
ಕೊಲ್ಕತ್ತಾ, ಜೂನ್ 11: ತೃಣಮೂಲ ಕಾಂಗ್ರೆಸ್ (TMC) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಇಂದು ಮಮತಾ ಬ್ಯಾನರ್ಜಿ (Mamata Banerjee) ಮತ್ತು ಅವರ ಸೋದರಸಂಬಂಧಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ನಕಲಿ ಸಹಿ ಪ್ರಕರಣವೊಂದರಲ್ಲಿ ಟಿಎಂಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಭಿಷೇಕ್ ಬ್ಯಾನರ್ಜಿ ಅವರು ಕೊನೆಯ ಕ್ಷಣದಲ್ಲಿ ತಮ್ಮನ್ನು ಕಾನೂನು ಸಲಹೆಗಾರ ಸ್ಥಾನದಿಂದ ಮುಕ್ತಗೊಳಿಸಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದು, ಈ ಕ್ರಮವು ತಮಗೆ ಉಂಟಾದ ತೀವ್ರ ಅವಮಾನ ಎಂದು ಟೀಕಿಸಿದ್ದಾರೆ.
ಮಮತಾ ಬ್ಯಾನರ್ಜಿಗೆ ನೇರ ಎಚ್ಚರಿಕೆ ನೀಡಿರುವ ಅವರು, “ಪಕ್ಷ ಉಳಿಯಬೇಕಾದರೆ ನೀವು ಈಗ ನಿರ್ಧಾರ ಮಾಡಬೇಕಿದೆ. ಒಂದೋ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರನ್ನು ಉಳಿಸಿಕೊಳ್ಳಿ, ಇಲ್ಲವೇ ನಿಮ್ಮ ಅಹಂಕಾರಿ ಸೋದರಸಂಬಂಧಿ ಅಭಿಷೇಕ್ ಬ್ಯಾನರ್ಜಿಯನ್ನು ಬೆಂಬಲಿಸಿ. ಇಬ್ಬರಲ್ಲಿ ಒಬ್ಬರನ್ನು ನೀವು ಆಯ್ಕೆ ಮಾಡಿಕೊಳ್ಳಲೇಬೇಕು” ಎಂದು ಸವಾಲು ಹಾಕಿದ್ದಾರೆ.
ನಕಲಿ ಸಹಿ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುವ ವಕೀಲರ ಹುದ್ದೆಯಿಂದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಬದಲಾಯಿಸಿದ ನಂತರ ಈ ಅಸಮಾಧಾನ ಸ್ಫೋಟಗೊಂಡಿದೆ. ಈ ಪ್ರಕರಣದಲ್ಲಿ ಹೈಕೋರ್ಟ್ ಅಭಿಷೇಕ್ ಬ್ಯಾನರ್ಜಿ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ್ದು, ಅಂದೇ ಸಂಜೆ 6 ಗಂಟೆಯೊಳಗೆ ಪಶ್ಚಿಮ ಬಂಗಾಳ ಸಿಐಡಿ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ. ಅಭಿಷೇಕ್ ಸದ್ಯ ದೆಹಲಿಯಲ್ಲಿದ್ದಾರೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ
“ಅಭಿಷೇಕ್ ಬ್ಯಾನರ್ಜಿಯ ವರ್ತನೆ ಅತ್ಯಂತ ಅಹಂಕಾರದಿಂದ ಕೂಡಿದೆ. ಅವರು ಪಕ್ಷದ ಹಿರಿಯ ನಾಯಕರನ್ನು ಮತ್ತು ದಶಕಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುತ್ತಿದ್ದಾರೆ. ಅವರ ಈ ಸರ್ವಾಧಿಕಾರಿ ಧೋರಣೆಯಿಂದಾಗಿಯೇ ಇಂದು ಶಾಸಕರು ಮತ್ತು ಸಂಸದರು ಪಕ್ಷ ತೊರೆಯುತ್ತಿದ್ದಾರೆ,” ಎಂದು ಕಲ್ಯಾಣ್ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
#WATCH | Kolkata, West Bengal: TMC MP and senior advocate Kalyan Banerjee says, “…I will not appear for Abhishek Banerjee in any case because I do not like his arrogant attitude. I have spent 45 years in this profession; all these people have worked with me as juniors. How can… pic.twitter.com/U7yBIXDdqP
— ANI (@ANI) June 11, 2026
