ಸಿಜೆಐ ಎನ್​ವಿ ರಮಣ ಇಂದು ನಿವೃತ್ತಿ; ಹಲವು ಐತಿಹಾಸಿಕ ತೀರ್ಪು, ಇನ್ನೂ ಹಲವು ಮುಖ್ಯ ಪ್ರಕರಣಗಳು ಬಾಕಿ

| Updated By: ಸುಷ್ಮಾ ಚಕ್ರೆ

Updated on: Aug 26, 2022 | 9:03 AM

ತಮ್ಮ ಅಧಿಕಾರಾವಧಿಯಲ್ಲಿ ಸಿಜೆಐ ಎನ್​ವಿ ರಮಣ ಅವರು ನ್ಯಾಯಾಂಗದ ಮುಖ್ಯಸ್ಥರಾಗಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಸಿಜೆಐ ಎನ್​ವಿ ರಮಣ ಇಂದು ನಿವೃತ್ತಿ; ಹಲವು ಐತಿಹಾಸಿಕ ತೀರ್ಪು, ಇನ್ನೂ ಹಲವು ಮುಖ್ಯ ಪ್ರಕರಣಗಳು ಬಾಕಿ
ಎನ್​ವಿ ರಮಣ
Follow us on

ನವದೆಹಲಿ: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ (NV Ramana) ಇಂದು ನಿವೃತ್ತಿಯಾಗಲಿದ್ದಾರೆ. 2021ರ ಏಪ್ರಿಲ್​ನಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ (S.A. Bobde) ಅವರ ಉತ್ತರಾಧಿಕಾರಿಯಾಗಿ ನೇಮಕವಾದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ 1 ವರ್ಷ ಮತ್ತು 4 ತಿಂಗಳ ಅಧಿಕಾರಾವಧಿಯ ನಂತರ ಇಂದು ನಿವೃತ್ತರಾಗುತ್ತಿದ್ದಾರೆ. ಅವರ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಯು.ಯು ಲಲಿತ್ (U U Lalit) ನೂತನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಸಿಜೆಐ ಎನ್​ವಿ ರಮಣ ಅವರು ನ್ಯಾಯಾಂಗದ ಮುಖ್ಯಸ್ಥರಾಗಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಪೆಗಾಸಸ್ ಸ್ನೂಪಿಂಗ್ ತನಿಖೆ, ಸುಪ್ರೀಂ ಕೋರ್ಟ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ 9 ನ್ಯಾಯಮೂರ್ತಿಗಳ ನೇಮಕಾತಿ ಮತ್ತು ಹೈಕೋರ್ಟ್​​ಗಳಿಗೆ ಏಕಕಾಲದಲ್ಲಿ 126 ನ್ಯಾಯಮೂರ್ತಿಗಳ ನೇಮಕ, ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿಯೂ ಉನ್ನತ ನ್ಯಾಯಾಲಯಗಳಲ್ಲಿ ಕೋರ್ಟ್​ ಕೇಸುಗಳನ್ನು ಬಗೆಹರಿಸಿದ್ದು ಹೀಗೆ ಹಲವು ಬಹಳ ಮುಖ್ಯವಾದವುಗಳಾಗಿವೆ.

ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ಪೆಗಾಸಸ್ ಸ್ಪೈವೇರ್ ಪ್ರಕರಣ ಮತ್ತು ಲಖಿಂಪುರ ಖೇರಿ ಹಿಂಸಾಚಾರದ ಸ್ವತಂತ್ರ ತನಿಖೆಯನ್ನು ಖಾತ್ರಿಪಡಿಸುವಂತಹ ನ್ಯಾಯಾಂಗ ನಿರ್ಧಾರಗಳ ಮೂಲಕ ಕೊವಿಡ್ ಸಮಯದಲ್ಲಿ ಸುಪ್ರೀಂ ಕೋರ್ಟ್​ನ ಕಾರ್ಯನಿರ್ವಹಣೆಯನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: Breaking News: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಲಿತ್ ನೇಮಕಕ್ಕೆ ಸಿಜೆಐ ಎನ್​ವಿ ರಮಣ ಶಿಫಾರಸು

ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ತಮ್ಮ ಅಧಿಕಾರಾವಧಿಯಲ್ಲಿ ಕೆಲವು ನಿರ್ಣಾಯಕ ಪ್ರಕರಣಗಳನ್ನು ಕೈಗೆತ್ತಿಕೊಂಡರು. ಈಗಾಗಲೇ ವಿವಿಧ ಸಮಸ್ಯೆಗಳನ್ನು ಪರಿಹರಿಸಿದ್ದರೆ, ಇನ್ನು ಕೆಲವು ಪ್ರಮುಖ ಪ್ರಕರಣಗಳ ತೀರ್ಪು ಬಾಕಿ ಉಳಿದಿವೆ.

ಪೆಗಾಸಸ್:
ಸಿಜೆಐ ನೇತೃತ್ವದ ಪೀಠವು ಕಳೆದ ವರ್ಷ ಆಗಸ್ಟ್‌ನಲ್ಲಿ ಪೆಗಾಸಸ್ ಸ್ನೂಪಿಂಗ್ ವರದಿಗಳ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತು. ಅಕ್ಟೋಬರ್‌ನಲ್ಲಿ ತನಿಖೆ ನಡೆಸಲು ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಲಾಯಿತು. ನ್ಯಾಯಾಲಯ ನೇಮಿಸಿದ ಸಮಿತಿಯು ಜುಲೈ ಅಂತ್ಯದಲ್ಲಿ ಅಂತಿಮ ವರದಿಯನ್ನು ಸಲ್ಲಿಸಿತ್ತು. ಆಗಸ್ಟ್ 25ರಂದು ವಿಚಾರಣೆಯ ಸಂದರ್ಭದಲ್ಲಿ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು.

ಶಿವಸೇನೆ vs ಶಿವಸೇನೆ:
ಮಹಾರಾಷ್ಟ್ರದ ಶಿವಸೇನೆಯಲ್ಲಿನ ಆಂತರಿಕ ಕಲಹವು ಬಂಡಾಯಕ್ಕೆ ಕಾರಣವಾಯಿತು. ಇದರಿಂದಾಗಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದ ಪತನವಾಯಿತು. ಬಳಿಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಏಕನಾಥ್ ಶಿಂಧೆ ಸರ್ಕಾರ ರಚಿಸಿದರು. ಪಕ್ಷದೊಳಗಿನ ವೈಷಮ್ಯವು ಪಕ್ಷ ಮತ್ತು ಅದರ ಚಿಹ್ನೆಯ ಮೇಲೆ ಹಿಡಿತ ಸಾಧಿಸಲು ಎರಡೂ ಬಣಗಳೊಂದಿಗೆ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಿತು. ಕಳೆದ ವಿಚಾರಣೆಯಲ್ಲಿ, ಸಿಜೆಐ ನೇತೃತ್ವದ ಪೀಠವು ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಪ್ರಕರಣವು ಎತ್ತಿರುವ ಸಾಂವಿಧಾನಿಕ ಪ್ರಶ್ನೆಗಳನ್ನು ಉಲ್ಲೇಖಿಸಬೇಕೆ ಎಂದು ನಿರ್ಧರಿಸುತ್ತದೆ ಎಂದು ಹೇಳಿದೆ. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್​ನಲ್ಲಿ ಬಾಕಿ ಇದೆ.

