ಭಾರತದ ವೈರಿ ಪಾಕ್​ನಲ್ಲಿ ಆಂತರಿಕ ಜಗಳ: ಖಾಕಿ ಸೇನೆ ನಡುವೆಯೇ ಅಂತರ್ಯುದ್ಧ

|

Updated on: Oct 22, 2020 | 6:48 AM

ಭಾರತದ ವೈರಿ ಪಾಕಿಸ್ತಾನದಲ್ಲಿ ಆಂತರಿಕ ಜಗಳ ಶುರುವಾಗಿದೆ. ವಿರೋಧ ಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ಮಧ್ಯೆ ಸರ್ಕಾರದ ಬೆಂಬಲಕ್ಕೆ ನಿಂತ ಸೇನೆ ಪೊಲೀಸ್ ಇಲಾಖೆ ಐಜಿಪಿಯನ್ನೇ ಕಿಡ್ನ್ಯಾಪ್ ಮಾಡಿದೆ. ಪಾಕಿಸ್ತಾನಿ ಪೊಲೀಸರು ತಮ್ಮದೇ ರಾಷ್ಟ್ರದ ಸೇನೆ ವಿರುದ್ಧವೇ ಸಿಡಿದೆದ್ದಿದ್ದಾರೆ. ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರವಿರಲಿ, ಸೇನೆ ಸರ್ಕಾರವನ್ನೇ ನಿಯಂತ್ರಿಸುತ್ತದೆ. ಸೇನೆಯ ಮಾತು ಕೇಳದ ಪಾಕ್ ಪ್ರಧಾನಿ ವಿರುದ್ಧ ಕ್ಷಿಪ್ರಕ್ರಾಂತಿಗಳು ನಡೆಯುತ್ತಲೇ ಇರುತ್ತವೆ. ಇಂಥ ಪಾಕ್​ನಲ್ಲೀಗ ಆಂತರಿಕ ಹೋರಾಟಗಳು ಶುರುವಾಗಿವೆ. ಪೊಲೀಸರು ಸೇನೆ ಮಧ್ಯೆ […]

ಭಾರತದ ವೈರಿ ಪಾಕ್​ನಲ್ಲಿ ಆಂತರಿಕ ಜಗಳ: ಖಾಕಿ ಸೇನೆ ನಡುವೆಯೇ ಅಂತರ್ಯುದ್ಧ
ಸಾಂದರ್ಭಿಕ ಚಿತ್ರ
Follow us on

ಭಾರತದ ವೈರಿ ಪಾಕಿಸ್ತಾನದಲ್ಲಿ ಆಂತರಿಕ ಜಗಳ ಶುರುವಾಗಿದೆ. ವಿರೋಧ ಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿವೆ. ಈ ಮಧ್ಯೆ ಸರ್ಕಾರದ ಬೆಂಬಲಕ್ಕೆ ನಿಂತ ಸೇನೆ ಪೊಲೀಸ್ ಇಲಾಖೆ ಐಜಿಪಿಯನ್ನೇ ಕಿಡ್ನ್ಯಾಪ್ ಮಾಡಿದೆ. ಪಾಕಿಸ್ತಾನಿ ಪೊಲೀಸರು ತಮ್ಮದೇ ರಾಷ್ಟ್ರದ ಸೇನೆ ವಿರುದ್ಧವೇ ಸಿಡಿದೆದ್ದಿದ್ದಾರೆ.

ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರವಿರಲಿ, ಸೇನೆ ಸರ್ಕಾರವನ್ನೇ ನಿಯಂತ್ರಿಸುತ್ತದೆ. ಸೇನೆಯ ಮಾತು ಕೇಳದ ಪಾಕ್ ಪ್ರಧಾನಿ ವಿರುದ್ಧ ಕ್ಷಿಪ್ರಕ್ರಾಂತಿಗಳು ನಡೆಯುತ್ತಲೇ ಇರುತ್ತವೆ. ಇಂಥ ಪಾಕ್​ನಲ್ಲೀಗ ಆಂತರಿಕ ಹೋರಾಟಗಳು ಶುರುವಾಗಿವೆ. ಪೊಲೀಸರು ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ ಅನ್ನೋ ವದಂತಿ ಪಾಕ್​ನಲ್ಲಿ ಹಬ್ಬಿದೆ. ಮೊನ್ನೆಯಷ್ಟೇ ಪಾಕಿಸ್ತಾನದಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಸೇನೆ ಕೈಗೊಂಬೆಯಾಗಿರೋ ಇಮ್ರಾನ್ ಖಾನ್ ಸರ್ಕಾರ ರಾಜೀನಾಮೆ ನೀಡಬೇಕು ಅಂತಾ ಆಗ್ರಹಿಸಿ ಕರಾಚಿಯಲ್ಲಿ ಪ್ರತಿಭಟನೆ ನಡೆಸಿದ್ವು. ಈಗ ಪಾಕಿಸ್ತಾನದಲ್ಲಿ ಪಾಕ್ ಸೇನೆಯ ದೌರ್ಜನ್ಯದ ವಿರುದ್ಧ ಸಿಂಧ್ ಪ್ರಾಂತ್ಯದ ಪೊಲೀಸರು ತಿರುಗಿಬಿದ್ದಿದ್ದಾರೆ.

