ಆರ್ಟಿಕಲ್ 240 ಅಡಿಗೆ ಚಂಡೀಗಡ; ಕೇಂದ್ರದ ಪ್ರಯತ್ನ ವಿರುದ್ಧ ಪಂಜಾಬ್ನಲ್ಲಿ ಭುಗಿಲೆದ್ದ ಆಕ್ರೋಶ
Centre's move to bring Chandigarh under Article 240: ಸಂವಿಧಾನದ ಆರ್ಟಿಕಲ್ 240ರ ಅಡಿಗೆ ಚಂಡೀಗಡವನ್ನು ಒಳಪಡಿಸುವಂತಹ ಮಸೂದೆಗೆ ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ. ಪಂಜಾಬ್ನಿಂದ ಚಂಡೀಗಡವನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ವಿಪಕ್ಷಗಳು ಹರಿಹಾಯುತ್ತಿವೆ. ಸದ್ಯ ಚಂಡೀಗಡದ ಆಡಳಿತವನ್ನು ಪಂಜಾಬ್ ರಾಜ್ಯಪಾಲು ನೋಡಿಕೊಳ್ಳುತ್ತಿದ್ದಾರೆ. ಆರ್ಟಿಕಲ್ 240 ಬಂದರೆ ರಾಷ್ಟ್ರಪತಿಗಳ ನೇರ ಆಳ್ವಿಕೆ ಇರುತ್ತದೆ.

ಚಂಡಿಗಡ್, ನವೆಂಬರ್ 23: ಚಂಡೀಗಡವನ್ನು ಸಂವಿಧಾನದ 240ನೇ ಪರಿಚ್ಛೇದಕ್ಕೆ (Constitution’s Article 240) ತರಲು ಯತ್ನಿಸುವಂತಹ ಪ್ರಯತ್ನಕ್ಕೆ ಕೇಂದ್ರ ಕೈಹಾಕಿದೆ. ಅದಕ್ಕಾಗಿ 131ನೇ ತಿದ್ದುಪಡಿ ಮಸೂದೆಯನ್ನು (131st Amendment bill) ಸಂಸತ್ತಿನಲ್ಲಿ ಪ್ರಸ್ತುತಪಡಲು ಯೋಜಿಸಿದೆ. ಕೇಂದ್ರದ ಈ ಪ್ರಸ್ತಾಪಕ್ಕೆ ಪಂಜಾಬ್ ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿವೆ. ಚಂಡೀಗಡವನ್ನು ಪಂಜಾಬ್ನಿಂದ ಸಂಪೂರ್ಣವಾಗಿ ಕಿತ್ತುಕೊಳ್ಳುವ ಪ್ರಯತ್ನ ಎಂದು ಪಂಜಾಬ್ನ ಎಎಪಿ, ಅಕಾಲಿ ದಳ ಹಾಗೂ ಕಾಂಗ್ರೆಸ್ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ಪಕ್ಷದ ನಾಯಕರು ಕೇಂದ್ರದ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ಆರ್ಟಿಕಲ್ 240?
ಕೇಂದ್ರಾಡಳಿತದ ಪ್ರದೇಶದಲ್ಲಿ ರಾಷ್ಟ್ರಪತಿಗಳು ನೇರವಾಗಿ ಕಾನೂನು ರೂಪಿಸುವ ಅವಕಾಶವನ್ನು ಸಂವಿಧಾನದ ಆರ್ಟಿಕಲ್ 240 ತಂದುಕೊಡುತ್ತದೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್, ಲಕ್ಷದ್ವೀಪ್, ಪುದುಚೇರಿ, ದಾದ್ರ ಮತ್ತು ನಾಗರ್ ಹವೇಲಿ, ದಮನ್ ಮತ್ತು ದಿಯು ಇವು ಆರ್ಟಿಕಲ್ 240 ಅಡಿಗೆ ಬರುತ್ತವೆ. ಆದರೆ, ಚಂಡೀಗಡವು ಕೇಂದ್ರಾಡಳಿತ ಪ್ರದೇಶವಾದರೂ ಆರ್ಟಿಕಲ್ 240 ಅಡಿಗೆ ಬರುವುದಿಲ್ಲ.
