Nupur Sharma: ಬಂಧನದಿಂದ ರಕ್ಷಣೆ ನೀಡುವಂತೆ ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ
Prophet Row: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರ ನ್ಯಾಯಪೀಠವು ನೂಪುರ್ ಶರ್ಮಾ ಅವರ ಹೊಸ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಿದೆ.
ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಪ್ರತಿಕ್ರಿಯೆ ನೀಡಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ತಮಗೆ ಬಂಧನದಿಂದ ರಕ್ಷಣೆ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಇಂದು (ಮಂಗಳವಾರ) ನಡೆಯಲಿದೆ. ಸುಪ್ರೀಂ ಕೋರ್ಟ್ನ ಟೀಕೆಯ ನಂತರ ಬೆದರಿಕೆಗಳು ಬರುತ್ತಿವೆ. ತನ್ನ ಸಂಭವನೀಯ ಬಂಧನವನ್ನು ತಡೆಯಲು ನೂಪುರ್ ಶರ್ಮಾ ಸುಪ್ರೀಂ ಕೋರ್ಟ್ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ.
2 ತಿಂಗಳ ಹಿಂದೆ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ನೂಪುರ್ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆ ಭಾರತದಲ್ಲಿ ಪ್ರತಿಭಟನೆಗೆ ಕಾರಣವಾಯಿತು. ನಂತರ ಬಿಜೆಪಿ ಅವರನ್ನು ಪಕ್ಷದಿಂದ ಅಮಾನತು ಮಾಡಿತು. ಇದುವರೆಗೆ ನೂಪುರ್ ಶರ್ಮಾರನ್ನು ಬೆಂಬಲಿಸಿದ ಆರೋಪದ ಮೇಲೆ ಇಬ್ಬರನ್ನು ಹತ್ಯೆ ಮಾಡಲಾಗಿದೆ. ನೂಪುರ್ ಶರ್ಮಾ ಅವರ ಹಿಂದಿನ ಮನವಿಯಲ್ಲಿ, ದೆಹಲಿಯಲ್ಲಿನ ಎಫ್‌ಐಆರ್‌ನೊಂದಿಗೆ ಎಲ್ಲಾ ಇತರ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದರು. ಆದರೆ ನ್ಯಾಯಾಲಯವು ಅವರ ವಿರುದ್ಧ ಕಟುವಾಗಿ ಟೀಕಿಸಿತ್ತು. ದೇಶದಲ್ಲಿ ನಡೆಯುತ್ತಿರುವ ಗಲಾಟೆ, ಹಿಂಸಾಚಾರಕ್ಕೆ ನೀವೇ ಹೊಣೆ ಎಂದು ಆರೋಪಿಸಿತ್ತು. ಇದಾದ ನಂತರ ನೂಪುರ್ ಶರ್ಮಾ ಅವರಿಗೆ ಜೀವ ಬೆದರಿಕೆ ಕರೆಗಳು ಕೂಡ ಬಂದಿದ್ದವು.
ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ; ನೂಪುರ್ ಶರ್ಮ ಇಡೀ ದೇಶದ ಕ್ಷಮೆ ಕೇಳಬೇಕು ಎಂದ ಸುಪ್ರೀಂ ಕೋರ್ಟ್
ಇದೀಗ ನೂಪುರ್ ಶರ್ಮಾ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ತನ್ನ ವಿರುದ್ಧ ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿದ ನಂತರ ತನಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆ ಬರುತ್ತಿದೆ ಎಂದು ಹೇಳಿರುವ ನೂಪುರ್ ಶರ್ಮಾ ತಮಗೆ ಬಂಧನದಿಂದ ರಕ್ಷಣೆ ನೀಡಬೇಕೆಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನೂಪುರ್ ಶರ್ಮಾ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂನಲ್ಲಿ ಕೇಸ್ಗಳು ದಾಖಲಾಗಿದ್ದವು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆಬಿ ಪಾರ್ದಿವಾಲಾ ಅವರ ನ್ಯಾಯಪೀಠವು ನೂಪುರ್ ಶರ್ಮಾ ಅವರ ಹೊಸ ಅರ್ಜಿಯನ್ನು ಇಂದು ವಿಚಾರಣೆ ನಡೆಸಲಿದೆ.
Published On - 9:31 am, Tue, 19 July 22