ಚಂದ್ರಶೇಖರ್ ಆಜಾದ್ ಹತ್ಯೆಗೆ ಸಂಚು ನಡೆಸಿದ್ದು ನೆಹರು: ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲಾವರ್ ಆರೋಪ
Rajasthan: ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಮಾಡುತ್ತಿರುವಾಗ ಅವರಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ ಅವರು ಪಂಡಿತ್ ಜವಾಹರ್ ಲಾಲ್ ನೆಹರು ಬಳಿ ಹೋದರು. ಆಜಾದ್ಗೆ ₹1,200 ಅಗತ್ಯವಿತ್ತು
ಜೈಪುರ್: ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಹತ್ಯೆಗೆ ಸಂಚು ಹೂಡಿದ್ದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಎಂದು ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲಾವರ್ ಆರೋಪಿಸಿದ್ದಾರೆ. ದಿಲಾವರ್ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್, ರಾಜಸ್ಥಾನದ ಬಿಜೆಪಿ ಶಾಸಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದಿದೆ. ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಮಾಡುತ್ತಿರುವಾಗ ಅವರಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ ಅವರು ಪಂಡಿತ್ ಜವಾಹರ್ ಲಾಲ್ ನೆಹರು ಬಳಿ ಹೋದರು. ಆಜಾದ್ಗೆ ₹1,200 ಅಗತ್ಯವಿತ್ತು. ಹಣದ ಅಗತ್ಯವಿದೆ ಎಂದು ನೆಹರು ಅವರಲ್ಲಿ ಹೇಳಿದಾಗ, ಹಣದ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ನೆಹರು ಅದಕ್ಕಾಗಿ ಪಾರ್ಕ್ನಲ್ಲಿ ಕಾಯುವಂತೆ ಹೇಳಿದ್ದರು. ಹೀಗೆ ಹೇಳಿದ ನೆಹರು ಬ್ರಿಟಿಷ್ ಪೊಲೀಸರಿಗೆ ಮಾಹಿತಿ ನೀಡಿ ಪಾರ್ಕ್ನಲ್ಲಿ ಆಜಾದ್ ಕುಳಿತಿರುವ ವಿಷಯ ತಿಳಿಸಿದ್ದರು ಎಂದು ರಾಜಸಮಂದ್ ಜಿಲ್ಲೆಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ದಿಲಾವರ್ ಹೇಳಿದ್ದಾರೆ.
ಪಾರ್ಕ್ಗೆ ಬಂದ ಬ್ರಿಟಿಷ್ ಪೊಲೀಸರು ಆಜಾದ್ ಮೇಲೆ ಗುಂಡು ಹಾರಿಸಿದ್ದಾರೆ. ಆಜಾದ್ ಕೂಡಾ ಪ್ರತಿಯಾಗಿ ಗುಂಡು ಹಾರಿಸಿ ಮೂವರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಬ್ರಿಟಿಷರು ಆಜಾದ್ನ್ನು ಸುತ್ತುವರಿದಾಗ ಆಜಾದ್ ತನ್ನ ಬಂದೂಕಿನಿಂದಲೇ ಗುಂಡು ಹಾರಿಸಿ ಪ್ರಾಣಬಿಟ್ಟಿದ್ದಾರೆ ಎಂದಿದ್ದಾರೆ ದಿಲಾವರ್. ಈ ಹೇಳಿಕೆ ಬಗ್ಗೆ ಸೋಮವಾರ ದಿ ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ದಿಲಾವರ್, ಆಜಾದ್ ಸಾವಿಗೆ ನೆಹರು ಅವರೇ ಕಾರಣ. ಅವರ ಸಂಚಿನಿಂದಲೇ ಚಂದ್ರಶೇಖರ್ ಆಜಾದ್ ಹತ್ಯೆಯಾಗಿದ್ದು ಎಂದಿದ್ದಾರೆ.