ಇದನ್ನೂ ಓದಿ: ಉತ್ತರಾಖಂಡ್ನ ಶಾಲೆ ಬಳಿ ಭಾರೀ ಸ್ಫೋಟಕಗಳು ಪತ್ತೆ; ಹೆಚ್ಚಿದ ಉಗ್ರಾತಂಕ
ಆರ್ಟಿಕಲ್ 240ಗೆ ಚಂಡೀಗಡವನ್ನು ಒಳಪಡಿಸಲು ಪಂಜಾಬ್ನಿಂದ ಯಾಕೆ ವಿರೋಧ?
ಹರ್ಯಾಣ ರಾಜ್ಯವು 1966ರಲ್ಲಿ ಪಂಜಾಬ್ನಿಂದ ಪ್ರತ್ಯೇಕಗೊಂಡಿತು. ಈ ವೇಳೆ ಎರಡೂ ರಾಜ್ಯಗಳು ಚಂಡೀಗಡವೇ ರಾಜಧಾನಿಯಾಗಬೇಕೆಂದು ಪಟ್ಟು ಹಿಡಿದವು. ನಂತರ, ಇದು ಜಂಟಿ ರಾಜಧಾನಿಯಾಯಿತು. ಸದ್ಯ, ಪಂಜಾಬ್ನ ರಾಜ್ಯಪಾಲರೇ ಚಂಡೀಗಡದ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಕೇಂದ್ರವು ಚಂಡೀಗಡವನ್ನು ಆರ್ಟಿಕಲ್ 240ಗೆ ಒಳಪಡಿಸಿದರೆ ಅದು ಪಂಜಾಬ್ನ ನಿಯಂತ್ರಣದಿಂದ ಪೂರ್ಣ ಕೈತಪ್ಪಿ ಹೋಗಬಹುದು. ಹೀಗಾಗಿ, ಪಂಜಾಬ್ ರಾಜಕೀಯ ನಾಯಕರು ವಿರೋಧಿಸುತ್ತಿದ್ದಾರೆ.
ಚಂಡೀಗಡವು ಪಂಜಾಬ್ನ ಅವಿಭಾಜ್ಯ ಅಂಗ ಎಂಬುದನ್ನು ಪಂಜಾಬ್ ಮೊದಲಿಂದಲೂ ಒತ್ತಿ ಹೇಳುತ್ತಾ ಬಂದಿದೆ. ಪಂಜಾಬ್ನ ಆಡಳಿತಾರೂಢ ಎಎಪಿ ಸರ್ಕಾರದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಜಾಬ್ನಿಂದ ಚಂಡೀಗಡವನ್ನು ಕಿತ್ತುಕೊಳ್ಳಲು ತಾವು ಬಿಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಉಗ್ರರು ನೆತ್ತರು ಹರಿಸಿದ್ದ ಪಹಲ್ಗಾಮ್ ಕಣಿವೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ
ವಿರೋಧ ಪಕ್ಷವಾದ ಶಿರೋಮಣಿ ಅಕಾಲಿ ದಳ, ಕಾಂಗ್ರೆಸ್ ಪಕ್ಷಗಳೂ ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಮಾಜಿ ಸಿಎಂ ಅಮರೀಂದರ್ ಸಿಂಗ್ ಅವರೂ ಕೇಂದ್ರದ ನಡೆಯನ್ನು ವಿರೋಧಿಸಿದ್ದಾರೆ.
ಇನ್ನೊಂದೆಡೆ, ಬಿಜೆಪಿ ನಾಯಕರುಗಳೂ ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ. ಚಂಡೀಗಡವನ್ನು ಆರ್ಟಿಕಲ್ 240 ಅಡಿಗೆ ತಂದಲ್ಲಿ, ಅಭಿವೃದ್ಧಿ ಕಾರ್ಯ ಸುಲಭವಾಗುತ್ತದೆ. ಆಡಳಿತದ ಹಿತದೃಷ್ಟಿಯಿಂದಷ್ಟೇ ಕೇಂದ್ರ ಸರ್ಕಾರ ಈ ನಡೆ ತಂದಿದೆ ಎಂದು ಬಿಜೆಪಿ ವಾದಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:18 pm, Sun, 23 November 25




