ಮಾಧ್ಯಮಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ, ಕೋರ್ಟ್ನ ಸ್ಥಾನವನ್ನು ಆವರಿಸಿಕೊಂಡಿದೆ; ಸಿಜೆಐ ಎನ್‌ವಿ ರಮಣ ಟೀಕೆ
ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೂ ಸಮಸ್ಯೆಗಳ ಬಗ್ಗೆ ತೀರ್ಮಾನ ನೀಡಲು ಕಷ್ಟವಾಗುತ್ತದೆ. ಆದರೆ, ಹಲವು ಪ್ರಕರಣಗಳಲ್ಲಿ ಕೋರ್ಟ್ಗಿಂತಲೂ ಮೊದಲೇ ಮಾಧ್ಯಮಗಳಲ್ಲಿ ತೀರ್ಪು ನೀಡಲಾಗಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಟೀಕಿಸಿದ್ದಾರೆ.
ನವದೆಹಲಿ: ಮಾಧ್ಯಮಗಳೇ ನ್ಯಾಯಾಲಯದ ಸ್ಥಾನವನ್ನು ಪಡೆದುಕೊಳ್ಳತೊಡಗಿವೆ. ಕಾಂಗರೂ ಕೋರ್ಟ್ನಂತೆ (Kangaroo Court) (ಕಾಂಗರೂ ಕೋರ್ಟ್- ತಮಗಿಷ್ಟ ಬಂದಂತೆ ಪ್ರಚಾರ ಮಾಡುತ್ತಾ, ತಮ್ಮ ಅಜೆಂಡಾವನ್ನು ಜನರ ಮೇಲೆ ಹೇರುತ್ತಾ ಕಟ್ಟೆ ಪಂಚಾಯಿತಿ ನಡೆಸುವ) ವರ್ತಿಸುವ ಮಾಧ್ಯಮಗಳು ಭಾರತದ ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ. ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುವುದನ್ನು ನಾವು ನೋಡುತ್ತೇವೆ. ಕೆಲವೊಮ್ಮೆ ಅನುಭವಿ ನ್ಯಾಯಾಧೀಶರು ಸಹ ಸಮಸ್ಯೆಗಳ ಬಗ್ಗೆ ತೀರ್ಮಾನ ನೀಡಲು ಕಷ್ಟವಾಗುತ್ತದೆ. ಆದರೆ, ಮಾಧ್ಯಮಗಳಿಗೆ ಆ ಹಕ್ಕು ಇಲ್ಲದಿದ್ದರೂ ಹಲವು ಪ್ರಕರಣಗಳಲ್ಲಿ ಕೋರ್ಟ್ಗಿಂತಲೂ ಮೊದಲೇ ತೀರ್ಪು ನೀಡುವುದನ್ನು ನಾವು ನೋಡಬಹುದು ಎಂದು ಅವರು ಹೇಳಿದ್ದಾರೆ.
ನ್ಯಾಯಾಂಗವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ಬಗ್ಗೆ ತೀವ್ರ ಟೀಕೆಗಳನ್ನು ಮಾಡಿದ್ದಾರೆ. ರಾಂಚಿಯ ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಟಡಿ ಮತ್ತು ರಿಸರ್ಚ್ ಇನ್ ಲಾದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಜೆಐ ಎನ್‌ವಿ ರಮಣ, ಮುದ್ರಣ ಮಾಧ್ಯಮಕ್ಕೆ ಇನ್ನೂ ಸ್ವಲ್ಪವಾದರೂ ಹೊಣೆಗಾರಿಕೆ ಇದೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮವು ಯಾವುದೇ ಜವಾಬ್ದಾರಿಗಳಿಲ್ಲದೆ ಬೇಜವಾಬ್ದಾರಿತನದಿಂದ ಸುದ್ದಿ ಪ್ರಸಾರ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.
ಟಿವಿ ಚರ್ಚೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗರೂ ನ್ಯಾಯಾಲಯಗಳು (ಕಟ್ಟೆ ಪಂಚಾಯಿತಿ) ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಟೀಕಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೀಡಿದ ಹೇಳಿಕೆಗೆ ಕೋರ್ಟ್ ಛೀಮಾರಿ ಹಾಕಿತ್ತು. ದೇಶದಲ್ಲಿ ಈಗ ನಡೆಯುತ್ತಿರುವ ಘಟನೆ, ಕೋಮು ಉದ್ವೇಗಗಳಿಗೆ ನೂಪುರ್ ಶರ್ಮಾ ಅವರ ಹೇಳಿಕೆಯೇ ಹೊಣೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ಈ ಹೇಳಿಕೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Nupur Sharma: ಬಂಧನದಿಂದ ರಕ್ಷಣೆ ನೀಡುವಂತೆ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ
“ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಟಿತ ಪ್ರಚಾರಗಳು ನಡೆಯುತ್ತಿವೆ. ಅದಕ್ಕೆ ನ್ಯಾಯಮೂರ್ತಿಗಳು ತಕ್ಷಣವೇ ಪ್ರತಿಕ್ರಿಯಿಸುವುದಿಲ್ಲ. ದಯವಿಟ್ಟು ಅದನ್ನು ದೌರ್ಬಲ್ಯ ಅಥವಾ ಅಸಹಾಯಕತೆ ಎಂದು ತಪ್ಪಾಗಿ ಗ್ರಹಿಸಬೇಡಿ” ಎಂದು ರಾಂಚಿಯಲ್ಲಿ ನಡೆದ ಶೈಕ್ಷಣಿಕ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
These days, we are witnessing an increasing number of physical attacks on judges…Judges have to live in the same society as the people that they have convicted, without Any security or assurance of safety: CJI NV Ramana in Ranchi, Jharkhand pic.twitter.com/wW51CZKyp4
— ANI (@ANI) July 23, 2022
ಮಾಧ್ಯಮಗಳು ಹರಡುತ್ತಿರುವ ಪಕ್ಷಪಾತದ ಅಭಿಪ್ರಾಯಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿವೆ. ಇದು ನಮ್ಮ ಸಮಾಜದ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ. ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಮೀರುವ ಮತ್ತು ಉಲ್ಲಂಘಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಎರಡು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳುತ್ತಿದೆ ಎಂದು ನ್ಯಾಯಮೂರ್ತಿ ರಮಣ ಹೇಳಿದ್ದಾರೆ.
ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಜವಾಬ್ದಾರಿಯುತವಾಗಿ ವರ್ತಿಸುವಂತೆ ನಾನು ಒತ್ತಾಯಿಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮವು ಜನರಿಗೆ ಶಿಕ್ಷಣ ನೀಡಲು ಮತ್ತು ರಾಷ್ಟ್ರಕ್ಕೆ ಶಕ್ತಿ ತುಂಬಲು ತಮ್ಮ ಧ್ವನಿಯನ್ನು ಬಳಸಿಕೊಳ್ಳಬೇಕು. ಅದು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡಬಾರದು ಎಂದು ಅವರು ಹೇಳಿದ್ದಾರೆ.