ಸಾಂಕ್ರಾಮಿಕ ಕೊರೊನಾ ಸೋಂಕಿಗೆ ಒಳಗಾದವರು, ಸೋಂಕಿನಿಂದ ಚೇತರಿಸಿಕೊಂಡವರು ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗೇ, ಈ ಆಳವಾದ ಉಸಿರಾಟವನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು ಎಂಬ ಸೂಚನೆಯುಳ್ಳ ಚಾರ್ಟ್ವೊಂದನ್ನೂ MyGovIndia ಟ್ವಿಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದೆ. ಕೊರೊನಾ ಸೋಂಕಿತರು ಆಳ ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮ ಮಾಡುವುದರಿಂದ ಚೇತರಿಸಿಕೊಳ್ಳಲು ತುಂಬ ಸಹಾಯವಾಗುತ್ತದೆ. ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗೇ ಈ ವ್ಯಾಯಾಮವನ್ನು ಸ್ಟೀಮ್ ತೆಗೆದುಕೊಂಡ ಬಳಿಕವೂ ಮಾಡಬಹುದು, ಅದನ್ನು ತೆಗೆದುಕೊಳ್ಳದೆಯೇ ಕೂಡ ಮಾಡಬಹುದು ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಅದರಲ್ಲೂ ಈ ಕೊರೊನಾ ಸೋಂಕಿನ ಸಮಯದಲ್ಲಿ ಅನುಲೋಮ-ವಿಲೋಮ ಪ್ರಾಣಾಯಾಮ ಮಾಡುವುದು ತುಂಬ ಸಹಕಾರಿ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗಿದೆ. ಅದೆಷ್ಟೋ ರೋಗಿಗಳು ಆಮ್ಲಜನಕ ಮಟ್ಟ ಕುಸಿತವಾಗಿ ಮೃತಪಟ್ಟಿದ್ದಾರೆ. ಹಾಗಾಗಿ ಕೊರೊನಾ ರೋಗಿಗಳು ತಮ್ಮ ದೇಹದಲ್ಲಿ ಆಮ್ಲಜನಕ ಮಟ್ಟದ ಸ್ಥಿರತೆ ಕಾಪಾಡಿಕೊಳ್ಳುವುದು ತುಂಬ ಮುಖ್ಯವಾಗಿದ್ದು, ಅದಕ್ಕೆ ಈ ಉಸಿರಾಟದ ವ್ಯಾಯಾಮಗಳು ಸಹಾಯ ಮಾಡುತ್ತವೆ.
ಹೀಗೆ ಉಸಿರಾಟದ ವ್ಯಾಯಾಮ ಮಾಡುವಾಗಿನ 6 ಹಂತವನ್ನು ಕೇಂದ್ರ ಸರ್ಕಾರ ಸೂಚಿಸಿದ್ದು, ಅವು ಹೀಗಿವೆ:
1. ಮೊದಲು ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳಿ
2. ಶರೀರವನ್ನು ಸಂಪೂರ್ಣ ವಿಶ್ರಾಂತಿ ಸ್ಥಿತಿಗೆ ಬಿಡಿ
3. ಅದಾದ ಬಳಿಕ ಮೂಗಿನ ಮೂಲಕ ನಿಧಾನವಾಗಿ ಉಸಿರಾಡಲು ಪ್ರಾರಂಭಿಸಿ.
4. ಮೊದಲು ಮೂಗಿನಿಂದ ಉಸಿರನ್ನು ತೆಗೆದುಕೊಂಡು, ಸ್ವಲ್ಪ ಕಾಲ ಹಿಡಿಯಿರಿ
5. ಅದಾದ ಮೇಲೆ ಆ ಉಸಿರನ್ನು ನಿಧಾನವಾಗಿ ಬಿಡಿ. ಈ ಸಮಯದಲ್ಲಿ ನಿಮ್ಮ ಬಾಯಿಯನ್ನು ತೆರೆದಿರಬೇಕು
6. ಸುಮಾರು 10 ಸಲ ಹೀಗೆ ಮಾಡಬೇಕು
ಹಾಗೇ, ಉಸಿರಾಟದ ವ್ಯಾಯಾಮವನ್ನು ಹೇಗೇಗೋ ಮಾಡುವಂತಿಲ್ಲ. ಮುಚ್ಚಿದ ಕೋಣೆಯಲ್ಲಿ ಮಾಡಬೇಕು. ಮಾಸ್ಕ್ನ್ನು ಧರಿಸಿರಬಾರದು. ಕೊರೊನಾ ರೋಗಿಗಳು ಈ ವ್ಯಾಯಾಮವನ್ನು ಮಾಡಬೇಕು ಎಂದು ಹೇಳಿದ್ದರೂ, ತೀವ್ರ ಉಸಿರಾಟದ ಸಮಸ್ಯೆ ಇರುವವರು, ತುಂಬ ಜ್ವರ ಇರುವವರು, ಎದೆ ನೋವಿನಿಂದ ಬಳಲುತ್ತಿರುವವರು ಈ ವ್ಯಾಯಾಮ ಮಾಡುವ ಅಗತ್ಯ ಇಲ್ಲ. ಇನ್ನು ಆಳ ಉಸಿರಾಟದ ವ್ಯಾಯಾಮ ಮಾಡುವಾಗ ಯಾರಿಗಾದರೂ ತಲೆ ತಿರುಗುವ ಅನುಭವ ಅಥವಾ ಹೃದಯ ಬಡಿತ ಜೋರಾದ ಅನುಭವ ಆದರೆ ಕೂಡಲೇ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಭಾರತದಲ್ಲಿ ಶನಿವಾರ ಒಂದೇ ದಿನ 326,098 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 3,890ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
During this pandemic, it is important to stay healthy. Here’s how you can do deep breathing exercises which may help in recovery after illness. Take a look! #IndiaFightsCorona #Unite2FightCorona pic.twitter.com/luhLaw4sIx
— MyGovIndia (@mygovindia) May 15, 2021
ಇದನ್ನೂ ಓದಿ: ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ
ತಮ್ಮ ಹುಟ್ಟುಹಬ್ಬದಂದು ಕೊವಿಡ್ ಸೋಂಕಿತರಿಗೆ ನೆರವಾಗುವಂತೆ ಮನವಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ
Published On - 3:27 pm, Sat, 15 May 21