ಇದನ್ನೂ ಓದಿ: ನ್ಯಾಯಾಲಯಗಳಷ್ಟೇ ಅಲ್ಲ ರಾಜ್ಯದ ಪ್ರತಿಯೊಂದು ಅಂಗವೂ ನ್ಯಾಯ ಸಲ್ಲಿಸಬೇಕು: ಎನ್‌ವಿ ರಮಣ

ಯುಎಪಿಎ ನಿಬಂಧನೆಗಳು:
2021ರ ನವೆಂಬರ್​ನಲ್ಲಿ ಸಿಜೆಐ ನೇತೃತ್ವದ ಪೀಠವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಕೆಲವು ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಕೆಲವು ಮಾಜಿ ನಾಗರಿಕ ಸೇವಕರು ಸಲ್ಲಿಸಿದ ಅರ್ಜಿಯಲ್ಲಿ ನೋಟಿಸ್ ಜಾರಿ ಮಾಡಿತು. ಈ ಪ್ರಕರಣವು ಇದೇ ರೀತಿಯ ಸಮಸ್ಯೆಯನ್ನು ಒಳಗೊಂಡಿರುವ ಮತ್ತೊಂದು ಪ್ರಕರಣದೊಂದಿಗೆ ಸಂಬಂಧ ಹೊಂದಿದೆ. ಇದಕ್ಕಾಗಿ 2019ರಲ್ಲಿ ನೋಟಿಸ್ ನೀಡಲಾಯಿತು. ಅದರ ನಂತರ, ಪ್ರಕರಣವನ್ನು ಪಟ್ಟಿ ಮಾಡಲಾಗಿಲ್ಲ.

ದೇಶದ್ರೋಹ ಕಾನೂನು:
ದೇಶದ್ರೋಹದ ಅಪರಾಧಕ್ಕಾಗಿ ಕಾನೂನನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್ ಅನ್ನು ಆಲಿಸಿದ ಸಿಜೆಐ ರಮಣ ನೇತೃತ್ವದ ಪೀಠವು 2022ರ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಗಮನಿಸಿದ್ದು, ಸೆಕ್ಷನ್ 124 ಎ ಐಪಿಸಿಯ ನಿಬಂಧನೆಯನ್ನು ಮರುಪರಿಶೀಲಿಸಲು ನಿರ್ಧರಿಸಿತ್ತು.

ಬಾಕಿ ಉಳಿದಿರುವ ಸಾಂವಿಧಾನಿಕ ಸಮಸ್ಯೆಗಳನ್ನು ಒಳಗೊಂಡ ಇತರ ಪ್ರಮುಖ ಪ್ರಕರಣಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಚುನಾವಣಾ ಬಾಂಡ್‌ಗಳ ಯೋಜನೆ ಮತ್ತು 370ನೇ ವಿಧಿಯ ನಿಬಂಧನೆಗಳ ರದ್ದತಿಗೆ ಸವಾಲುಗಳು ಕೂಡ ಸೇರಿವೆ.

ನಿವೃತ್ತರಾಗುವ ಒಂದು ದಿನದ ಮೊದಲು ಮಾತನಾಡಿದ್ದ ಸಿಜೆಐ ಎನ್​ವಿ ರಮಣ, ನಾನು ಎಲ್ಲ ರೀತಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಬಹುತೇಕ ಎಲ್ಲ ಹೆಸರನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದರು. ನಾನು ಮುಖ್ಯ ನ್ಯಾಯಮೂರ್ತಿಯಾಗಿ ನನ್ನ ಕರ್ತವ್ಯವನ್ನು ಸಾಧ್ಯವಿರುವ ರೀತಿಯಲ್ಲಿ ನಿರ್ವಹಿಸಿದ್ದೇನೆ. ಬಾರ್‌ನ ಪ್ರತಿಯೊಬ್ಬ ಸದಸ್ಯರು, ವಿಶೇಷವಾಗಿ ದೆಹಲಿಯಲ್ಲಿ ಒಗ್ಗಟ್ಟಿನಿಂದ ನಿಂತು ನನ್ನನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಇಂತಹ ಬೆಂಬಲವನ್ನು ಪಡೆಯಲು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 am, Fri, 26 August 22