ವಿಶ್ವಸಂಸ್ಥೆ ರಾಯಭಾರಿ, ಪಿಎಂಒ ನಂಟು… ಸ್ವಾಮಿ ಚೈತನ್ಯಾನಂದರ ನಾನಾ ವೇಷಗಳನ್ನು ಕಂಡ ಪೊಲೀಸರು

Delhi police expose self styled Godman: 17 ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಚೈತನ್ಯಾನಂದ ಸರಸ್ವತಿ ಅವರನ್ನು 5 ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ. ಚೈತನ್ಯಾನಂದರು ಎರಡು ನಕಲಿ ವಿಸಿಟಿಂಗ್ ಕಾರ್ಡ್, ನಕಲಿ ದಾಖಲೆಗಳಿಂದ ಪಡೆದ ಎರಡು ಪಾಸ್​ಪೋರ್ಟ್​ಗಳು ಪೊಲೀಸರಿಗೆ ಸಿಕ್ಕಿವೆ. ಪಿಎಂಒ ಕಚೇರಿಯಲ್ಲಿ ತನಗೆ ಲಿಂಕ್ ಇದೆ ಎಂದು ಹೇಳಿಕೊಳ್ಳುತ್ತಿದ್ದರೆನ್ನಲಾಗಿದೆ.

ವಿಶ್ವಸಂಸ್ಥೆ ರಾಯಭಾರಿ, ಪಿಎಂಒ ನಂಟು... ಸ್ವಾಮಿ ಚೈತನ್ಯಾನಂದರ ನಾನಾ ವೇಷಗಳನ್ನು ಕಂಡ ಪೊಲೀಸರು
ಚೈತನ್ಯಾನಂದ ಸರಸ್ವತಿ

Updated on: Sep 28, 2025 | 8:57 PM

ನವದೆಹಲಿ, ಸೆಪ್ಟೆಂಬರ್ 28: ದೆಹಲಿಯ ಶ್ರೀ ಶಾರದ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಆರೋಪ ಎದುರಿಸುತ್ತಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ (Chaitanyananda Saraswati) ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಗ್ರಾದ ಹೋಟೆಲ್​ವೊಂದರಲ್ಲಿ ನಿನ್ನೆ ಶನಿವಾರ ಬಂಧಿಸಲಾಗಿದ್ದ ಚೈತನ್ಯಾನಂದರನ್ನು ವಸಂತ್ ಕುಂಜ್ ಪೊಲೀಸ್ ಠಾಣೆಗೆ ತರಲಾಯಿತು. ಬಳಿಕ ದೆಹಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಇದೇ ವೇಳೆ, ಪೊಲೀಸ್ ತನಿಖೆಯಲ್ಲಿ ಸ್ವಘೋಷಿತ ದೇವಮಾನವನ ನಾನಾ ವೇಷಗಳು ಬೆಳಕಿಗೆ ಬಂದಿವೆ.

ಚೈತನ್ಯಾನಂದ ಸರಸ್ವತಿ ಬಳಿ ಎರಡು ನಕಲಿ ವಿಸಿಟಿಂಗ್ ಕಾರ್ಡ್​ಗಳು ಸಿಕ್ಕಿವೆ. ಒಂದರಲ್ಲಿ ಅವರು ತಮ್ಮನ್ನು ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ. ಮತ್ತೊಂದರಲ್ಲಿ ಬ್ರಿಕ್ಸ್ ರಾಷ್ಟ್ರಗಳ ಗುಂಪಿನಲ್ಲಿ ಭಾರತದ ವಿಶೇಷ ರಾಯಭಾರಿ ಎಂದು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಶ್ರೀ ಅರೆಸ್ಟ್

