಆ ಭಯವನ್ನು ಹೋಗಲಾಡಿಸೋ ಸಲುವಾಗಿ ಜಿಬಿಎ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಐತಿಹಾಸಿಕ ರಾಷ್ಟ್ರೀಯ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪಹಲ್ಗಾಮ್ನಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಕನ್ನಡ ರಾಜ್ಯೋತ್ಸವದಲ್ಲಿ, ಭರತ್ ಭೂಷಣ್, ಮಂಜುನಾಥ ರಾವ್ ಸೇರಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ವೇಳೆ ಒಂದು ನಿಮಿಷಗಳ ಕಾಲ ಎದ್ದು ನಿಂತು ಮೌನ ಆಚರಿಸಿದರು.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದೆ ಮೂವರು ಪಾಕಿಸ್ತಾನಿ ಉಗ್ರರ ಕೈವಾಡ; ಎನ್ಐಎ ತನಿಖೆಯಲ್ಲಿ ಬಹಿರಂಗ
ಮೈನಸ್ 4 ಡಿಗ್ರಿ ಸೆಲ್ಸಿಯಲ್ ಚಳಿಯಲ್ಲೂ ಕನ್ನಡದ ಕಂಪು ಹರಡಿತ್ತು. ಜಿಬಿಎನ ಸುಮಾರು 400 ನೌಕರರು ಭಾಗಿಯಾಗಿದ್ದರು. ಗಾಯಕಿ ಅನುರಾಧ ಭಟ್ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡಿದರು. ಸ್ಥಳೀಯ ಪೊಲೀಸರು ಮತ್ತು ಸೇನೆ ಬಂದೋಬಸ್ತ್ ನೀಡಿದ್ದರು. ಕಾಶ್ಮೀರದ ಪಹಲ್ಗಾಮ್ನಲ್ಲಿ ಯಕ್ಷಗಾನ, ಡೊಳ್ಳು ಕುಣಿತದ ಮೂಲಕ ಕನ್ನಡದ ಕಹಳೆ ಮೊಳಗಿಸಲಾಯಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:47 pm, Sat, 22 November 25



