Chennai Rain ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ 5 ಸಾವು; ನವೆಂಬರ್ 11ರವರೆಗೆ ರೆಡ್ ಅಲರ್ಟ್ ಘೋಷಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಗುರುವಾರ (ನವೆಂಬರ್ 11) ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ 11 ರ ವೇಳೆಗೆ ಈ ಒತ್ತಡ ತೀವ್ರಗೊಳ್ಳಲಿದ್ದು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ.
ಚೆನ್ನೈ: ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡಿನಲ್ಲಿ(Tamil Nadu )ಮುಂದಿನ ಮೂರು ದಿನಗಳವರೆಗೆ ಗುರುವಾರ (ನವೆಂಬರ್ 11) ವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಮಂಗಳವಾರ ಮಧ್ಯಾಹ್ನ ಬಿಡುಗಡೆಯಾದ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ಐಎಂಡಿ ರಾಜ್ಯದಲ್ಲಿ “ಹೆಚ್ಚಿನ ಸ್ಥಳಗಳಲ್ಲಿ ಲಘು ಮತ್ತು ಮಧ್ಯಮ, ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತದೆ” ಎಂದು ಹೇಳಿದೆ. ರಾಜ್ಯಾದ್ಯಂತ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ, 538 ಗುಡಿಸಲುಗಳು ಮತ್ತು ನಾಲ್ಕು ಮನೆಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ (KKSSR Ramachandran)ಮಂಗಳವಾರ ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಗುರುವಾರ (ನವೆಂಬರ್ 11) ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ 11 ರ ವೇಳೆಗೆ ಈ ಒತ್ತಡ ತೀವ್ರಗೊಳ್ಳಲಿದ್ದು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಮಳೆಯು ಪ್ರವಾಹಕ್ಕೆ ಕಾರಣವಾಗಬಹುದು .ರಸ್ತೆಗಳು ಜಲಾವೃತವಾಗಲಿದ್ದು ತಗ್ಗು ಪ್ರದೇಶಗಳಲ್ಲಿ ನೀರು ತುಂಬುವಿಕೆಗೆ ಕಾರಣವಾಗಬಹುದು. ಕಡಿಮೆ ಗೋಚರತೆ, ಸಂಚಾರ ವ್ಯತ್ಯಯ, ದುರ್ಬಲ ಕಟ್ಟಡಗಳಿಗೆ ಹಾನಿ, ಸ್ಥಳೀಯ ಭೂಕುಸಿತಗಳು/ಮಣ್ಣಿನ ಕುಸಿತಗಳು ಮತ್ತು ಬೆಳೆಗಳಿಗೆ ಹಾನಿಯಾಗಲಿದೆ ಎಂದು ಐಎಂಡಿ ಹೇಳಿದೆ. ಚೆನ್ನೈ ಕಾರ್ಪೋರೇಶನ್ಗೆ ಮದ್ರಾಸ್ ಹೈಕೋರ್ಟ್ ತರಾಟೆ ಏತನ್ಮಧ್ಯೆ, ನಗರದಲ್ಲಿನ ಜಲಾವೃತ ಪರಿಸ್ಥಿತಿಯ ಬಗ್ಗೆ ಮದ್ರಾಸ್ ಹೈಕೋರ್ಟ್ ಚೆನ್ನೈ ಕಾರ್ಪೋರೇಶನ್ ಅನ್ನು ತರಾಟೆಗೆ ತೆಗೆದುಕೊಂಡಿದೆ. “ಮಳೆಗಾಲದ ಸಮಯದಲ್ಲಿ ಪ್ರವಾಹವನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ” ಎಂದು ಹೈಕೋರ್ಟ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. 2015 ರ ಪ್ರವಾಹದ ನಂತರ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಿಗಮವನ್ನು ಪ್ರಶ್ನಿಸಿದ ಹೈಕೋರ್ಟ್, ಪರಿಸ್ಥಿತಿಯನ್ನು ಹತೋಟಿಗೆ ತರದಿದ್ದರೆ ಸ್ವಯಂಪ್ರೇರಿತ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದಾಗಿ ಎಚ್ಚರಿಕೆ ನೀಡಿದೆ.
ನ.11ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರು ಸೂಚನೆ ಪ್ರತಿಕೂಲ ಹವಾಮಾನದ ಕಾರಣ ನವೆಂಬರ್ 11 ರವರೆಗೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿರುವ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಆಗ್ನೇಯ ಮತ್ತು ನೈಋತ್ಯ ಬಂಗಾಳ ಕೊಲ್ಲಿ, ಕೊಮೊರಿನ್ ಪ್ರದೇಶ, ಮುನ್ನಾರ್ ಕೊಲ್ಲಿ ಮತ್ತು ತಮಿಳುನಾಡು ಕರಾವಳಿಯಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ವೇಗದಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಬೀಸುವ ವಾತಾವರಣವಿದೆ ಎಂದು ಐಎಂಡಿ ಬುಲೆಟಿನ್‌ನಲ್ಲಿ ಹೇಳಿದೆ. ಆಳ ಸಮುದ್ರದಲ್ಲಿರುವ ಮೀನುಗಾರರು ಮಂಗಳವಾರದೊಳಗೆ ಕರಾವಳಿಗೆ ಮರಳುವಂತೆ ಸೂಚಿಸಲಾಗಿದೆ.
ಹಿಂದಿನ ಎಐಎಡಿಎಂಕೆ ಸರ್ಕಾರವು ನಿಧಿಯನ್ನು ದುರುಪಯೋಗಪಡಿಸಿಕೊಂಡಿದೆ: ಸ್ಟಾಲಿನ್ ಆರೋಪ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಹಣದ ದುರುಪಯೋಗದ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗವನ್ನು ರಚಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ. ಅದೇ ವೇಳೆ ಕಾಮಗಾರಿಗೆ ಮಾಜಿ ಪೌರಾಡಳಿತ ಸಚಿವ ಎಸ್ ಪಿ ವೇಲುಮಣಿ ಕಮಿಷನ್ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.
“ನೀರು ನಿಲ್ಲುವುದು ಇನ್ನೂ ಒಂದು ಸಮಸ್ಯೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬಂದಿದ್ದ ಹಣವನ್ನೆಲ್ಲ ಹಿಂದಿನ ಸರ್ಕಾರ ಏನು ಮಾಡಿದೆಯೋ ಗೊತ್ತಿಲ್ಲ. ಯಾವುದೇ ಕಾಮಗಾರಿ ಅನುಷ್ಠಾನಗೊಂಡಿಲ್ಲ,’’ ಎಂದು ಮಳೆನೀರು ಚರಂಡಿಗಳತ್ತ ಬೊಟ್ಟು ಮಾಡಿದರು. ಸ್ಟಾಲಿನ್ ಅವರು ಸತತ ಮೂರನೇ ದಿನವೂ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
”ವೇಲುಮಣಿ ನೇತೃತ್ವದ ಇಲಾಖೆ ಕೇವಲ ಕಮಿಷನ್ ತೆಗೆದುಕೊಂಡಿದೆ. ಈ ವಿಷಯಗಳು ಮುಗಿದ ನಂತರ, ಈ ಬಗ್ಗೆ ತನಿಖೆ ನಡೆಸಲು ತನಿಖಾ ಆಯೋಗವನ್ನು ರಚಿಸಲಾಗುವುದು ಮತ್ತು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ”ಎಂದು ಸ್ಟಾಲಿನ್ ಹೇಳಿದ್ದಾರೆ.