ರಾಮನವಮಿ ಮೆರವಣಿಗೆಯಲ್ಲಿ ಕೋಮುಗಲಭೆ; ಬಿಹಾರದ ಸಸಾರಾಮ್‌ನಲ್ಲಿ ಅಮಿತ್ ಶಾ ಕಾರ್ಯಕ್ರಮ ರದ್ದು
ರಾಮನವಮಿ ಮೆರವಣಿಗೆಯ ಸಮಯದಲ್ಲಿ ಭುಗಿಲೆದ್ದ ಇತ್ತೀಚಿನ ಘರ್ಷಣೆಯ ನಂತರ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಿದ್ದು ಮತ್ತು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಹೇರಿದ ನಂತರ ಶಾ ಭೇಟಿಯನ್ನು ರದ್ದು ಮಾಡಲಾಗಿದೆ.
ಬಿಹಾರದ (Bihar) ರೋಹ್ತಾಸ್ ಜಿಲ್ಲೆಯ ಸಸಾರಾಮ್‌ಗೆ (Sasaram) ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಭೇಟಿ ರದ್ದಾಗಿದೆ. ರಾಮನವಮಿ ಮೆರವಣಿಗೆಯ ಸಮಯದಲ್ಲಿ ಭುಗಿಲೆದ್ದ ಇತ್ತೀಚಿನ ಘರ್ಷಣೆಯ ನಂತರ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಿದ್ದು ಮತ್ತು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಹೇರಿದ ನಂತರ ಶಾ ಭೇಟಿಯನ್ನು ರದ್ದು ಮಾಡಲಾಗಿದೆ. ಬಿಹಾರಕ್ಕೆ ಎರಡು ದಿನಗಳ ಭೇಟಿಗಾಗಿ ಶಾ ಶನಿವಾರ ಸಂಜೆ ಪಾಟ್ನಾಗೆ ಆಗಮಿಸಬೇಕಿತ್ತು, ಅಲ್ಲಿ ಅವರು ಭಾನುವಾರ ಎರಡು ಜಿಲ್ಲೆಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಬಿಜೆಪಿ ಬಿಹಾರ ಘಟಕವು ಭೇಟಿಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಶಾ ಅವರು ಸಂಜೆ 6.30 ರ ಸುಮಾರಿಗೆ ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆಯಿದೆ, ಅಲ್ಲಿ ಬಿಹಾರದ ಹಿರಿಯ ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರು ಅವರನ್ನು ಸ್ವಾಗತಿಸಬೇಕಿತ್ತು.
ರದ್ದಾದ ವೇಳಾಪಟ್ಟಿಯಲ್ಲಿರುವಂತೆ, ಶಾ ಅವರು ಭಾನುವಾರ ಅಶೋಕ ಚಕ್ರವರ್ತಿಯ ಜನ್ಮ ವಾರ್ಷಿಕೋತ್ಸವ ಆಚರಣೆಗಾಗಿ ರೋಹ್ತಾಸ್ ಜಿಲ್ಲೆಯ ಸಸಾರಾಮ್ ಮತ್ತು ನವಾಡದ ಹಿಸುವಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವವರಿದ್ದರು.
ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ, ಶನಿವಾರ ಸಂಜೆ ಪಾಟ್ನಾ ತಲುಪಲಿರುವ ಶಾ, ನಿಗದಿಯಂತೆ ಭಾನುವಾರ ನವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು. ಬಿಹಾರದ ಸಸಾರಾಮ್‌ನಲ್ಲಿ ಚಕ್ರವರ್ತಿ ಅಶೋಕನ ಜನ್ಮದಿನವನ್ನು ಆಚರಿಸಲು ಆಯೋಜಿಸಲಾದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ:Defence Exports: ದಾಖಲೆ ಮಟ್ಟದಲ್ಲಿ ರಕ್ಷಣಾ ರಫ್ತು; ರಾಜನಾಥ್ ಸಿಂಗ್, ಮೋದಿ ಹರ್ಷ
ನಿತೀಶ್ ಕುಮಾರ್ ಆಡಳಿತದ ಮೇಲೆ ಹಿಡಿತ ಹೊಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಾದ ನಲಂದಾದಲ್ಲಿರುವ ಬಿಹಾರ್ ಷರೀಫ್ ಕೂಡ ಪ್ರಕ್ಷುಬ್ಧವಾಗಿದೆ. ಹಾಗೆಯೇ ರಾಜ್ಯದ ಇತರ ಹಲವು ಭಾಗಗಳಲ್ಲಿಯೂ ಇದೇ ಸ್ಥಿತಿ ಇದೆ ಎಂದು ಚೌಧರಿ ಆರೋಪಿಸಿದರು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಪಡೆಗಳನ್ನು ಒದಗಿಸುವ ಪ್ರಸ್ತಾಪದೊಂದಿಗೆ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದರು. ಆದರೆ ಇಡೀ ಆಡಳಿತ ನಿದ್ರಾ ಸ್ಥಿತಿಯಲ್ಲಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಆಡಳಿತಾರೂಢ ಜೆಡಿಯು ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ ಶಾ ರಾಜ್ಯಕ್ಕೆ ನೀಡಿದ ನಾಲ್ಕನೇ ಭೇಟಿ ಇದಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Sat, 1 April 23