ನವದೆಹಲಿ: ಗಡಿಯಲ್ಲಿ ಸದಾ ಒಂದಿಲ್ಲೊಂದು ತಕರಾರು ತೆಗೆಯುತ್ತಾ ಭಾರತದ ವಿರುದ್ಧ ಕಾಲ್ಕೆರೆದು ಜಗಳ ಮಾಡುತ್ತಿರುವ ಚೀನಾ ಈಗ ಸದ್ದಿಲ್ಲದೆ ನಮ್ಮ ಗಡಿ ಒಳಗೆ ನುಗ್ಗಿ ಒಂದು ಹಳ್ಳಿಯನ್ನೇ ನಿರ್ಮಾಣ ಮಾಡಿದೆ. ಈ ಹಳ್ಳಿಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 101 ಮನೆಗಳಿವೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಅರುಣಾಚಲ ಪ್ರದೇಶದ ತ್ಸಾರಿ ಚು ನದಿ ಸಮೀಪ ಇರುವ ವಿವಾದಿತ ಪ್ರದೇಶದಲ್ಲೇ ಈ ಗ್ರಾಮ ನಿರ್ಮಾಣ ಮಾಡಲಾಗಿದೆ. ಚೀನಾದವರು ನಮ್ಮ ಗಡಿ ಒಳಗೆ ಸುಮಾರು 4.5 ಕಿಮೀ ಒಳ ಬಂದಿದ್ದಾರೆ. ಸುತ್ತಮುತ್ತಲೂ ಕಾಡು ಬೆಳೆದಿದ್ದು, ಮಧ್ಯದಲ್ಲಿ ಈ ಮನೆ ನಿರ್ಮಾಣಗೊಂಡಿದೆ.
ಸ್ಯಾಟಲೈಟ್ ಚಿತ್ರದ ಮೂಲಕ ಈ ವಿಚಾರ ಬೆಳಕಿಗೆ ಬಂದಿದೆ. 2019 ಆಗಸ್ಟ್ ತಿಂಗಳಲ್ಲಿ ಆ ಭಾಗದಲ್ಲಿ ಎಲ್ಲವೂ ಖಾಲಿ ಖಾಲಿ ಇತ್ತು. ಆದರೆ, ನವೆಂಬರ್ 2020ರಂದು ನೋಡಿದಾಗ ಈ ಭಾಗದಲ್ಲಿ ಶೆಡ್ಗಳು ನಿರ್ಮಾಣಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಇಲ್ಲಿ, ಸುಮಾರು 101 ಮನೆಗಳು ತಲೆ ಎತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, ಚೀನಾ ಈ ರೀತಿ ಮಾಡುತ್ತಿರುವುದು ಇದೇ ಮೊದಲನೇಲ್ಲ. ಈ ಮೊದಲು ಕೂಡ ಗಡಿ ಭಾಗದಲ್ಲಿ ಚೀನಾ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಿದೆ. ನಾವು ಕೂಡ ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದೆ.
ಭಾರತಕ್ಕೆ ಕಂಟಕ?
ಗಡಿ ಭಾಗದಲ್ಲಿ ಈ ರೀತಿ ಹಳ್ಳಿ ನಿರ್ಮಾಣ ಮಾಡಿರುವುದು ಭಾರತಕ್ಕೆ ಕಂಟಕವಾಗುವ ಸಾಧ್ಯತೆ ಇದೆ. ಒಂದೊಮ್ಮೆ, ಭಾರತ-ಚೀನಾ ನಡುವೆ ಯುದ್ಧ ಉಂಟಾದರೆ ಈ ಮನೆಗಳನ್ನು ಚೀನಾ ಶಸ್ತ್ರಾಗಾರವನ್ನಾಗಿ ಬಳಕೆ ಮಾಡಿಕೊಳ್ಳಬಹುದು.
ಗಡಿ ದಾಟಿ.. ದೇಶದ ಭೂ ಭಾಗ ಪ್ರವೇಶಿಸಿದ ಚೀನಾ ಸೈನಿಕ ಭಾರತೀಯ ಸೇನೆ ವಶಕ್ಕೆ
Published On - 3:52 pm, Mon, 18 January 21