ಕೊವಿಶೀಲ್ಡ್ ಲಸಿಕೆ ತೆಗೆದುಕೊಂಡಿದ್ದ ವಾರ್ಡ್ಬಾಯ್ ಸಾವು; ವ್ಯಾಕ್ಸಿನ್ ಕಾರಣವಲ್ಲ ಎಂದ ಸ್ಥಳೀಯ ಆಡಳಿತ
ಲಸಿಕೆಗಳು ಸುರಕ್ಷಿತವಾಗಿವೆ. ಮಹಿಪಾಲ್ ಪ್ರಕರಣ ಭಿನ್ನವಾಗಿದೆ. ಈ ಸಾವಿನ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ಮಾಡಲು ವೈದ್ಯರ ತಂಡ ರಚಿಸಲಾಗುವುದು ಎಂದು ಮೊರದಾಬಾದ್ ಜಿಲ್ಲಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಮೊರದಾಬಾದ್: ನಿನ್ನೆ ಕೊವಿಡ್-19 ಲಸಿಕೆಯನ್ನು ಪಡೆದಿದ್ದ 46 ವರ್ಷದ ಆರೋಗ್ಯ ಕಾರ್ಯಕರ್ತನೊಬ್ಬ ಇಂದು ಮೃತಪಟ್ಟಿದ್ದಾಗಿ ಪಿಟಿಐ ವರದಿ ಮಾಡಿದೆ. ಆದರೆ ಈ ಸಾವಿನ ವಿಚಾರದಲ್ಲಿ ಇನ್ನೂ ಗೊಂದಲ ಇದ್ದು, ಲಸಿಕೆ ಪಡೆದಿದ್ದರಿಂದಲೇ ಹೀಗಾಗಿದೆಯಾ ಎಂಬುದು ಸ್ಪಷ್ಟವಾಗಿಲ್ಲ.
ಉತ್ತರಪ್ರದೇಶದ ಮೊರದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ಬಾಯ್ ಆಗಿದ್ದ ಮಹಿಪಾಲ್ ಶನಿವಾರ ಕೊವಿಶೀಲ್ಡ್ ಲಸಿಕೆ ಪಡೆದಿದ್ದರು. ಲಸಿಕೆ ತೆಗೆದುಕೊಂಡ ಬಳಿಕ ಅಸ್ವಸ್ಥನಾಗಿದ್ದ. ನಂತರ ಆತ ಸಾವನ್ನಪ್ಪಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ ಇದನ್ನು ಸ್ಥಳೀಯ ಆಡಳಿತ ನಿರಾಕರಿಸಿದ್ದು, ಮಹಿಪಾಲ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ.
ಇದರಿಂದಲೇ ಮರಣ ಹೊಂದಿದ್ದಾನೆ ಎಂದು ಹೇಳಿದೆ. ಆದರೆ ಈ ವಾದವನ್ನು ಕುಟುಂಬದವರು ಒಪ್ಪುತ್ತಿಲ್ಲ. ಮಹಿಪಾಲ್ಗೆ ಯಾವುದೇ ಹೃದಯ ಸಂಬಂಧಿ ರೋಗ ಇರಲಿಲ್ಲ. ಜ್ವರ ಹಾಗೂ ಕೆಮ್ಮು ಬಿಟ್ಟರೆ ಇನ್ಯಾವುದೇ ರೋಗವೂ ಇರಲಿಲ್ಲ ಎಂದು ಹೇಳುತ್ತಿದ್ದಾರೆ.
ಲಸಿಕೆ ತೆಗೆದುಕೊಂಡ ಹಲವರು ಜ್ವರದಿಂದ ಬಳಲುತ್ತಿರುವುದು ಸತ್ಯ. ಆದರೆ ರಾಜ್ಯದಲ್ಲಿ ಎಲ್ಲಿಯೂ, ಯಾರಿಗೂ ಅಡ್ಡಪರಿಣಾಮ ಉಂಟಾಗಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಲಸಿಕೆಗಳು ಸುರಕ್ಷಿತವಾಗಿವೆ. ಮಹಿಪಾಲ್ ಪ್ರಕರಣ ಭಿನ್ನವಾಗಿದೆ. ಈ ಸಾವಿನ ಬಗ್ಗೆ ಉನ್ನತ ಮಟ್ಟದ ಪರಿಶೀಲನೆ ಮಾಡಲು ವೈದ್ಯರ ತಂಡ ರಚಿಸಲಾಗುವುದು ಎಂದು ಮೊರದಾಬಾದ್ ಜಿಲ್ಲಾಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ದೆಹಲಿ: ಕೊರೊನಾ ಲಸಿಕೆ ಪಡೆದ 51 ಜನರಿಗೆ ಅಲರ್ಜಿ, ಓರ್ವನ ಸ್ಥಿತಿ ಗಂಭೀರ