ಉತ್ತರ ಪ್ರದೇಶದಲ್ಲಿ ಆಸ್ಪತ್ರೆಯ ಎದುರೇ ಬಾಲಕಿ ಸಾವು; ಘಟನೆಯ ತನಿಖೆ ಕೈಗೆತ್ತಿಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ
ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು, ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು 24 ಗಂಟೆಯೊಳಗೆ ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.
ಲಖನೌ: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಖಾಸಗಿ ಆ್ಪತ್ರೆಯೊಂದರಲ್ಲಿ ಸೂಕ್ತ ಚಿಕಿತ್ಸೆ ದೊರಕದ ಪರಿಣಾಮ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ನಿನ್ನೆ (ಮಾರ್ಚ್ 5) ನಡೆದಿದ್ದು, ಪ್ರಕರಣವನ್ನು ತನಿಖೆ ನಡೆಸಲು ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಇಂದು (ಮಾರ್ಚ್ 6) ತೀರ್ಮಾನಿಸಿದೆ. ಬಾಲಕಿಯ ಸಂಬಂಧಿಕರು ಹಣ ಪಾವತಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆ ಸಿಬ್ಬಂದಿ ಶಸ್ತ್ರಚಿಕಿತ್ಸೆ ಸರಿಯಾಗಿ ನಡೆಸಿಲ್ಲ. ಶಸ್ತ್ರಚಿಕಿತ್ಸೆ ನಡೆಸಿದ ಗಾಯಗಳನ್ನು ಹಾಗೆ ಬಿಟ್ಟಿದ್ದರು ಮತ್ತು ಅದೇ ಕಾರಣಕ್ಕೆ ಆಕೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಘಟನೆಯ ಬಗ್ಗೆ ತನಿಖೆ ನಡೆಸಲು ಮಕ್ಕಳ ಹಕ್ಕು ಆಯೋಗ ಮುಂದಾಗಿದೆ. ಉತ್ತರ ಪ್ರದೇಶ ಸರ್ಕಾರ ಕೂಡ ಈ ಬಗ್ಗೆ ತನಿಖೆ ಆಗಬೇಕು ಎಂದು ಹೇಳಿದೆ.
ಮೂಲಗಳ ಮಾಹಿತಿಯಂತೆ, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗವು, ಘಟನೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು 24 ಗಂಟೆಯೊಳಗೆ ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ. ಬಾಲಕಿ ಮೃತಪಟ್ಟ ಘಟನೆಯಲ್ಲಿ ಆಸ್ಪತ್ರೆಯ ಅಥವಾ ವೈದ್ಯರ ನಿರ್ಲ್ಯಕ್ಷ ಕಂಡುಬಂದರೆ ಯುನೈಟೆಡ್ ಮೆಡಿಸಿಟಿ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ತಿಳಿಸಲಾಗಿದೆ.
ಬಾಲಕಿಯ ಚಿಕಿತ್ಸೆಗೆ ಆಸ್ಪತ್ರೆಯವರು 5 ಲಕ್ಷ ರುಪಾಯಿ ಕೇಳಿದ್ದಾರೆ. ಮನೆಯವರು ಅಷ್ಟು ಹಣ ನೀಡಲಾಗದಿದ್ದಾಗ, ಹುಡುಗಿಯ ಶಸ್ತ್ರಚಿಕಿತ್ಸೆ ಗಾಯಗಳನ್ನು ಸರಿಯಾಗಿ ಗುಣಪಡಿಸದೆ ಡಿಸ್ಚಾರ್ಜ್ ಮಾಡಿ ಕಳಿಸಿಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂಬುದು ಮನೆಯವರ ಆರೋಪವಾಗಿದೆ.
ಈಗ ನಡೆದಿರುವ ಪ್ರಾಥಮಿಕ ವರದಿಯ ಪ್ರಕಾರ, ಬಾಲಕಿ ಫೆಬ್ರವರಿ 16ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿ ಆಪರೇಷನ್ಗೆ ಒಳಗಾಗಿದ್ದಳು. ಬಳಿಕ ಅವಳನ್ನು SRM ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಲಾಗಿತ್ತು. ಆದರೆ, ಹೆತ್ತವರು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಸಮರ್ ಬಹದೂರ್ ಮಾಹಿತಿ ನೀಡಿದ್ದಾರೆ.