ತಾವು ಆಕ್ರೋಶ ಹೊರಹಾಕಲು ಕಾರಣವನ್ನು ವಿವರಿಸಿದ ಕಲ್ಯಾಣ್ ಬ್ಯಾನರ್ಜಿ, “ನಾನು ಇಡೀ ರಾತ್ರಿ ಈ ಪ್ರಕರಣದ ಸಿದ್ಧತೆ ನಡೆಸಿ, ತುರ್ತು ವಿಚಾರಣೆಗಾಗಿ ಜಡ್ಜ್ ಮುಂದೆ ಮಂಡಿಸಿದ್ದೆ. ಆದರೆ, ಇಂದು ಬೇರೆಯದೇ ಅರ್ಜಿ ಸಲ್ಲಿಕೆಯಾಗಿದ್ದು, ಮತ್ತೊಬ್ಬ ವಕೀಲರು ಈ ಪ್ರಕರಣವನ್ನು ನಿಭಾಯಿಸಲಿದ್ದಾರೆ ಎಂದು ನನಗೆ ತಿಳಿಸಲಾಯಿತು. ಇತರರನ್ನು ಗೌರವಿಸದೇ ಇರುವ ಅವರ ಹಳೆಯ ಹವ್ಯಾಸ ಇನ್ನೂ ಬದಲಾಗಿಲ್ಲ. ಅಭಿಷೇಕ್ ಬ್ಯಾನರ್ಜಿ ಎಲ್ಲರೂ ತನಗಿಂತ ಕೆಳಗಿನವರು ಎಂದು ಭಾವಿಸುತ್ತಾನೆ. ನಾನು ಈ ವಕೀಲಿ ವೃತ್ತಿಯಲ್ಲಿ 45 ವರ್ಷಗಳಿಂದ ಇದ್ದೇನೆ,” ಎಂದು ಕಲ್ಯಾಣ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್
ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೀನಾಯ ಸೋಲು ಕಂಡ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಈಗಾಗಲೇ 58 ಕ್ಕೂ ಹೆಚ್ಚು ಟಿಎಂಸಿ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದು, ತಾವೇ ನಿಜವಾದ ಟಿಎಂಸಿ ನಾಯಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ನಾಯಕರಾದ ಸುಶ್ಮಿತಾ ದೇವ್ ಮತ್ತು ಸುಖೇಂದು ಶೇಖರ್ ರಾಯ್ ಅವರಂತಹ ಪ್ರಮುಖ ರಾಜ್ಯಸಭಾ ಸಂಸದರು ತಮ್ಮ ಸ್ಥಾನಗಳಿಗೆ ಹಾಗೂ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ. ಲೋಕಸಭೆಯಲ್ಲೂ 20ಕ್ಕೂ ಹೆಚ್ಚು ಟಿಎಂಸಿ ಸಂಸದರು ತಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿ, ಮಮತಾ ಬ್ಯಾನರ್ಜಿ ನಾಯಕತ್ವದಿಂದ ದೂರ ಸರಿದಿದ್ದಾರೆ.
Kolkata, West Bengal: TMC MP Kalyan Banerjee says, “I am with the Mamata Banerjee. But Mamata Di has to decide whether Mamata Di will keep Abhishek or keep myself…Mamata Di has to decide first. Mamata Di has to first decide that she cannot move the party without Abhishek… pic.twitter.com/HIq0zDoy06
— IANS (@ians_india) June 11, 2026
ಕಲ್ಯಾಣ್ ಬ್ಯಾನರ್ಜಿ ಅವರ ಈ ಹೇಳಿಕೆಯು ಟಿಎಂಸಿ ಪಕ್ಷದೊಳಗೆ ದೀರ್ಘಕಾಲದಿಂದ ನಡೆಯುತ್ತಿದ್ದ ಹಳೆಯ ತಲೆಮಾರು ವರ್ಸಸ್ ಹೊಸ ತಲೆಮಾರು ನಡುವಿನ ಶೀತಲ ಸಮರವನ್ನು ಬೀದಿಗೆ ತಂದಿದೆ. ಮಮತಾ ಬ್ಯಾನರ್ಜಿ ಅವರೊಂದಿಗೆ ಮೊದಲಿನಿಂದಲೂ ಇದ್ದ ಹಿರಿಯ ನಾಯಕರು ಅಭಿಷೇಕ್ ಬ್ಯಾನರ್ಜಿ ಅವರ ಹಠಾತ್ ಬೆಳವಣಿಗೆ ಮತ್ತು ಪಕ್ಷದ ಮೇಲಿನ ಹಿಡಿತವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ.
ಒಂದೆಡೆ ಭ್ರಷ್ಟಾಚಾರ ಮತ್ತು ನಕಲಿ ಸಹಿ ಪ್ರಕರಣದ ತನಿಖೆಯನ್ನು ಪಕ್ಷ ಎದುರಿಸುತ್ತಿದ್ದರೆ, ಮತ್ತೊಂದೆಡೆ ಹಿರಿಯ ನಾಯಕರೇ ಈ ರೀತಿಯ ಎಚ್ಚರಿಕೆ ನೀಡಿರುವುದು ಮಮತಾ ಬ್ಯಾನರ್ಜಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Thu, 11 June 26