ಈ ಆರೋಪಕ್ಕೆ ಸಾಕ್ಷ್ಯ ಏನು ಎಂದು ಮಾಧ್ಯಮದವರು ಕೇಳಿದಾಗ ಪುಸ್ತಕ ಮತ್ತು ಸ್ಥಳೀಯ ಮಾಧ್ಯಮಗಳಿಂದ ಈ ಮಾಹಿತಿ ಸಿಕ್ಕಿದೆ ಎಂದು ದಿಲಾವರ್ ಹೇಳಿದ್ದಾರೆ.
He is BJP MLA @madandilawar saying something about Chandra Shekhar aazad and Nehru pic.twitter.com/ZsxEJdTiN8
— भाई साहब (@Bhai_saheb) February 28, 2021
ದಿಲಾವರ್ ಹೇಳಿಕೆ ಖಂಡಿಸಿದ ಕಾಂಗ್ರೆಸ್ ಆಜಾದ್ ಸಾವಿಗೆ ನೆಹರು ಅವರೇ ಕಾರಣ ಎಂದು ಹೇಳಿದ ದಿಲಾವರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ದಿಲಾವರ್ ಅವರಿಗೆ ಚರಿತ್ರೆ ಬಗ್ಗೆ ಜ್ಞಾನ ಕಮ್ಮಿ. ವಯಸ್ಸಾಗುತ್ತಿದ್ದಂತೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಸುದ್ದಿಯಲ್ಲಿರಬೇಕು ಎಂಂಬ ಹಪಾಹಪಿಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ( RPCC) ಕಾರ್ಯದರ್ಶಿ ಪುಷ್ಪೇಂದ್ರ ಭಾರದ್ವಾಜ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ರೈತರಲ್ಲ. ಡ್ರೈಫ್ರೂಟ್ಸ್, ಚಿಕನ್ ಬಿರಿಯಾನಿ ತಿಂದು ಪ್ರತಿಭಟನೆ ಸ್ಥಳಗಳಲ್ಲಿ ಐಷಾರಾಮಿ ಸೌಕರ್ಯಗಳನ್ನು ಪಡೆಯುತ್ತಿರುವ ಇವರು ಹಕ್ಕಿ ಜ್ವರ ಹರಡುವ ಸಂಚು ನಡೆಸುತ್ತಿದ್ದಾರೆ ಎಂದು ದಿಲಾವರ್ ಜನವರಿ ತಿಂಗಳಲ್ಲಿ ಆರೋಪ ಮಾಡಿದ್ದರು.
ಕೋವಿಡ್ ನಿಬಂಧನೆ ಉಲ್ಲಂಘಿಸಿದ್ದರು ಮದನ್ ಈ ಹಿಂದೆ ಆರ್ಎಸ್ಎಸ್ ಕಾರ್ಯಕರ್ತರೊಬ್ಬರ ಹತ್ಯೆ ಖಂಡಿಸಿ ಕೋವಿಡ್ ನಿರ್ಬಂಧದ ನಡುವೆಯೇ ಪ್ರತಿಭಟನೆ ನಡೆಸಿದ ಆರೋಪದಲ್ಲಿ ರಾಮ್ ಗಂಜ್ ಮಂಡಿ ಶಾಸಕ ಮದನ್ ದಿಲಾವರ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು. ಸಿಆರ್ಪಿಸಿ ಸೆಕ್ಷನ್ 144 ಉಲ್ಲಂಘಿಸಿದ್ದಕ್ಕಾಗಿ ದಿಲಾವರ್ ಮತ್ತು ಅವರ ಬೆಂಬಲಿಗರ ಮೇಲೆ ಕೋಟಾದಲ್ಲಿ ರಾಮ್ ಗಂಜ್ ಪೊಲೀಸರು ಫೆಬ್ರವರಿ 12ರಂದು ದೂರು ದಾಖಲಿಸಿದ್ದರು
ಇದನ್ನೂ ಓದಿ: ರಾಜಸ್ಥಾನದಲ್ಲಿ ವ್ಯಾಟ್ ರೇಟ್ ಕಡಿಮೆ ಆಗಿದೆ.. ಕರ್ನಾಟಕದಲ್ಲಿ ಏಕೆ ಮಾಡಿಲ್ಲ? ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನೆ
Published On - 1:18 pm, Mon, 1 March 21