ಆಕೆಗೆ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ, ಮತ್ತೆ ಇದೇ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಅವಳು ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ, ವರದಿ ಬರಬೇಕಿದೆ ಎಂದು ಸಮರ್ ಹೇಳಿದ್ದರು.
ಮೃತ ಬಾಲಕಿ ಮತ್ತು ಹೆತ್ತವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಕಲಕುವ ವಿಡಿಯೊಗೆ ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಬಾಲಕಿಯ ಮತ್ತು ಕುಟುಂಬದ ನೋವನ್ನು ತಂದೆ ವಿವರಿಸುತ್ತಿರುವುದು ಕಂಡುಬಂದಿದೆ.
ಎಲ್ಲಾ ಹಣ ಪಡೆದ ಬಳಿಕ ಆಸ್ಪತ್ರೆಯಿಂದ ಬಾಲಕಿಯನ್ನು ಡಿಸ್ಚಾರ್ಜ್ ಮಾಡಿದ್ದಾರೆ. ನಮ್ಮಕೈಯಲ್ಲಿ ಏನೂ ಇಲ್ಲ ಎಂದು ಬಿಡುಗಡೆಗೊಳಿಸಿದ್ದಾರೆ. ಅವರು 5 ಲಕ್ಷ ಕೇಳಿದ್ದಾರೆ. ನಾವು ಆಸ್ಪತ್ರೆಯಲ್ಲಿ ಕೇಳಿದ್ದೆಲ್ಲಾ ಕೊಟ್ಟಿದ್ದೇವೆ. ಮೂರು ಬಾರಿ ರಕ್ತ ಕೇಳಿದ್ದರು. ಕೊಟ್ಟಿದ್ದೇವೆ ಎಂದು ವಿಡಿಯೊದಲ್ಲಿ ತಂದೆ ಹೇಳಿದ್ದಾರೆ.
ಎರಡು ಬಾರಿ ಹೊಟ್ಟೆಯ ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ, ಅದನ್ನು ಸರಿಯಾಗಿ ಹೊಲಿಯದೆ ಮತ್ತು ಗುಣಪಡಿಸದೆ ಬಾಲಕಿಯನ್ನು ಬಿಡುಗಡೆ ಮಾಡಿದ್ದಾರೆ ಎಂಬುದು ಹೆತ್ತವರ ಆರೋಪವಾಗಿದೆ. ಆದರೆ, ಹೆತ್ತವರ ಹೇಳಿಕೆಯನ್ನು ಆಸ್ಪತ್ರೆ ಅಲ್ಲಗಳೆದಿದೆ. ಬಾಲಕಿಯ ಸಾವಿಗೆ ಮೂರು ದಿನದ ಮುಂಚಿನಿಂದಲೂ ಆಕೆ ಆ ಆಸ್ಪತ್ರೆಯಲ್ಲಿ ಇರಲಿಲ್ಲ. ಅವಳ ಹೆತ್ತವರಿಗೆ 1.2 ಲಕ್ಷದ ಬದಲಾಗಿ ಕೇವಲ 6,000 ರೂಪಾಯಿ ಚಾರ್ಜ್ ಮಾಡಲಾಗಿದೆ ಎಂದೂ ಆಸ್ಪತ್ರೆಯ ಮೂಲಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮನನೊಂದ ಮಹಿಳೆ ಸಾಬರಮತಿ ನದಿಗೆ ಹಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಅಪರೂಪದ ಪ್ಲಾಸ್ಮಾ ಫೆರೆಸಿಸ್ ಚಿಕಿತ್ಸೆ ನೀಡಿ ಬಾಣಂತಿಗೆ ಜೀವದಾನ ಮಾಡಿದ ದಾವಣಗೆರೆ ವೈದ್ಯರು
Published On - 9:24 pm, Sat, 6 March 21