ಕೇರಳದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಘರ್ಷಣೆ; 70ಕ್ಕೂ ಹೆಚ್ಚು ಜನರಿಗೆ ಗಾಯ

ಪೊಲೀಸರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸೇರಿದಂತೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೋಯಿಕ್ಕೋಡ್ ಬೀಚ್‌ ಬಳಿ ಇರುವ ಸರ್ಕಾರಿ ಆಸ್ಪತ್ರೆಗೆ ಮತ್ತು ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಕೇರಳದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ಘರ್ಷಣೆ; 70ಕ್ಕೂ ಹೆಚ್ಚು ಜನರಿಗೆ ಗಾಯ
ಕೇರಳದ ಸಂಗೀತ ಕಚೇರಿ ವೇಳೆ ಗಲಾಟೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 22, 2022 | 12:09 PM

ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ (Kozhikode) ಬೀಚ್‌ನಲ್ಲಿ ಭಾನುವಾರ ರಾತ್ರಿ ಸಂಗೀತ ಕಚೇರಿಯ ವೇಳೆ ಘರ್ಷಣೆ ಸಂಭವಿಸಿ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಹಣವನ್ನು ಸಂಗ್ರಹಿಸಲು ಜೆಡಿಟಿ ಇಸ್ಲಾಂ ಕಾಲೇಜಿನ ನೋವು ಮತ್ತು ಉಪಶಮನ ಆರೈಕೆ ಘಟಕವು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಈ ಗಲಾಟೆ ನಡೆದಿದೆ.

ಪೊಲೀಸರು, ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸೇರಿದಂತೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕೋಯಿಕ್ಕೋಡ್ ಬೀಚ್‌ ಬಳಿ ಇರುವ ಸರ್ಕಾರಿ ಆಸ್ಪತ್ರೆಗೆ ಮತ್ತು ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭಾನುವಾರ ರಾತ್ರಿ 11 ಗಂಟೆಗೆ ಸುಮಾರು 200 ಯುವಕರು ಸ್ಥಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಆಗ ಕೆಲವು ಯುವಕರು ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bhadravati Violence: ಭದ್ರಾವತಿಯಲ್ಲಿ ಗಲಾಟೆ, ಬಜರಂಗದಳ ಕಾರ್ಯಕರ್ತನ ಮೇಲೆ ಚೂರಿ ಇರಿತಕ್ಕೆ ಯತ್ನ

ಭಾನುವಾರ ಕೋಯಿಕ್ಕೋಡ್ ಬೀಚ್‌ನಲ್ಲಿ ನಡೆದ ಸಂಗೀತ ಕಚೇರಿಯ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡಲಾಯಿತು. ಪೊಲೀಸರ ಪ್ರಕಾರ, ಈ ಹಿಂದೆ ಸಂಗೀತ ಕಚೇರಿ ನಡೆಸಲು ನಿರ್ಧರಿಸಿದ್ದ ಸ್ಥಳವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಲಾಯಿತು. ಪ್ರೇಕ್ಷಕರಿಗೆ ಕಡಿಮೆ ಸ್ಥಳಾವಕಾಶವಿದ್ದ ಆ ಹೊಸ ಸ್ಥಳಕ್ಕೆ ಪ್ರವೇಶಿಸಲು ಭಾರೀ ಸಂಖ್ಯೆ ಜನರು ಪ್ರಯತ್ನಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು.

ಪೊಲೀಸರು ಮತ್ತು ವಿದ್ಯಾರ್ಥಿ ಸ್ವಯಂಸೇವಕರು ಪ್ರವೇಶ ದ್ವಾರದಲ್ಲಿ ಜನರನ್ನು ತಡೆಯಬೇಕಾಯಿತು. ಇದು ತಳ್ಳಾಟ, ಗಲಾಟೆಗೂ ಕಾರಣವಾಯಿತು. ಸಾರ್ವಜನಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಮರಳನ್ನು ಎಸೆಯಲು ಪ್ರಾರಂಭಿಸಿದರು. ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂದಿದ್ದರಿಂದ ಗುಂಪು ಚದುರಿಹೋಯಿತು. ಆ ವೇಳೆ ಜನರು ಬ್ಯಾರಿಕೇಡ್ ಮುರಿದು ಆ ಸ್ಥಳಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು. ಇದರಿಂದಾಗಿ ಹಲವರು ಬಿದ್ದು ಗಾಯಗೊಂಡರು. ಈ ಗಲಾಟೆಯಲ್ಲಿ ಅನೇಕರು ಉಸಿರಾಟದ ತೊಂದರೆ ಅನುಭವಿಸಿ, ಕುಸಿದು ಬಿದ್ದರು.

ಇದನ್ನೂ ಓದಿ: Big News: ಅತ್ಯಾಚಾರದಿಂದ 7 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ

ನಗರ ಪೊಲೀಸ್ ಆಯುಕ್ತ ಎ. ಅಕ್ಬರ್, ಡಿಸಿಪಿ ಎ. ಶ್ರೀನಿವಾಸನ್, ನಗರ ನಿಯಂತ್ರಣ ಕೊಠಡಿ ಸಹಾಯಕ ಆಯುಕ್ತ ಎಂ.ಸಿ ಕುಂಜುಮೊಯಿನ್ ಕುಟ್ಟಿ, ವೈದ್ಯಕೀಯ ಕಾಲೇಜು ಸಹಾಯಕ ಆಯುಕ್ತ ಕೆ. ಸುದರ್ಶನ್, ನಗರ ವಿಶೇಷ ಶಾಖೆಯ ಸಹಾಯಕ ಆಯುಕ್ತ ಎ. ಉಮೇಶ್ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