ಸೇನೆ ದೌರ್ಜನ್ಯಕ್ಕೆ ಪ್ರತಿಯಾಗಿ ರಜೆ ರಿವೇಂಜ್!
ಪೊಲೀಸ್ ಇಲಾಖೆ ವಿರುದ್ಧ ಸೇನೆ ದೌರ್ಜನ್ಯ ಖಂಡಿಸಿ ಸಿಂಧ್ ಪ್ರಾಂತ್ಯದ ಪೊಲೀಸರು ಸ್ವಪ್ರೇರಣೆಯಿಂದ ರಜೆ ಹಾಕಿ ತೆರಳಿದ್ದಾರೆ. ಇದು ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನೆ ಬಳಿಕ ಪಾಕ್​ನ ಸಿಂಧ್ ಪ್ರಾಂತ್ಯದ ಐಜಿಪಿ ಮುಷ್ತಾಕ್ ಮೆಹರ್​ರನ್ನ ಪಾಕ್ ಸೇನೆ ರೇಂಜರ್​ಗಳು ಕಿಡ್ನ್ಯಾಪ್ ಮಾಡಿದ್ದಾರೆ. ಮಾಜಿ ಪಿಎಂ ನವಾಜ್ ಷರೀಫ್ ಆಳಿಯ ಸಫ್ದರ್ ಅವಾನ್​ರನ್ನ ಬಂಧಿಸಿ ಎಫ್ಐಆರ್ ದಾಖಲಿಸಬೇಕೆಂದು ಐಜಿಪಿ ಮುಷ್ತಾಕ್ ಮೆಹರ್ ಮೇಲೆ ಒತ್ತಡವಿತ್ತು.

ಹೀಗಾಗಿಯೇ ಹೋಟೇಲ್​ನಲ್ಲಿ ತಂಗಿದ್ದ ಸಪ್ಧರ್ ಅವಾನ್​ರನ್ನ ಮಧ್ಯರಾತ್ರಿ ಬಂಧಿಸಿದ್ದಾರೆ. 1 ಗಂಟೆ ಬಳಿಕ ಬಿಡುಗಡೆ ಮಾಡಿದ್ದಾರೆ. ಯಾವಾಗ ಮೆಹರ್ ಕಿಡ್ನ್ಯಾಪ್ ವಿಚಾರ ಗೊತ್ತಾಯ್ತೋ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್​ ಜರ್ದಾರಿ ಭುಟ್ಟೋ, ಐಜಿಪಿ ಮುಷ್ತಾಕ್ ಮೆಹರ್ ಮನೆಗೆ ಭೇಟಿ ನೀಡಿದ್ದಾರೆ. ಬಳಿಕ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಘಟನೆ ಬಗ್ಗೆ ಪಾರದರ್ಶಕ ತನಿಖೆ ನಡೆಸುವುದಾಗಿ ಬಜ್ವಾ ಹೇಳಿದ್ದಾರೆ.

ಒಟ್ನಲ್ಲಿ ಭಾರತದ ಬದ್ಧವೈರಿ ಪಾಕಿಸ್ತಾನದಲ್ಲಿ ಒಳಗೊಳಗೆ ಜ್ವಾಲೆ ಎದ್ದಿದೆ. ಜನ ಸರ್ಕಾರದ ವಿರುದ್ಧ ತಿರುಗಿ ಬಿದ್ದು ಹೋರಾಟ ನಡೆಸಲು ಸನ್ನದ್ಧವಾಗಿದ್ದಾರೆ. ಈ ಮೂಲಕ ಪಾಕ್ ಮಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿ ಹೋಗಿದೆ. ಇದು ಮುಂದೆ ಎಂತಹ ವಾತಾವರಣ ನಿರ್ಮಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.