ಅಷ್ಟೇ ಅಲ್ಲ, ಚೈತನ್ಯಾನಂದರು ತಮಗೆ ಪ್ರಧಾನಿ ಕಚೇರಿಯಲ್ಲಿ ನಿಕಟ ಸಂಪರ್ಕ ಇದೆ ಎಂದು ಹೇಳಿಕೊಳ್ಳುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅವರ ಬಳಿ ಎರಡು ಪಾಸ್​ಪೋರ್ಟ್​ಗಳಿವೆ. ಎರಡನ್ನೂ ಕೂಡ ನಕಲಿ ದಾಖಲೆಗಳ ಮೂಲಕ ಪಡೆದಂಥವೇ ಆಗಿವೆ. ಒಂದು ಪಾಸ್​ಪೋರ್ಟ್​ನಲ್ಲಿ ಅವರ ತಂದೆಯ ಹೆಸರು ಸ್ವಾಮಿ ಘಾನಾನಂದ ಪುರಿ, ತಾಯಿ ಹೆಸರು ಶಾರದಾ ಅಂಬಾ ಎಂದಿದೆ. ಎರಡನೇ ಪಾಸ್​ಪೋರ್ಟ್​ನಲ್ಲಿ ಸ್ವಾಮಿ ದಯಾನಂದ ಸರಸ್ವತಿ, ತಾಯಿ ಶಾರದಾ ಅಂಬಾಲ್ ಎಂದು ಹೆಸರಿಸಲಾಗಿದೆ.

ಎರಡು ಬೇರೆ ಬೇರೆ ಹೆಸರಿನಲ್ಲಿ ಯೂನಿಯಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅವರು ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿರುವುದೂ ಕೂಡ ಗೊತ್ತಾಗಿದೆ. ಪೊಲೀಸರು ಆ ಖಾತೆಗಳಲ್ಲಿನ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ.

ಶಾರದಾ ಪೀಠಕ್ಕೂ ಯಾಮಾರಿಸಿದ್ದರಾ ಚೈತನ್ಯಾನಂದ?

1998ರಲ್ಲಿ ಅಂದಿನ ದೆಹಲಿ ಲೆಫ್ಟಿನಿಂಟ್ ಗವರ್ನರ್ ಅವರು ದೆಹಲಿಯ ವಸಂತ್ ಕುಂಜ್​ನಲ್ಲಿ ಶೃಂಗೇರಿ ಶಾರದಾ ಪೀಠಕ್ಕೆ ಒಂದು ಮಠ ಕಟ್ಟಲು ಜಾಗ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಆ ಮಠದ ಹಿರಿಯ ಅಧಿಕಾರಿಯಾಗಿ ಚೈತನ್ಯಾನಂದರನ್ನು ನೇಮಕ ಮಾಡಲಾಗಿತ್ತು. 2008ರಲ್ಲಿ ಇತರ ಕೆಲವರೊಂದಿಗೆ ಸೇರಿ ಚೈತನ್ಯಾನಂದರು ಮಠದ ಹೆಸರನ್ನು ಶ್ರೀ ಶಾರದಾ ಇನ್​ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಎಂದು ಬದಲಿಸಿದರು. ಶಾರದಾ ಪೀಠದ ಅನುಮತಿಯನ್ನೂ ಪಡೆದಿರಲಿಲ್ಲ. ಮಠದ ಒಂದು ಆಸ್ತಿಯನ್ನು ಬಾಡಿಗೆಗೂ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತೀಟೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರಿಗೆ ಫಾರಿನ್ ಟ್ರಿಪ್ ಆಫರ್: ದೆಹಲಿ ಚೈತನ್ಯಾನಂದ ಸ್ವಾಮೀಜಿಯ ಕಾಮ ಪುರಣ ಬಟಾಬಯಲು

ಚೈತನ್ಯಾನಂದ ಸರಸ್ವತಿ ಮೇಲಿರುವ ಆರೋಪಗಳೇನು?

ಶಾರದಾ ಇನ್ಸ್​ಟಿಟ್ಯೂಟ್​ನ ಮುಖ್ಯಸ್ಥನಾಗಿ ಚೈತನ್ಯಾನಂದ ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಇದೆ. ಇಲ್ಲಿಯವರೆಗೆ 17 ಹೆಣ್ಮಕ್ಕಳು ಈತನ ವಿರುದ್ಧ ದೂರು ನೀಡಿದ್ದಾರೆ.

ಚೈತನ್ಯಾನಂದ ಸರಸ್ವತಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಆದ್ಯಾತ್ಮ, ಮ್ಯಾನೇಜ್ಮೆಂಟ್ ಇತ್ಯಾದಿ ವಿಚಾರಗಳನ್ನು ಅವರು ತಮ್ಮ ಪುಸ್ತಕದಲ್ಲಿ ಮಂಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